ಫುಟ್ಬಾಲ್: ಬೈಚುಂಗ್ ಭುಟಿಯಾ ದಾಖಲೆ ಮುರಿದ ನರೇಂದ್ರ ಗೆಹ್ಲೋಟ್

ಅಹ್ಮದಾಬಾದ್, ಜುಲೈ 17: ಭಾರತೀಯ ಫುಟ್ಬಾಲ್ ಇತಿಹಾಸದಲ್ಲಿ ಅಂತಾರಾಷ್ಟ್ರೀಯ ಗೋಲ್ ದಾಖಲಿಸಿದ ಎರಡನೇ ಅತ್ಯಂತ ಕಿರಿಯ ವಯಸ್ಸಿನ ಆಟಗಾರ ಎಂಬ ಹೆಗ್ಗಳಿಕೆಗೆ 18 ವರ್ಷದ ಯುವ ತಾರೆ ನರೇಂದ್ರ ಗೆಹ್ಲೋಟ್ ಪಾತ್ರರಾಗಿದ್ದಾರೆ.
ಭಾರತ ತಂಡದ ಪರ ಅಂತಾರಾಷ್ಟ್ರೀಯ ಗೋಲ್ ದಾಖಲಿಸಿದ ಎರಡನೇ ಅತಿ ಕಿರಿಯ ವಯಸ್ಸಿನ ಆಟಗಾರ ಎಂಬ ದಾಖಲೆ ಈ ಮೊದಲು ಭಾರತ ತಂಡದ ಮಾಜಿ ನಾಯಕ ಬೈಚುಂಗ್ ಭುಟಿಯಾ ಅವರ ಹೆಸರಲ್ಲಿತ್ತು. ಭುಟಿಯಾ 1995ರ ನೆಹರೂ ಕಪ್ ಫುಟ್ಬಾಲ್ ಟೂರ್ನಿಯಲ್ಲಿ ತಮ್ಮ 18 ವರ್ಷ, 103 ದಿನಗಳ ವಯಸ್ಸಿನಲ್ಲಿ ಮೊದಲ ಅಂತಾರಾಷ್ಟ್ರೀಯ ಗೋಲ್ ದಾಖಲಿಸಿದ್ದರು.
ಇದೀಗ ಇಲ್ಲಿನ ಇಕೆಆರ್ ಅರೆನಾದಲ್ಲಿ ನಡೆದ ಇಂಟರ್ ಕಾಂಟಿನೆಂಟಲ್ ಕಪ್ ಟೂರ್ನಿಯ ಫುಟ್ಬಾಲ್ ಪಂದ್ಯದಲ್ಲಿ ಸಿರಿಯಾ ವಿರುದ್ಧ ಭಾರತದ ಪರ ಏಕೈಕ ಗೋಲ್ ದಾಖಲಿಸಿದ 18 ವರ್ಷ 83 ದಿನ ವಯಸ್ಸಿನ ಡಿಫೆಂಡರ್ ಗೆಹ್ಲೋಟ್ ಈ ದಾಖಲೆಯನ್ನು ತಮ್ಮದಾಗಿಸಿಕೊಂಡರು. ಇದು ಟೂರ್ನಿಯಲ್ಲಿ ಭಾರತ ತಂಡದ ಕೊನೆಯ ಲೀಗ್ ಪಂದ್ಯವಾಗಿದ್ದು 1-1ರ ಸಮಬಲದಲ್ಲಿ ಅಂತ್ಯಗೊಂಡಿತು.
ಇದಕ್ಕೂ ಮುನ್ನ ತಜಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತ ತಂಡದ ಪರ ಪದಾರ್ಪಣೆ ಮಾಡಿದ್ದ ಗೆಹ್ಲೋಟ್, 51ನೇ ನಿಮಿಷದಲ್ಲಿ ಸಹ ಆಟಗಾರ ಅನಿರುದ್ಧ್ ಥಾಪಾ ಕಾರ್ನರ್ ಕಿಕ್ ಮೂಲಕ ಗೋಲ್ ಪೆಟ್ಟಿಗೆಯ ಕಡೆಗೆ ಕಳುಹಿಸಿದ ಚೆಂಡನ್ನು ಗೆಹ್ಲೋಟ್ ಅದ್ಭುತ ಹೆಡರ್‌ನೊಂದಿಗೆ ಗುರಿ ಮುಟ್ಟುವಂತೆ ಮಾಡಿದ್ದರು. ಇದರೊಂದಿಗೆ ಭಾರತ ತಂಡ ಪಂದ್ಯದಲ್ಲಿ 1-0 ಅಂತರದ ಮೇಲುಗೈ ಪಡೆಯಿತು.
ಇದರೊಂದಿಗೆ ಭಾರತ ತಂಡ ಗೆಲುವನ್ನು ಎದುರು ನೋಡುತಿತ್ತಾದರೂ, 78ನೇ ನಿಮಿಷದಲ್ಲಿ ಸಿರಿಯಾ ಪರ ಫಿರಾಸ್ ಅಲ್ ಖಾತಿಬ್ ಪೆನಾಲ್ಟಿ ಕಿಕ್ ಅವಕಾಶದಲ್ಲಿ ಗೋಲ್ ದಾಖಲಿಸಿದರಿಂದ ಭಾರತ ತಂಡ ಲೆಕ್ಕಾಚಾರಗಳೆಲ್ಲಾ ತಿರುಗಿ ಡ್ರಾ ಫಲಿತಾಂಶಕ್ಕೆ ತೃಪ್ತಿ ಪಡುವಂತಾಯಿತು.
ಅಂದಹಾಗೆ ಭಾರತ ತಂಡದ ಪರ ಅಂತಾರಾಷ್ಟ್ರೀಯ ಗೋಲ್ ದಾಖಲಿಸಿದ ಅತಿ ಕಿರಿಯ ವಯಸ್ಸಿನ ಆಟಗಾರ ಎಂಬ ದಾಖಲೆ ಮಿಜೋರಾಂನ ಜೆರ್ರಿ ಝಿರ್ಸಾಂಗಾ ಅವರ ಹೆಸರಲ್ಲಿದೆ. ಜೆರ್ರಿ 2004ರಲ್ಲಿ ಕುವೈತ್ ವಿರುದ್ಧದ ಅಂತಾರಾಷ್ಟ್ರೀಯ ಸೌಹಾರ್ದ ಪಂದ್ಯದಲ್ಲಿ ಭಾರತ ತಂಡದ ಪರ ಗೋಲ್ ದಾಖಲಿಸಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications