FIFA Women's World Cup: ಇಂಗ್ಲೆಂಡ್ ಮಣಿಸಿ ಮೊದಲ ಬಾರಿ ವಿಶ್ವಕಪ್ ಗೆದ್ದ ಸ್ಪೇನ್
ಫಿಫಾ ಮಹಿಳಾ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಸ್ಪೇನ್ 1-0 ಗೋಲುಗಳಿಂದ ಇಂಗ್ಲೆಂಡ್ ತಂಡವನ್ನು ಮಣಿಸಿ, ಇತಿಹಾಸ ನಿರ್ಮಿಸಿದೆ. ಭಾನುವಾರ ಸಿಡ್ನಿ ಒಲಿಂಪಿಕ್ ಸ್ಟೇಡಿಯಂನಲ್ಲಿ ನಡೆದ ಪ್ರಶಸ್ತಿ ಸುತ್ತಿನ ಕಾದಾಟದಲ್ಲಿ ಸ್ಪೇನ್ ಭರ್ಜರಿ ಪ್ರದರ್ಶನ ನೀಡಿತು. ಸ್ಪೇನ್ ಇದೇ ಮೊದಲ ಬಾರಿಗೆ ಫಿಫಾ ಮಹಿಳಾ ವಿಶ್ವಕಪ್ ಗೆದ್ದು ಇತಿಹಾಸ ಬರೆಯಿತು. ಸ್ಪೇನ್ ಪರ 29ನೇ ನಿಮಿಷದಲ್ಲಿ ನಾಯಕಿ ಓಲ್ಗಾ ಕಾರ್ಮೋನಾ ಸೊಗಸಾದ ಗೋಲು ಬಾರಿಸಿದರು.
ಈ ಜಯದೊಂದಿಗೆ ಕಳೆದ ವರ್ಷ ಯುರೋಪಿಯನ್ ಚಾಂಪಿಯನ್‌ಶಿಪ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಸೋಲಿಗೆ ಸ್ಪೇನ್ ತಂಡ ಸೇಡು ತೀರಿಸಿಕೊಂಡಿತು. ಅಂತಿಮ ಪಂದ್ಯದಲ್ಲಿ, ಸ್ಪೇನ್ ಇಂಗ್ಲೆಂಡ್‌ಗಿಂತ ಮಿಡ್‌ಫೀಲ್ಡ್‌ನಲ್ಲಿ ಹೆಚ್ಚಿನ ನಿಯಂತ್ರಣವನ್ನು ಕಾಯ್ದುಕೊಂಡಿತು. ಇಂತಹ ಪರಿಸ್ಥಿತಿಯಲ್ಲಿ ಇಂಗ್ಲೆಂಡ್‌ಗೆ ಗೋಲು ಗಳಿಸುವಷ್ಟು ಅವಕಾಶಗಳು ಸಿಗಲಿಲ್ಲ.

ದ್ವಿತಿಯಾರ್ಧದಲ್ಲಿ ಜೆನ್ನಿ ಹೆರ್ಮೊಸೊ ಪೆನಾಲ್ಟಿ ತಪ್ಪಿಸಿಕೊಳ್ಳದಿದ್ದರೆ ಇಂಗ್ಲೆಂಡ್‌ನ ಸೋಲಿನ ಅಂತರ ದ್ವಿಗುಣಗೊಳ್ಳುತ್ತಿತ್ತು. ಆಂಗ್ಲ ಆಟಗಾರ್ತಿಯರು ಸಿಕ್ಕ ಅವಕಾಶವನ್ನು ಬಳಸಿಕೊಳ್ಳುವಲ್ಲಿ ವಿಫಲರಾದರು. 70ನೇ ನಿಮಿಷದಲ್ಲಿ ಪೆನಾಲ್ಟಿ ಪ್ರದೇಶದಲ್ಲಿ ವಾಲ್ಷ್ ಚೆಂಡನ್ನು ಕೈ ಯಿಂದ ತಡೆದಿದ್ದರಿಂದ ಸ್ಪೇನ್‌ಗೆ ಪೆನಾಲ್ಟಿ ನೀಡಲಾಯಿತು, ಆದರೆ ಗೋಲ್‌ಕೀಪರ್ ಮೇರಿ ಆರ್ಪ್ಸ್ ಅದ್ಭುತ ಸೇವ್ ಮಾಡಿದರು.
25 ಪಂದ್ಯಗಳ ಬಳಿಕ ಮೊದಲ ಸೋಲು
ಸರೀನಾ ವಿಗ್ಮನ್ ಮುಖ್ಯ ಕೋಚ್ (ಮ್ಯಾನೇಜರ್) ಆದ ನಂತರ ದಿ ಲಯನೆಸ್ (ಇಂಗ್ಲೆಂಡ್ ಮಹಿಳಾ ಫುಟ್ಬಾಲ್ ತಂಡ) ಗೆ ಇದು ಮೊದಲ ಸೋಲು. ಈ ಫೈನಲ್ ಪಂದ್ಯಕ್ಕೂ ಮುನ್ನ ಇಂಗ್ಲೆಂಡ್ 25 ಪಂದ್ಯಗಳನ್ನು ಗೆದ್ದಿದ್ದ ದಾಖಲೆಯನ್ನು ಹೊಂದಿದೆ. ನಾಲ್ಕು ಪಂದ್ಯಗಳು ಡ್ರಾದಲ್ಲಿ ಅಂತ್ಯವಾಗಿವೆ. ಸ್ಪೇನ್ ಫಿಫಾ ಮಹಿಳಾ ವಿಶ್ವಕಪ್ ಗೆದ್ದ ಐದನೇ ದೇಶ ಎಂಬ ಹೆಗ್ಗಳಿಕೆ ತನ್ನದಾಗಿಸಿಕೊಂಡಿದೆ.
ಈ ಹಿಂದೆ ಯುಎಸ್ಎ, ನಾರ್ವೆ, ಜಪಾನ್ ಮತ್ತು ಜರ್ಮನಿ ತಂಡಗಳು ಮಾತ್ರ ಈ ಸಾಧನೆ ಮಾಡಿದ್ದವು. ಸ್ಪೇನ್ ಸ್ವೀಡನ್ ಅನ್ನು ಉಪಾಂತ್ಯ ಪಂದ್ಯದಲ್ಲಿ ಸೋಲಿಸಿತ್ತು. ಮತ್ತು ಇಂಗ್ಲೆಂಡ್ ಆತಿಥೇಯ ಆಸ್ಟ್ರೇಲಿಯಾವನ್ನು ಸೋಲಿಸಿ ಫೈನಲ್‌ಗೆ ತನ್ನ ಸ್ಥಾನವನ್ನು ಕಾಯ್ದಿರಿಸಿತ್ತು.
ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾ ಆತಿಥ್ಯದಲ್ಲಿ ಜುಲೈ 20 ರಿಂದ ಆಗಸ್ಟ್ 20 ರವರೆಗೆ ಫಿಫಾ ಮಹಿಳಾ ವಿಶ್ವಕಪ್ ಆಯೋಜಿಸಲಾಗಿತ್ತು. ಇದು ವಿಶ್ವಕಪ್‌ನ 9ನೇ ಆವೃತ್ತಿಯಾಗಿದೆ. ಈ ಮಹಾ ಟೂರ್ನಿ 9 ನಗರಗಳ 10 ಮೈದಾನಗಳಲ್ಲಿ ನಡೆದಿದ್ದು, ಒಟ್ಟು 64 ಪಂದ್ಯಗಳು ನಡೆದಿವೆ. ಕಳೆದ ಬಾರಿ ಫ್ರಾನ್ಸ್ ನಲ್ಲಿ ನಡೆದ ಮಹಿಳಾ ವಿಶ್ವಕಪ್ ನಲ್ಲಿ 24 ತಂಡಗಳು ಆಡಿದ್ದರೆ ಈ ಬಾರಿ 32 ತಂಡಗಳು ಭಾಗವಹಿಸಿದ್ದವು. ಹಿಂದಿನ ಪ್ರಶಸ್ತಿಯನ್ನು ಯುನೈಟೆಡ್ ಸ್ಟೇಟ್ಸ್ ಗೆದ್ದುಕೊಂಡಿತ್ತು, ಆದರೆ ಈ ಬಾರಿ ಈ ತಂಡ ಸೆಮಿಫೈನಲ್ ತಲುಪಲು ಸಾಧ್ಯವಾಗಲಿಲ್ಲ. ಈ ಪಂದ್ಯಾವಳಿಯಲ್ಲಿ ಯುನೈಟೆಡ್ ಸ್ಟೇಟ್ಸ್ ಅತ್ಯಂತ ಯಶಸ್ವಿ ತಂಡವಾಗಿದೆ ಮತ್ತು ನಾಲ್ಕು ಬಾರಿ ಪ್ರಶಸ್ತಿಯನ್ನು ಗೆದ್ದಿದೆ.
ಫಿಫಾ ವಿಶ್ವಕಪ್ ವಿಜೇತ ತಂಡಗಳು
1991, ಅಮೆರಿಕ,
1995, ನಾರ್ವೆ
1999, ಅಮೆರಿಕ
2003, ಜರ್ಮನಿ
2007, ಜರ್ಮನಿ
2011, ಜಪಾನ್
2015, ಅಮೆರಿಕ
2019, ಅಮೆರಿಕ
2023, ಸ್ಪೇನ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications