ಎಸ್‌ಎಎಫ್‌ಎಫ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಗೆಲುವಿನ ಓಡಕ್ಕೆ ತಡೆಬಿದ್ದಿದೆ. ಕುವೈಟ್ ವಿರುದ್ಧ ನಡೆದ ಪಂದ್ಯದಲ್ಲಿ ಭಾರತ ಫುಟ್ಬಾಲ್ ತಂಡ 1-1 ಅಂತರದಿಂದ ಡ್ರಾಗೆ ತೃಪ್ತಿಪಟ್ಟುಕೊಂಡಿದೆ. ಈ ಪಂದ್ಯದಲ್ಲಿಯೂ ಭಾರತದ ನಾಯಕ ಸುನಿಲ್ ಛೆಟ್ರಿ ಗೋಲು ಬಾರಿಸಿ ಮಿಂಚಿದ್ದಾರೆ. ಈ ಡ್ರಾ ಫಲಿತಾಂಶದೊಂದಿಗೆ ಭಾರತ ಹಾಗೂ ಕುವೈಟ್ ತಂಡಗಳು ಅಂಕವನ್ನು ಹಂಚಿಕೊಂಡಿದೆ.
ಈ ಪಂದ್ಯದಲ್ಲಿ ಭಾರತ ಮೊದಲಾರ್ಧದ ಇಂಜುರಿ ಟೈಮ್ ಸ್ಟ್ರೈಕ್‌ನಲ್ಲಿ ಮುನ್ನಡೆ ಸಾಧಿಸಿತ್ತು. ನಾಯಕ ಛೆಟ್ರಿ ಗೋಲು ಬಾರಿಸಿ ಭಾರತವನ್ನು ಗೆಲುವಿನ ಹಾದಿಗೆ ತಂದಿದ್ದರು ಆದರೆ ದ್ವಿತೀಯಾರ್ಧದ ಹೆಚ್ಚುವರಿ ಅವಧಿಯಲ್ಲಿ ಕುವೈಟ್‌ನ ಅನ್ವರ್ ಅಲಿ ಬಾರಿಸಿದ ಗೋಲ್ ಆತಿಥೇಯ ತಂಡದ ಗೆಲುವಿನ ಅವಕಾಶವನ್ನು ಮುಚ್ಚಿಹಾಕಿತ್ತು. ಕುವೈಟ್ ಈ ಪಂದ್ಯವನ್ನು ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಯಿತು. ಕಳೆದ 9 ಪಂದ್ಯಗಳಲ್ಲಿ ಭಾರತ ಬಿಟ್ಟುಕೊಟ್ಟ ಮೊದಲ ಗೋಲು ಇದಾಗಿದೆ.

ಫಲಿತಾಂಶದಿಂದಾಗಿ ಭಾರತ ಮತ್ತು ಕುವೈತ್ ತಂಡಗಳು ಏಳು ಅಂಕಗಳೊಂದಿಗೆ ಲೀಗ್ ಹಂತವನ್ನು ಮುಗಿಸಿದಂತಾಗಿದೆ. ಆದರೆ ಗೋಲು ಗಳಿಕೆಯ ಸರಾಸರಯಲ್ಲಿ ಭಾರತದ ಸ್ಥಾನ ಉತ್ತಮವಾಗಿದ್ದು ಎ ಗುಂಪಿನಲ್ಲಿ ಅಗ್ರಸ್ಥಾನವನ್ನು ಪಡೆದುಕೊಂಡಿದೆ. ಇನ್ನು ಭಾರತ ಸೆಮಿಫೈನಲ್‌ನಲ್ಲಿ ಲೆಬನಾನ್ ವಿರುದ್ಧ ಆಡಲಿದ್ದು ಕುವೈತ್ ಬಾಂಗ್ಲಾದೇಶ ಅಥವಾ ಮಾಲ್ಡೀವ್ಸ್ ವಿರುದ್ಧ ಸೆಣಸಲಿದೆ.
ಈ ಪಂದ್ಯದಲ್ಲಿ ಭಾರತ ಎರಡು ಭಾಗದಲ್ಲಿಯೂ ಅದ್ಭುತ ದಾಳಿಯನ್ನು ಸಂಘಟಿಸಿ ಎದುರಾಳಿಯನ್ನು ಹಿಮ್ಮೆಟ್ಟಿಸಿತ್ತು. ಆದರೆ ಕುವೈತ್ ಹೆಚ್ಚಾಗಿ ಎಡಭಾಗದಲ್ಲಿ ಹೆಚ್ಚು ಅವಲಂಬಿತವಾಗಿದ್ದಿದ್ದು ಈ ಪಂದ್ಯದಲ್ಲಿ ಸ್ಪಷ್ಟವಾಗಿತ್ತು. ಪಂದ್ಯ ಆರಂಭವಾದ ಆರನೇ ನಿಮಿಷದಲ್ಲಿ ಭಾರತ ತಂಡ ಬಹುತೇಕ ಮುನ್ನಡೆಯನ್ನು ಸಾಧಿಸಿತ್ತು. ಆದರೆ ಆಕಾಶ್ ಮಿಶ್ರಾ ಅವರಿಂದ ಪಡೆದ ಕ್ರಾಸ್ ಅನ್ನು ಗೋಲಾಗಿ ಪರಿವರ್ತಿಸಲು ವಿಫಲವಾದರು.
ಇನ್ನು ಕುವೈಟ್ ಕೂಡ 20ನೇ ನಿಮಿಷದಲ್ಲಿ ಇಂಥಾದ್ದೇ ಅವಕಾಶವನ್ನು ಸೃಷ್ಟಿಸಿಕೊಂಡಿತ್ತು. ಬಾಕ್ಸ್‌ನ ಹೊರಗಿನಿಂದ ಶಾದಾಬ್ ಅಲ್ ಖಲ್ದಿ ಅವರ ರಿಪ್ಪರ್ ಹೊಡೆತವು ಗುರಿ ತಪ್ಪಿದ ಕಾರಣ ಭಾರತ ನಿಟ್ಟುಸಿರುಬಿಡುವಂತಾಯಿತು. ನಂತರ ನಿಧಾನವಾಗಿ ಭಾರತವು ಪಂದ್ಯದಲ್ಲಿ ನಿಯಂತ್ರಣವನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿತ್ತು.