ಭಾರತೀಯ ಫುಟ್ಬಾಲ್ ಅಭಿಮಾನಿಗಳಿಗೆ ