
ಪ್ಯಾರಿಸ್, ಏಪ್ರಿಲ್ 30: ಕಳೆದ ಸಾರಿ ಫೀಫಾ ವಿಶ್ವಕಪ್ ಟೂರ್ನಿಯಲ್ಲಿ ಫ್ರಾನ್ಸ್‌ಗೆ ಚಾಂಪಿಯನ್ ಪಟ್ಟ ಗೆದ್ದುಕೊಟ್ಟಿದ್ದ ಪೌಲ್ ಪೋಗ್ಬಾ ಫೈನಲ್ ಪಂದ್ಯದಲ್ಲಿ ಮೈದಾನಕ್ಕಿಳಿದು ಸೆಣಸಾಡಿದ್ದ ಶೂ, ಸೋಮವಾರ (ಏಪ್ರಿಲ್ 29) ನಡೆದ ಪ್ಯಾರಿಸ್ ಹರಾಜಿನಲ್ಲಿ ಬರೋಬ್ಬರಿ 30,000 ಯೂರೋಸ್‌ಗೆ ಹರಾಜಾಗಿದೆ.
ಈಗ ನಡೆಯುತ್ತಿರುವ (ಇಂಗ್ಲಿಷ್) ಪ್ರೀಮಿಯರ್ ಲೀಗ್ (ಇಪಿಎಲ್)ನಲ್ಲಿ ಮ್ಯಾನ್ಚೆಸ್ಟರ್ ಯುನೈಟೆಡ್ ಮಿಡ್‌ಫೀಲ್ಡರ್ ಆಗಿರುವ ಪೋಗ್ಬಾ, 2018ರ ಫೀಫಾ ವಿಶ್ವಕಪ್ ಫೈನಲ್‌ನಲ್ಲಿ ಫ್ರಾನ್ಸ್ ಪರ 3ನೇ ಗೋಲ್ ಬಾರಿಸಿದ್ದರು. ಈ ಪಂದ್ಯದಲ್ಲಿ ಫ್ರಾನ್ಸ್ ತಂಡ ಕ್ರೊವೇಷಿಯಾ ಎದುರು 4-2 ಗೋಲ್‌ನೊಂದಿಗೆ ಚಾಂಪಿಯನ್ ಆಗಿ ಮಿನುಗಿತ್ತು.
ಪ್ರತಿಷ್ಠಿತ ಟೂರ್ನಿಯ ಫೈನಲ್‌ನಲ್ಲಿ ಆಡಿದ ಶೂವನ್ನು ಮಾರಿ ಸಿಕ್ಕ (ಸುಮಾರು 23,42,520 ರೂ.) ಹಣವನ್ನು ಪೋಗ್ಬಾ ಫ್ರೆಂಚ್ ಚಾರಿಟಿಯೊಂದಕ್ಕೆ ದಾನವಾಗಿ ನೀಡಿದ್ದಾರೆ. ಈ ಚಾರಿಟಿ ಸಂಸ್ಥೆ ಕಷ್ಟದಲ್ಲಿರುವ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ನೆರವು ನೀಡುತ್ತಿದೆ. ಹರಾಜು ನಡೆಸಿದ ಕ್ರಿಸ್ಟೀಸ್ ಆಕ್ಷನ್ ಹೌಸ್ ಅದೇ ಶೂ 35,000 ದಿಂದ 50,000 ಯೂರೋಸ್‌ಗೆ ಹರಾಜಾಗುವುದನ್ನು ನಿರೀಕ್ಷಿಸಿತ್ತು.