
ಲಿಸ್ಬನ್, ಆಗಸ್ಟ್ 22: ಫುಟ್ಬಾಲ್ ಅಂಗಳದಲ್ಲಿ ದೀರ್ಘ ಕಾಲದಿಂದ ಪ್ರಮುಖ ಎದುರಾಳಿಯಾಗಿದ್ದ ಅರ್ಜೆಂಟೀನಾ ಫುಟ್ಬಾಲ್ ದಂತಕತೆ ಲಿಯೋನೆಲ್ ಮೆಸ್ಸಿ ಬಗ್ಗೆ ಪೋರ್ಚುಗಲ್ ದೈತ್ಯ ಕ್ರಿಸ್ಚಿಯಾನೊ ರೊನಾಲ್ಡೊ ಪ್ರಮುಖ ಹೇಳಿಕೆ ನೀಡಿದ್ದಾರೆ. ಮೆಸ್ಸಿಯಿಂದಲೇ ತಾನು ಉತ್ತಮ ಆಟಗಾರನಾಗಲು ಸಾಧ್ಯವಾಯಿತು ಎಂದು ರೊನಾಲ್ಡೊ ಹೇಳಿದ್ದಾರೆ.
'ಮೆಸ್ಸಿ ವೃತ್ತಿ ಬದುಕಿನ ಬಗ್ಗೆ ನನಗೆ ನಿಜಕ್ಕೂ ಮೆಚ್ಚುಗೆಯಿದೆ. ನಾನು ಸ್ಪೇನ್ ತಂಡ ಬಿಟ್ಟಾಗ ಮೆಸ್ಸಿ ಬೇಸರದ ಮಾತುಗಳನ್ನಾಡಿದ್ದರು. ಇಂಥ ವಿಚಾರಕ್ಕೆ ಎದುರಾಳಿಯಾದರೂ ಮೆಸ್ಸಿ ಮೆಚ್ಚೆನಿಸುತ್ತಾರೆ,' ಎಂದು ಪೋರ್ಚುಗಲ್ ಟಿವಿ ಜೊತೆ ಮಾತನಾಡುತ್ತ ರೊನಾಲ್ಡೊ ಹೇಳಿಕೊಂಡರು.
'ನಾವಿಬ್ಬರೂ ಉತ್ತಮ ಎದುರಾಳಿಗಳು, ಆದರೆ ಅನನ್ಯ ಅಂತೇನಲ್ಲ. ಯಾಕೆಂದರೆ ಬಾಸ್ಕೆಟ್ ಬಾಲ್‌ಗೆ ಬಂದರೆ ಅಲ್ಲಿ ಮೈಕೆಲ್ ಜೋರ್ಡನ್‌ಗೆ ಪ್ರಮುಖ ಎದುರಾಳಿಯಿದ್ದರು, ಫಾರ್ಮುಲಾ 1ರಲ್ಲಿ ಐರ್ಟನ್ ಸೆನ್ನಾಗೆ ಅಲೈನ್ ಪ್ರೊಸ್ಟ್ ಪ್ರಮುಖ ಸ್ಪರ್ಧೆಯೊಡ್ಡುತ್ತಿದ್ದರು,' ಎಂದು ರೊನಾಲ್ಡೊ ಕ್ರೀಡಾ ಲೋಕದ ಪ್ರಬಲ ಎದುರಾಳಿಗಳನ್ನು ಸ್ಮರಿಸಿಕೊಂಡರು.
'ನಾನು ವಿಶ್ವದ ಅತ್ಯುತ್ತಮ ಆಟಗಾರ ಅನ್ನಿಸುವಲ್ಲಿ ಮೆಸ್ಸಿ ಪ್ರಮುಖ ವ್ಯಕ್ತಿ ಅನ್ನೋದರಲ್ಲಿ ಅನುಮಾನವೇ ಇಲ್ಲ. ನಾನು ಟ್ರೋಫಿ ಗೆದ್ದಾಗ ಲಿಯೋನೆಲ್‌ಗೆ ಕುಟುಕಿದಂತಾಗುತ್ತಿತ್ತು, ಅದೇ ಆತ ಗೆದ್ದಾಗ ನನ್ನಲ್ಲೂ ಇಂಥದ್ದೇ ಭಾವನೆ ಮೂಡುತ್ತಿತ್ತು. ಅಂತೂ ಆರೋಗ್ಯವಂತ ಸ್ಪರ್ಧೆ ನಮ್ಮಲ್ಲಿತ್ತು,' ಎಂದು ಕ್ರಿಸ್ಚಿಯಾನೊ ವಿವರಿಸಿದರು.
ರಿಯಲ್ ಮ್ಯಾಡ್ರಿಡ್ ತೊರೆದಿರುವ ವಿಶ್ವ ಶ್ರೇಷ್ಠ ಫುಟ್ಬಾಲರ್ ರೊನಾಲ್ಡೋ ಈಗ ಇಟಲಿ ಮೂಲದ ಯುವೆಂಟಸ್ ತಂಡ ಪ್ರತಿನಿಧಿಸುತ್ತಿದ್ದಾರೆ. ಈಚಿನ ದಿನಗಳಲ್ಲಿ ರೊನಾಲ್ಡೋ ಮಾತನಾಡುತ್ತಿರುವುದು ಗಮನಸಿದರೆ, ಅವರು ಫುಟ್ಬಾಲ್ ವೃತ್ತಿ ಬದುಕಿಗೆ ವಿದಾಯ ಹೇಳಲಿದ್ದಾರೆ ಎನ್ನುವಂತಿದೆ.