Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಚಾಂಪಿಯನ್ಸ್‌ ಲೀಗ್‌: ಮೆಸ್ಸಿ ಮ್ಯಾಜಿಕ್‌, ಬಾರ್ಸಿಲೋನಾಗೆ ಜಯ

Messi brace leads Barca to 3-0 win over Liverpool

ಸೆಮಿಫೈನಲ್ಸ್‌ನ ಪ್ರಥಮ ಚರಣದ ಪಂದ್ಯದಲ್ಲಿ ಲಿವರ್‌ಪೂಲ್‌ ಎದುರು 3-0 ಗೋಲ್‌ಗಳ ಗೆಲುವು

ಬಾರ್ಸಿಲೋನಾ, ಮೇ 02: ಸ್ಟಾರ್‌ ಆಟಗಾರ ಲಿಯೋನೆಲ್‌ ಮೆಸ್ಸಿ ಗಳಿಸಿದ ಡಬಲ್‌ ಗೋಲ್‌ಗಳ ಬಲದಿಂದ ಮಿಂಚಿದ ಎಫ್‌ಸಿ ಬಾರ್ಸಿಲೋನಾ ತಂಡ, ಇಲ್ಲಿ ನಡೆದ ಚಾಂಪಿಯನ್ಸ್‌ ಲೀಗ್‌ ಫುಟ್ಬಾಲ್‌ ಟೂರ್ನಿಯ ಸೆಮಿಫೈನಲ್ಸ್‌ನ ಮೊದಲ ಚರಣದ ಪಂದ್ಯದಲ್ಲಿ ಲಿವರ್‌ಪೂಲ್‌ ಎದುರು 3-0 ಗೋಲ್‌ಗಳ ಭರ್ಜರಿ ಜಯ ದಾಖಲಿಸಿದೆ.

ಪಂದ್ಯದಲ್ಲಿ ಅಕ್ಷರಶಃ ಅಧಿಕಾರಯುತ ಪ್ರದರ್ಶನ ನೀಡಿದ ಎಫ್‌ಸಿ ಬಾರ್ಸಿಲೋನಾ ತಂಡ, ಮುಂದಿನ ವಾರ ಆನ್ಫೀಲ್ಡ್‌ನಲ್ಲಿ ನಡೆಯಲಿರುವ ಸೆಮಿಫೈನಲ್ಸ್‌ನ 2ನೇ ಚರಣದ ಪಂದ್ಯದಲ್ಲೂ ಸ್ಥಿರತೆ ಕಾಯ್ದುಕೊಂಡು ಲಿವರ್‌ಪೂಲ್‌ ಎದುರು ಮೇಲುಗೈ ಸಾಧಿಸಬೇಕಿದೆ.

ಇದು ಸಾಧ್ಯವಾದಲ್ಲಿ ಯುರೋಪ್‌ನ ದೈತ್ಯ ಫುಟ್ಬಾಲ್‌ ಕ್ಲಬ್‌ಗಳ ಕಾಳಗವಾದ ಚಾಂಪಿಯನ್ಸ್‌ ಲೀಗ್‌ನಲ್ಲಿ ಸತತ 2ನೆ ಬಾರಿ ಎಫ್‌ಸಿಬಿ ಫೈನಲ್‌ ತಲುಪಿದಂತಾಗುತ್ತದೆ. ಕಳೆದ ವರ್ಷ ಫೈನಲ್‌ನಲ್ಲಿ ತನ್ನ ಬದ್ಧ ಎದುರಾಳಿ ರಿಯಲ್‌ ಮ್ಯಾಡ್ರಿಡ್‌ ಎದುರು ಬಾರ್ಸಿಲೋನಾ ತಂಡ ನಿರಾಸೆ ಅನುಭವಿಸಿತ್ತು.

ಇನ್ನು ಬುಧವಾರ ತಡರಾತ್ರಿ ನಡೆದ ಹೈವೋಲ್ಟೇಜ್‌ ಪಂದ್ಯದಲ್ಲಿ ಇಲ್ಲಿನ ಕ್ಯಾಂಪ್‌ನೌ ಕ್ರೀಡಾಂಗಣದಲ್ಲಿ ಸೇರಿದ್ದ 98,000 ಸಾವಿರ ಪ್ರೇಕ್ಷಕರ ಎದುರು ಬಾರ್ಸಿಲೋನಾ ಪರ ಮೆಸ್ಸಿ 75ನೇ ಮತ್ತು 82ನೇ ನಿಮಿಷಗಳಲ್ಲಿ ಚೆಂಡನ್ನು ಗುರಿ ಮುಟ್ಟಿಸಿ ಜಯದ ರೂವಾರಿ ಎನಿಸಿದರು. ಇದಕ್ಕೂ ಮುನ್ನ ಪಂದ್ಯದ ಪ್ರಥಮಾರ್ಧದಲ್ಲಿ ಸ್ಟಾರ್‌ ಸ್ಟ್ರೈಕರ್‌ ಲೂಯಿಸ್‌ ಸ್ವಾರೆಸ್‌ (26ನೇ ನಿ.) ಮೊದಲ ಯಶಸ್ಸು ತಂದುಕೊಟ್ಟರು.

ಆರಂಭದಲ್ಲಿ ಲಿವರ್‌ಪೂಲ್‌ ಉತ್ತಮ ಆಟ

ಪ್ರವಾಸಿ ಲಿವರ್‌ಪೂಲ್‌ ತಂಡ ಪಂದ್ಯದ ಪ್ರಥಮಾರ್ಧದ 15 ನಿಮಿಷಗಳಲ್ಲಿಆತಿಥೇಯ ಬಾರ್ಸಿಲೋನಾ ತಂಡದ ಮೇಲೆ ಸತತವಾಗಿ ಒತ್ತಡ ಹೇರಿತ್ತು. ಪರಿಣಾಮ ಬಾರ್ಸಿಲೋನಾ ತಂಡ ಗೋಲ್‌ಗಳಿಕೆಗೆ ಪ್ರಯತ್ನ ನಡೆಸುವಲ್ಲಿ ವಿಫಲವಾಗಿ ರಕ್ಷಣಾತ್ಮಕ ಆಟಕ್ಕೆ ಒತ್ತು ನೀಡುವಂತಾಗಿತ್ತು. ಇದರಿಂದಾಗಿ ತನ್ನ ತಂತ್ರಗಾರಿಕೆಯಲ್ಲಿ ಕೊಂಚ ಬದಲಾವಣೆ ತಂದ ಎಫ್‌ಸಿಬಿ ತಂಡ ಮೆಸ್ಸಿ ಅವರನ್ನು ಮಿಡ್‌ಫೀಲ್ಡ್‌ ವಿಭಾಗದಲ್ಲಿ ಹೆಚ್ಚು ಆಡುವಂತೆ ಮಾಡಿತು. ನಂತರ ತಮ್ಮ ಕಾಲ್ಚಳಕ ಪ್ರದರ್ಶಿಸಿದ ಮೆಸ್ಸಿ ಎರಡು ಬಾರಿ ಗೋಲ್‌ ಗಳಿಕೆಯ ಅವಕಾಶ ಸೃಷ್ಠಿಸಿದರಾದರೂ, ಆದರೆ, ಸಹ ಆಟಗಾರ ಫಿಲಿಪ್‌ ಕೌಟಿನೋ ಚೆಂಡನ್ನು ಗೋಲ್‌ ಪೆಟ್ಟಿಗೆ ಸೇರಿಸುವಲ್ಲಿ ವಿಫಲರಾದರು.

ಅವಕಾಶ ಬಳಸಿಕೊಂಡ ಸ್ವಾರೆಸ್

ಬಾರ್ಸಿಲೋನಾ ತಂಡದ ಚಾಕಚಕ್ಯತೆ ಎದುರು ಕಂಗಾಲಾಗಿದ್ದ ಲಿವರ್‌ ಪೂಲ್‌ ತಂಡಕ್ಕೆ ಗಾಯದ ಮೇಲೆ ಬರೆ ಎಂಬಂತೆ ಅನುಭವಿ ಮಿಡ್‌ಫೀಲ್ಡರ್‌ ನಬಿ ಕೀಟಾ ಗಾಯಗೊಂಡು ಹೊರ ನಡೆದರು. ಇದು ಲಿವರ್‌ಪೂಲ್‌ ತಂಡದ ಬಲವನ್ನು ಗಣನೀಯವಾಗಿ ತಗ್ಗಿಸಿತು. ಕೀಟಾ ಹೊರನಡೆಯುತ್ತಿದ್ದಂತೆಯೇ ಒತ್ತಡವನ್ನು ಮತ್ತಷ್ಟು ಹೆಚ್ಚಿಸಿದ ಎಫ್‌ಸಿಬಿ, 27ನೇ ನಿಮಿಷದಲ್ಲಿ ಮೊದಲ ಗೋಲ್‌ನ ಸವಿಯುಂಡಿತು. ಜೋರ್ಡಿ ಆಲ್ಬಾ ತಂದುಕೊಟ್ಟ ಚೆಂಡು ಎದುರಾಳಿಯ ಡಿಫೆಂಡರ್‌ಗೆ ತಗುಲಿ ಬೇರೆಡೆ ಚಿಮ್ಮಿದ ಸಂದರ್ಭದಲ್ಲಿ ಸಮಯ ಪ್ರಜ್ಞೆಯೊಂದಿಗೆ ಸಿಕ್ಕ ಅವಕಾಶ ಬಳಸಿಕೊಂಡ ಸ್ಟ್ರೈಕರ್‌ ಲೂಯಿ ಸ್ವಾರೆಸ್‌ ಗೋಲ್‌ ದಾಖಲಿಸಿದರು. ಇದು ಚಾಂಪಿಯನ್ಸ್‌ ಲೀಗ್‌ನಲ್ಲಿ 2018ರ ಏಪ್ರಿಲ್‌ ಬಳಿಕ ಸ್ವಾರೆಸ್‌ ಗಳಿಸಿದ ಮೊದಲ ಗೋಲ್‌ ಆಗಿದೆ.

