
ಲಿಸ್ಬನ್, ಅಕ್ಟೋಬರ್ 2: ತನ್ನ ಮೇಲೆ ಕ್ರಿಸ್ಚಿಯಾನೊ ರೊನಾಲ್ಡೋ ಅವರು ಅತ್ಯಾಚಾರ ಮಾಡಿದ್ದಾರೆ ಎಂದು ಅಮೆರಿಕಾ ಮೂಲಕದ ಮಹಿಳೊಯೊಬ್ಬರು ಆರೋಪಿಸಿದ್ದರು. ಅಮೆರಿಕಾ ಪೊಲೀಸರು ಆ ಪ್ರಕರಣದ ತನಿಖೆ ಶುರು ಮಾಡಿದ್ದಾರೆ. ಆದರೆ ಪೋರ್ಚುಗಲ್ ಸ್ಟಾರ್ ಫುಟ್ಬಾಲ್ ಆಟಗಾರ ಆರೋಪವನ್ನು ತಳ್ಳಿ ಹಾಕಿದ್ದಾರೆ. ಇದೊಂದು ಸುಳ್ಳು ಸುದ್ದಿಯಷ್ಟೇ ಎಂದು ರೊನಾಲ್ಡೋ ಹೇಳಿದ್ದಾರೆ.
ಜರ್ಮನಿಯ ಮ್ಯಾಗಜಿನ್ 'ಡೆರ್ ಸ್ಪೀಗೆಲ್' ಒಂದು ವರದಿಯನ್ನು ಪ್ರಕಟಿಸಿತ್ತು. ಇದರಲ್ಲಿ 2009ರಲ್ಲಿ ಅಮೆರಿಕಾದ ಲಾಸ್ ವೇಗಸ್ ನ ಹೊಟೇಲ್ ರೂಮೊಂದರಲ್ಲಿ ರೊನಾಲ್ಡೋ ತನ್ನ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಕ್ಯಾಥರಿನ್ ಮಯೋರ್ಗಾ ಎನ್ನುವ 34ರ ಹರೆಯದ ಮಹಿಳೆ ಆರೋಪಿಸಿದ್ದಾರೆ ಎಂದು ಹೇಳಿತ್ತು.
ಈಗ ಇಟಲಿಯ ಸೀರೀ ಎ ಟೂರ್ನಿಯಲ್ಲಿ ಯುವೆಂಟಸ್ ತಂಡವನ್ನು ಪ್ರತಿನಿಧಿಸುತ್ತಿರುವ 33ರ ಹರೆಯದ ರೊನಾಲ್ಡೋ ಈ ಬಗ್ಗೆ ಪ್ರತಿಕ್ರಿಯಿಸಿ, 'ಆರೋಪಿ ಏನೆಲ್ಲಾ ಹೇಳಿದ್ದಾರೋ ಅದೆಲ್ಲಾ ಸುಳ್ಳು. ಅದು ಸುಳ್ಳು ಸುದ್ದಿ' ಎಂದು ತನ್ನ ಇನ್ಸ್ಟಾಗ್ರಾಮ್ ಪೋಸ್ಟ್ ನಲ್ಲಿ ಸೋಮವಾರ ಹೇಳಿಕೊಂಡಿದ್ದರು. ಆದರೆ ಈಗ ಆ ಪೋಸ್ಟ್ ಡಿಲೀಟ್ ಮಾಡಲಾಗಿದೆ.
ಮಯೋರ್ಗಾ ಅವರು ರೊನಾಲ್ಡೋ ಬಗ್ಗೆ ಆರೋಪಿಸಿ ಸುಮಾರು 32 ಪುಟಗಳ ದೂರು ದಾಖಲಿಸಿದ್ದರು. ಇದರಲ್ಲಿ ಅತ್ಯಾಚಾರ ಮಾಡಿದ ಬಳಿಕ ರೊನಾಲ್ಡೋ ಅವರು ಪ್ರಕರಣವನ್ನು ಮುಚ್ಚಿಡುವಂತೆ ತನಗೆ 375,000 ಯುಎಸ್ ಡಾಲರ್ ನೀಡಿರುವುದಾಗಿ ಹೇಳಿದ್ದರು ಎಂದೆಲ್ಲ ಹೇಳಲಾಗಿತ್ತು.