981 ದಿನಗಳ ಬಳಿಕ ಮೈದಾನಕ್ಕೆ ಇಳಿದ ನೇಮರ್ ಕಣ್ಣಲ್ಲಿ ನೀರು
ಬ್ರೆಜಿಲ್ ತಂಡಕ್ಕೆ ನೇಮರ್ ಜೂನಿಯರ್ ಮತ್ತೆ ಮರಳಿದ್ದಾರೆ. ಫಿಫಾ ವಿಶ್ವಕಪ್ 2026ರ ಸಿ ಗುಂಪಿನ ಪಂದ್ಯದಲ್ಲಿ ಬ್ರೆಜಿಲ್ ಹಾಗೂ ಸ್ಕಾಟ್ಲೆಂಡ್ ವಿರುದ್ಧದ ಪಂದ್ಯದಲ್ಲಿ ನೇಮರ್ ಕಣಕ್ಕೆ ಇಳಿದರು. ಈ ಮೂಲಕ 34 ವರ್ಷದ ನೇಮರ್ ಹಳದಿ ಜೆರ್ಸಿಯಲ್ಲಿ ಮತ್ತೊಮ್ಮೆ ದೊಡ್ಡ ವೇದಿಕೆಯಲ್ಲಿ ಆಡಲು ಸಜ್ಜಾಗಿದ್ದಾರೆ. ಇವರು 981 ದಿನಗಳ ಬಳಿಕ ಅಂತಾರಾಷ್ಟ್ರೀಯ ಫುಟ್ಬಾಲ್‌ಗೆ ಮರಳಿದ್ದಾರೆ.
ಬ್ರೆಜಿಲ್ ಮುಖ್ಯ ತರಬೇತುದಾರ ಕಾರ್ಲೊ ಅನ್ಸೆಲೋಟಿ ಸ್ಕಾಟ್ಲೆಂಡ್ ವಿರುದ್ಧದ ವಿಶ್ವಕಪ್ ಪಂದ್ಯಕ್ಕೂ ಮೊದಲು ನೇಮರ್‌ಗೆ ಅವಕಾಶ ಸಿಗುತ್ತದೆ ಎಂದು ತಿಳಿಸಿದ್ದರು. ತರಬೇತುದಾರರ ಈ ಹೇಳಿಕೆ ಅಭಿಮಾನಿಗಳಿಗೆ ಹೊಸ ಹುಮ್ಮಸ್ಸು ನೀಡಿತ್ತು. ಆದರೆ ಪಂದ್ಯದ ಆರಂಭದಲ್ಲಿ ನೇಮರ್ ಕಣಕ್ಕೆ ಇಳಿಯಲಿಲ್ಲ. ಆಗ ಅಭಿಮಾನಿಗಳಿಗೆ ನಿರಾಸೆ ಕಾದಿತ್ತು. ಆದರೆ ಪಂದ್ಯದ 76 ನೇ ನಿಮಿಷದಲ್ಲಿ, ಮ್ಯಾಥ್ಯೂಸ್ ಕುನ್ಹಾ ಬದಲಿಗೆ ನೇಮರ್ ಕಣಕ್ಕೆ ಇಳಿಯುತ್ತಿದ್ದಂತೆ ಮೈದಾನದಲ್ಲಿ ನೆರೆದಿದ್ದ ಅಭಿಮಾನಿಗಳ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು.

ನೇಮರ್ ಹಳದಿ ಜೆರ್ಸಿಯನ್ನು ತೊಟ್ಟು ಮಿಯಾಮಿ ಮೈದಾನದಲ್ಲಿ ಕಣಕ್ಕೆ ಇಳಿಯುತ್ತಿದ್ದಂತೆ ಸಂಚಲನ ಮೂಡಿತು. ಈ ಪಂದ್ಯದಲ್ಲಿ ನೇಮರ್ ಕಣಕ್ಕೆ ಇಳಿಯುತ್ತಿದ್ದಂತೆ ದೊಡ್ಡ ದಾಖಲೆಯನ್ನು ಬರೆದರು. ಇವರು ಸತತ ನಾಲ್ಕನೇ ಫಿಫಾ ವಿಶ್ವಕಪ್ ಆಡಿದ ಹೆಗ್ಗಳಿಕೆ ತಮ್ಮದಾಗಿಸಿಕೊಂಡರು. ಗಾಯದಿಂದ ಚೇತರಿಸಿಕೊಂಡು ಮರಳಿದ ನೇಮರ್‌ಗೆ ಅಭಿಮಾನಿಗಳು ಭಾವನಾತ್ಮಕ ಸ್ವಾಗತ ಕೋರಿದರು. ಮೈದಾನದಲ್ಲಿದ್ದ ಕೇವಲ 15 ನಿಮಿಷಗಳಲ್ಲಿ ನೇಮರ್ ತಮ್ಮ ಹಳೆಯ ಚಾಣಾಕ್ಷತನವನ್ನು ಪ್ರದರ್ಶಿಸಿದರು.
ನೇಮರ್ ಕಣ್ಣಲ್ಲಿ ನೀರು
ಸ್ಕಾಟ್ಲೆಂಡ್ ವಿರುದ್ಧ ಬ್ರೆಜಿಲ್ ಭರ್ಜರಿ ಜಯ ದಾಖಲಿಸುತ್ತಿದ್ದಂತೆ ನೇಮರ್ ಕಣ್ಣುಗಳಲ್ಲಿ ನೀರು ತುಂಬಿಕೊಂಡಿತು. ಇವರ ಕಣ್ಣುಗಳನ್ನು ಒರೆಸಿಕೊಳ್ಳುತ್ತಾ ಭಾವುಕರಾದ ಕ್ಷಣಗಳನ್ನು ಕಂಡು ಅಭಿಮಾನಿಗಳ ಕಣ್ಣಂಚಲ್ಲೂ ನೀರು ತುಂಬಿಕೊಂಡಿತು. ನೇಮರ್, ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ, ಪತ್ನಿ ಮತ್ತು ಮಗಳನ್ನು ಭೇಟಿಯಾದಾಗ ಆ ಕಣ್ಣೀರು ನಗುವಾಗಿ ಬದಲಾಯಿತು. ಮಾಜಿ ನಾಯಕನಿಗೆ ಬುಧವಾರ ಅವರ ಪಾಲಿಗೆ ಸ್ಮರಣೀಯ ದಿನವಾಗಿತ್ತು.
981 ದಿನಗಳ ಬಳಿಕ ಅಂಗಳಕ್ಕೆ
ನೇಮರ್ ಭಾನುವಾರ ಬ್ರೆಜಿಲ್ ಕ್ಯಾಂಪ್ ಜೊತೆಗೆ ಪೂರ್ಣ ತರಬೇತಿ ಆರಂಭಿಸಿದರು. 34 ವರ್ಷ ವಯಸ್ಸಿನ ನೇಮರ್ 129 ಪಂದ್ಯಗಳಲ್ಲಿ 79 ಗೋಲುಗಳನ್ನು ಗಳಿಸಿ ಬ್ರೆಜಿಲ್ ದೇಶದ ಪರ ಗರಿಷ್ಠ ಗೋಲುಗಳನ್ನು ಬಾರಿಸಿದ ಸಾಧಕರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಬ್ರೆಜಿಲ್‌ನ ಸಾರ್ವಕಾಲಿಕ ಗರಿಷ್ಠ ಗೋಲು ಸರದಾರ ನೇಮರ್, ಪೀಲೆ ದಾಖಲೆಯನ್ನು ಮುರಿದ ಶ್ರೇಷ್ಠ ಆಟಗಾರ. ಒಲಿಂಪಿಕ್ ಚಿನ್ನ, ಚಾಂಪಿಯನ್ಸ್ ಲೀಗ್ ಗೆದ್ದಿರುವ ಇವರು, ಅದ್ಭುತ ಡ್ರಿಬ್ಲಿಂಗ್ ಶೈಲಿಯಿಂದ ವಿಶ್ವದ ಅತ್ಯಂತ ದುಬಾರಿ ಹಾಗೂ ಜನಪ್ರಿಯ ಫುಟ್‌ಬಾಲಿಗನಾಗಿದ್ದಾರೆ.
2023ರ ಅಕ್ಟೋಬರ್‌ನಲ್ಲಿ ಎದುರಾದ ಭೀಕರ ಮೊಣಕಾಲು ಗಾಯ ನೇಮರ್ ಅವರನ್ನು ಫುಟ್‌ಬಾಲ್ ಲೋಕದಿಂದ ದೂರವಿಟ್ಟಿತ್ತು. ಹಲವರು ನೇಮರ್ ಕಥೆ ಮುಗಿಯಿತು ಎಂದುಕೊಂಡಿದ್ದರು. ಆದರೆ, ಬರೋಬ್ಬರಿ 981 ದಿನಗಳ ಕಠಿಣ ಪುನಶ್ಚೇತನದ ಬಳಿಕ, 2026ರ ವಿಶ್ವಕಪ್‌ನಲ್ಲಿ ಅವರು ಮತ್ತೆ ಮೈದಾನಕ್ಕೆ ಮರಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications