
ನವದೆಹಲಿ, ಮೇ 31: ಬಾಂಬು, ಗುಂಡುಗಳ ಸದ್ದು ಸದಾ ಕೇಳುವ ಜಮ್ಮು ಮತ್ತು ಕಾಶ್ಮೀರದಲ್ಲಿ ಈಗ ಕಾಲ್ಚೆಂಡಿನಾಟದ ಸದ್ದೂ ಕೇಳಿಬರುತ್ತಿದೆ. ಕಾಶ್ಮೀರವನ್ನು ಫುಟ್‌ಬಾಲ್‌ನ ಸ್ವರ್ಗವನ್ನಾಗಿಸುವ ಬಯಕೆ ವ್ಯಕ್ತಪಡಿಸಿದ್ದಾರೆ ರಿಯಲ್ ಕಾಶ್ಮೀರ್ ಎಫ್‌ಸಿ ತಂಡದ ಸಹ ಮಾಲೀಕ ಸಂದೀಪ್ ಚಟ್ಟೂ.
ಐ-ಲೀಗ್‌ನಲ್ಲಿ ಜಮ್ಮು ಮತ್ತು ಕಾಶ್ಮೀರ ತಂಡವನ್ನು ಪ್ರತಿನಿಧಿಸುತ್ತಿರುವ ಮೊದಲ ತಂಡ ಎಂಬ ಹೆಗ್ಗಳಿಕೆಗೆ ರಿಯಲ್ ಕಾಶ್ಮೀರ್ ಪಾತ್ರವಾಗಿದೆ.
ಬೆಂಗಳೂರಿನಲ್ಲಿ ಎರಡನೆಯ ಡಿವಿಷನ್ ಲೀಗ್‌ನಲ್ಲಿ ದೆಹಲಿಯ ಹಿಂದೂಸ್ತಾನ್ ಎಫ್‌ಸಿ 3 ತಂಡವನ್ನು ಪರಾಭವಗೊಳಿಸುವ ಮೂಲಕ ಶ್ರೀನಗರದ ರಿಯಲ್ ಕಾಶ್ಮೀರ್ ತಂಡವು ಉನ್ನತ ಮಟ್ಟದಲ್ಲಿ ಆಡುವ ಅವಕಾಶ ಗಿಟ್ಟಿಸಿದ ಕಾಶ್ಮೀರದ ಪ್ರಥಮ ಕ್ಲಬ್ ಎಂದೆನಿಸಿಕೊಂಡಿದೆ.
ಎರಡು ವರ್ಷದ ಹಿಂದಷ್ಟೇ ಅಸ್ತಿತ್ವಕ್ಕೆ ಬಂದ ತಂಡಕ್ಕೆ ಸ್ಕಾಟ್ಲೆಂಡ್ ಮತ್ತು ಗ್ಲಾಸ್ಕೋ ರೇಂಜರ್ಸ್ ತಂಡಗಳನ್ನು ಪ್ರತಿನಿಧಿಸಿದ್ದ ದಿಗ್ಗಜ, ಡೇವಿಡ್ ರಾಬರ್ಟ್‌ಸನ್, ರಾಜ್ಯದಲ್ಲಿ ಫುಟ್‌ಬಾಲ್ ತರಬೇತಿಗೆ ಸೂಕ್ತವಾದ ಸೌಲಭ್ಯಗಳಿಲ್ಲ ಎಂದಿದ್ದಾರೆ.
2018-19ರ ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಐ-ಲೀಗ್‌ನಲ್ಲಿ ರಿಯಲ್ ಕಾಶ್ಮೀರ್ ತಂಡವು ಮೋಹನ್ ಬಗಾನ್ ಮತ್ತು ಈಸ್ಟ್ ಬೆಂಗಾಲ್‌ನಂತಹ ಬಲಿಷ್ಠ ತಂಡಗಳೊಂದಿಗೆ ಸೆಣಸಾಟ ನಡೆಸಲಿದೆ.
'ಕಾಶ್ಮೀರದಲ್ಲಿ ಫುಟ್‌ಬಾಲ್‌ಗೆ ಸರಿಯಾದ ಮೂಲಸೌಕರ್ಯಗಳು ಇಲ್ಲದೆಯೇ ಇರುವಾಗ ಕ್ಲಬ್ ಇಲ್ಲಿಯವರೆಗೂ ತಲುಪಿರುವುದು ಮಹಾನ್ ಸಾಧನೆಯೇ ಸರಿ. ಆದರೆ, ಇದಿನ್ನೂ ಆರಂಭವಷ್ಟೇ ಎಂದಿದ್ದಾರೆ ಚಟ್ಟೂ.
ನಾವು ಸಂಪೂರ್ಣ ಸನ್ನಿವೇಶವನ್ನು ಬದಲಿಸಲು ಬಯಸಿದ್ದೇವೆ. ಕಾಶ್ಮೀರದಲ್ಲಿ ಫುಟ್‌ಬಾಲ್ ಕ್ರಾಂತಿ ತರುವ ಆಸೆ ಹೊಂದಿದ್ದೇವೆ. ಈಗಷ್ಟೇ ದಾರಿಯನ್ನು ತೆರೆದಿದ್ದೇವೆ. ಭೂಮಿ ಮೇಲಿನ ಈ ಸ್ವರ್ಗವನ್ನು ಫುಟ್‌ಬಾಲ್‌ನ ಸ್ವರ್ಗವನ್ನಾಗಿಸಲು ಬಯಸಿದ್ದೇವೆ ಎಂದು ಹೇಳಿದ್ದಾರೆ.
ತಂಡದ ಈ ಯಶಸ್ಸು ಕ್ರೀಡೆಯ ಮೂಲಕ ಮುಖ್ಯವಾಹಿನಿಯತ್ತ ಬರಲು ಯುವಜನರನ್ನು ಪ್ರೇರೇಪಿಸಲಿದೆ ಎಂದು ಅವರು ಆಶಯ ವ್ಯಕ್ತಪಡಿಸಿದ್ದಾರೆ.
'ಯುವಜನರು ಕಲ್ಲನ್ನು ಬೀಸುವ ಬದಲು ಫುಟ್‌ಬಾಲ್ ಎತ್ತಿಕೊಳ್ಳಲಿ. ಅವರ ಶಕ್ತಿಯನ್ನು ಬಳಸಿಕೊಳ್ಳಲು ಫುಟ್‌ಬಾಲ್ ಮತ್ತು ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲಿ ಎಂದು ಬಯಸುತ್ತೇನೆ ಎಂದು ತಿಳಿಸಿದ್ದಾರೆ.