ಲಿಯೋನೆಲ್‌ ಮೆಸ್ಸಿ ಕಾಲ್ಚಳಕ

ತಾವು ಸಾರ್ವಕಾಲಿಕ ಶ್ರೇಷ್ಠ ಫುಟ್ಬಾಲರ್‌ ಯಾಕೆ ಎಂಬುದನ್ನು ಎದುರಾಳಿ ತಂಡದವರಿಗೆ ಮನವರಿಕೆ ಮಾಡಿಕೊಟ್ಟ31 ವರ್ಷದ ಅರ್ಜೆಂಟೀನಾ ಆಟಗಾರ ಮೆಸ್ಸಿ, ಪಂದ್ಯದ ಎರಡನೇ ಅವಧಿಯಲ್ಲಿ ಎರಡು ಅದ್ಭುತ ಗೋಲ್‌ಗಳೊಂದಿಗೆ ಮನಸೂರೆಗೊಂಡರು. 75ನೇ ನಿಮಿಷದಲ್ಲಿ ಏಕಾಂಗಿಯಾಗಿ ಮುನ್ನುಗ್ಗಿದ ಮೆಸ್ಸಿ, ನೋಡನೋಡುತ್ತಿದ್ದಂತೆಯೇ ತಂಡದ ಮುನ್ನಡೆಯನ್ನು 2-0ಗೆ ವಿಸ್ತರಿಸಿಬಿಟ್ಟರು. ಬಳಿಕ ಲಿವರ್‌ಪೂಲ್‌ ತಂಡದ ಡಿಫೆಂಡರ್‌ಗಳಿಗೆ ಚಳ್ಳೆಹಣ್ಣು ತಿನ್ನಿಸುವುದನ್ನು ಮುಂದುವರಿಸಿದ ಲಿಯೋ, 83ನೇ ನಿಮಿಷದಲ್ಲಿ ಸಿಕ್ಕ ಫ್ರೀ ಕಿಕ್‌ನಲ್ಲಿ ಅದ್ಭುತ ಗೋಲ್‌ ದಾಖಲಿಸಿ ತಂಡಕ್ಕೆ ಭರ್ಜರಿ ಗೆಲುವಿನ ಉಡುಗೊರೆ ನೀಡಿದರು.

ಲಿವರ್‌ಪೂಲ್‌ಗೆ ಇನ್ನೂ ಅವಕಾಶ

ಲಿವರ್‌ಪೂಲ್‌ ತಂಡ ಬಲಿಷ್ಠ ಎಫ್‌ಸಿ ಬಾರ್ಸಿಲೋನಾ ಎದುರು ಸೆಮಿಫೈನಲ್‌ನ ಮೊದಲ ಚರಣದಲ್ಲಿ 0-3ರ ಸೋಲುಂಡಿದೆ. ಆದರೂ, ತಂಡಕ್ಕೆ ಫೈನಲ್‌ ತಲುಪುವ ಅವಕಾಶದ ಬಾಗಿಲು ಇನ್ನೂ ತೆರೆದಿದೆ. ಆನ್ಫೀಲ್ಡ್‌ನಲ್ಲಿ ಮೇ 8ರಂದು ನಡೆಯಲಿರುವ 2ನೇ ಚರಣದ ಸೆಮಿಫೈನಲ್‌ ಪಂದ್ಯದಲ್ಲಿ ತವರಿನ ಪ್ರೇಕ್ಷಕರ ಬೆಂಬಲದೊಂದಿಗೆ 4 ಗೋಲ್‌ಗಳ ಅಂತರದಲ್ಲಿ ಲಿವರ್‌ಪೂಲ್‌ ಜಯ ದಾಖಲಿಸಿದರೆ ಫೈನಲ್‌ಗೆ ರಹದಾರಿ ಪಡೆಯಲಿದೆ. ಉದಾಹರಣೆಗೆ ಲಿವರ್‌ಪೂಲ್‌ ತಂಡ 4-0 ಅಂತರದಲ್ಲಿ ಗೆದ್ದರೆ ಪ್ರಶಸ್ತಿ ಸುತ್ತಿಗೆ ಲಗ್ಗೆಯಿಡಲು ಸಾಧ್ಯವಾಗಲಿದೆ.

Story first published: Thursday, May 2, 2019, 13:29 [IST]
Other articles published on May 2, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+