ಮ್ಯಾಂಚೆಸ್ಟರ್ ಸಿಟಿಯ ಸ್ಟಾರ್ ಮಿಡ್‌ಫೀಲ್ಡರ್ ರೋಡ್ರಿ ಅವರು 2024ರ ಬ್ಯಾಲನ್ ಡಿ'ಓರ್ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಇತಿಹಾಸವನ್ನು ಸೃಷ್ಟಿಸಿದ್ದಾರೆ. ರೋಡ್ರಿ ಅವರು ರಿಯಲ್ ಮ್ಯಾಡ್ರಿಡ್‌ನ ವಿನಿಶಿಯಸ್ ಜೂನಿಯರ್ ಮತ್ತು ಜೂಡ್ ಬೆಲ್ಲಿಂಗ್‌ಹ್ಯಾಮ್‌ರಂತಹ ಸ್ಟಾರ್ ಆಟಗಾರರನ್ನು ಹಿಂದಿಕ್ಕಿ ಪ್ರಶಸ್ತಿಯನ್ನು ಗೆದ್ದಿದ್ದಾರೆ.
ಫ್ರಾನ್ಸ್ ಫುಟ್‌ಬಾಲ್ ಯುಇಎಫ್ ಎ ಸಹಯೋಗದಲ್ಲಿ ಫ್ರಾನ್ಸ್ ಮ್ಯಾಗಜೀನ್ ಆಯೋಜಿಸಿದ್ದ ಸಮಾರಂಭದಲ್ಲಿ ರೋಡ್ರಿ ಪ್ರಶಸ್ತಿ ಸ್ವೀಕರಿಸಿದ್ದಾರೆ. ಈ ಬಾರಿ ಫುಟ್‌ಬಾಲ್ ದಿಗ್ಗಜರಾದ ಲಿಯೋನೆಲ್ ಮೆಸ್ಸಿ ಅಥವಾ ಕ್ರಿಸ್ಟಿಯಾನೋ ರೊನಾಲ್ಡೊ ಅವರನ್ನು ನಾಮನಿರ್ದೇಶನ ಪಟ್ಟಿಯಿಂದ ಹೊರಗಿಡಲಾಗಿತ್ತು. 2008 ರಿಂದ ಇದು ಮೂರನೇ ಬಾರಿಗೆ ಲಿಯೋನೆಲ್ ಮೆಸ್ಸಿ ಅಥವಾ ಕ್ರಿಸ್ಟಿಯಾನೊ ರೊನಾಲ್ಡೊ ಹೊರತುಪಡಿಸಿ ಬೇರೆ ಆಟಗಾರ ಪ್ರಶಸ್ತಿಯನ್ನು ಗೆದ್ದಿರುವುದು. ಅಲ್ಲದೆ, 2003 ರ ನಂತರ ಮೊದಲ ಬಾರಿಗೆ ಇಬ್ಬರು ಸ್ಟಾರ್ ಆಟಗಾರರು ಪ್ರಶಸ್ತಿಗೆ ನಾಮನಿರ್ದೇಶನಗೊಂಡವರ ಪಟ್ಟಿಯಲ್ಲಿ ಕಾಣಿಸಿಕೊಂಡಿಲ್ಲ.

ಕಳೆದ ಋತುವಿನಲ್ಲಿ ಮ್ಯಾಂಚೆಸ್ಟರ್ ಸಿಟಿ ಸತತ 4ನೇ ಬಾರಿ ಪ್ರೀಮಿಯರ್ ಲೀಗ್ ಪ್ರಶಸ್ತಿಯನ್ನು ಗೆಲ್ಲುವಲ್ಲಿ ರೋಡ್ರಿ ಪ್ರಮುಖ ಪಾತ್ರ ವಹಿಸಿದರು. ಅಲ್ಲದೆ, ಈ ವರ್ಷದ ಯುರೋಪಿಯನ್ ಚಾಂಪಿಯನ್‌ಶಿಪ್‌ನಲ್ಲಿ ಅತ್ಯುತ್ತಮ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದರು. ಈ ಟೂರ್ನಿಯಲ್ಲಿ ಸ್ಪೇನ್ ನಾಲ್ಕನೇ ಬಾರಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತ್ತು.
