
ಬ್ರೆಸಿಲಿಯಾ, ಮಾರ್ಚ್ 5: ಬ್ರೆಜಿಲ್ ಫುಟ್ಬಾಲ್ ದಂತಕತೆ ರೊನಾಲ್ಡಿನೊ ಮತ್ತು ಅವರ ಸಹೋದರ ರೊಬರ್ಟೊ ಅವರನ್ನು ಬಂಧಿಸಲಾಗಿದೆ. ತಪ್ಪು ದಾಖಲೆಗಳನ್ನು ನೀಡಿ, ನಕಲಿ ಪಾಸ್‌ಪೋರ್ಟ್ ಬಳಸಿ ಸೌತ್ ಅಮೆರಿಕನ್ ದೇಶಕ್ಕೆ ಪ್ರವೇಶಿಸಿದ ಆರೋಪದಲ್ಲಿ ಇಬ್ಬರೂ ಬಂಧಿಸಲ್ಪಟ್ಟಿದ್ದಾರೆ.
ಬ್ರೆಜಿಲ್ ತಂಡಕ್ಕಾಗಿ 2002ರಲ್ಲಿ ವಿಶ್ವಕಪ್ ಗೆಲ್ಲಿಸಿಕೊಟ್ಟಿದ್ದ, 39ರ ಹರೆಯದ ರೊನಾಲ್ಡಿನೊ ಮತ್ತವರ ಸಹೋದರ ರೊಬರ್ಟೊ ಅವರನ್ನು ಪರಾಗ್ವೆಯ ರೆಸಾರ್ಟ್ ಯಾಚ್ & ಗಾಲ್ಫ್ ಕ್ಲಬ್‌ನಲ್ಲಿ ಬುಧವಾರ (ಮಾರ್ಚ್ 4) ರಾತ್ರಿ ಬಂಧಿಸಲಾಗಿದೆ. ಪರಾಗ್ವೆಯ ಆಂತರಿಕ ಸಚಿವಾಲಯ ಈ ವಿಚಾರವನ್ನು ಖಚಿತಪಡಿಸಿದೆ.
ಲಾ ನೇಷಿಯನ್ ದಿನಪತ್ರಿಕೆಯ ಪ್ರಕಾರ, ಹೋಟೆಲ್‌ನಲ್ಲಿ ತಂಗಿದ್ದ ರೊನಾಲ್ಡಿನೊ ಮತ್ತು ರೊಬರ್ಟೊ ಅವರಲ್ಲಿದ್ದ ಪಾಸ್‌ಪೋರ್ಟ್‌ನಲ್ಲಿ ಪರಾಗ್ವೆಯನ್ ರಾಷ್ಟ್ರೀಯತೆ ನಮೂದಿಲ್ಪಟ್ಟಿತ್ತು. ಬಂಧನದ ಕುರಿತು ಗುರುವಾರ ಮುಂಜಾನೆ ಹೇಳಿಕೆ ನೀಡಬೇಕಾಗಿದ್ದರಿಂದ ಇಬ್ಬರೂ ಸಹೋದರು ಬುಧವಾರ ರಾತ್ರಿಯಿಡೀ ಪೊಲೀಸರೊಂದಿಗೆ ತಂಗಬೇಕಾಗಿ ಬಂದಿತ್ತು ಎಂದು ತಿಳಿದು ಬಂದಿದೆ.