1990 ರಲ್ಲಿ ಸ್ಪೇನ್‌ನ ಲೋಥರ್ ಮ್ಯಾಥೌಸ್ ನಂತರ ಬ್ಯಾಲನ್ ಡಿ'ಓರ್ ಗೆದ್ದ ಮೊದಲ ಮಿಡ್‌ಫೀಲ್ಡರ್ ರೋಡ್ರಿ. ಇದಕ್ಕೂ ಮುನ್ನ ಆಲ್ಫ್ರೆಡೋ ಡಿ ಸ್ಟೆಫಾನೊ (1957 ಮತ್ತು 1959) ಹಾಗು ಲೂಯಿಸ್ ಸೌರೆಜ್ (1960) ಬ್ಯಾಲನ್ ಡಿ'ಓರ್ ಪ್ರಶಸ್ತಿನ್ನು ಗೆದ್ದಿದ್ದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ರೋಡ್ರಿ, ಈ ಪ್ರಶಸ್ತಿಯು ಸ್ಪೇನ್ ಫುಟ್‌ಬಾಲ್‌ಗೆ ಸಂದ ಜಯವಾಗಿದೆ. ನಾನು ಯಾವದೇ ಸಾಮಾಜಿಕ ಜಾಲತಾಣದಲ್ಲಿ ಇಲ್ಲದ ಕಾರಣ, ನನ್ನ ಬಗ್ಗೆ ಜನರು ಹೆಚ್ಚು ತಿಳಿದಿಲ್ಲ ಎಂದು ಅರ್ಥಮಾಡಿಕೊಂಡಿದ್ದೇನೆ. ನಾನು ಕೇವಲ ಸಾಮಾನ್ಯ ವ್ಯಕ್ತಿ. ನಾನು ಕ್ರೀಡೆಯನ್ನು ಆನಂದಿಸುತ್ತೇನೆ. ನಾನು ತುಂಬಾ ಶಾಂತ ವ್ಯಕ್ತಿಯಾಗಿದ್ದು, ಒಳ್ಳೆಯ ವ್ಯಕ್ತಿಯಾಗಲು ಪ್ರಯತ್ನಿಸುತ್ತೇನೆ ಎಂದು ಹೇಳಿದ್ದಾರೆ.
ಪುರುಷರ ಬ್ಯಾಲನ್ ಡಿ'ಓರ್ 2024 ಕ್ಕೆ ನಾಮನಿರ್ದೇಶನಗೊಂಡವರ ಪಟ್ಟಿಯಲ್ಲಿ ಹಲವು ಸ್ಟಾರ್ ಆಟಗಾರರಿದ್ದರು. ಅವರಲ್ಲಿ ವಿನಿಸಿಯಸ್ ಜೂನಿಯರ್, ಎರ್ಲಿಂಗ್ ಹಾಲೆಂಡ್, ಕೈಲಿಯನ್ ಎಂಬಪ್ಪೆ, ರೋಡ್ರಿ ಮತ್ತು ಜೂಡ್ ಬೆಲ್ಲಿಂಗ್‌ಹ್ಯಾಮ್ ಅವರು ಬ್ಯಾಲನ್ ಡಿ'ಓರ್ ಪ್ರಶಸ್ತಿ ಗೆಲ್ಲುವ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದರು.
ಎಮಿಲಿಯಾನೊ ಮಾರ್ಟಿನೆಜ್ ಅತ್ಯುತ್ತಮ ಗೋಲ್‌ಕೀಪರ್ ಪ್ರಶಸ್ತಿಯನ್ನು ಗೆದ್ದರೆ, ಹ್ಯಾರಿ ಕೇನ್ ಮತ್ತು ಕೈಲಿಯನ್ ಎಂಬಪ್ಪೆ ಅತಿ ಹೆಚ್ಚು ಗೋಲುಗಳನ್ನು ಗಳಿಸಿದ್ದಕ್ಕಾಗಿ ಗೆರ್ಡ್ ಮುಲ್ಲರ್ ಟ್ರೋಫಿಯನ್ನು ಪಡೆದಿದ್ದಾರೆ. ಬಾರ್ಸಿಲೋನಾದ ಯುವ ಆಟಗಾರ ಲ್ಯಾಮಿನ್ ಯಮಲ್, ಅತ್ಯುತ್ತಮ ಯುವ ಆಟಗಾರನಾಗಿ ಕೋಪ ಟ್ರೋಫಿ ಗೆದ್ದಿದ್ದಾರೆ. ಇವರಲ್ಲದೆ, ಬಾರ್ಸಿಲೋನಾದ ಐತಾನಾ ಬೊನ್ಮತಿ ಅವರು ಸತತ ಎರಡನೇ ಬಾರಿಗೆ ಮಹಿಳಾ ಬ್ಯಾಲನ್ ಡಿ'ಓರ್ ಪ್ರಶಸ್ತಿಯನ್ನು ಗೆದ್ದಿದ್ದಾರೆ.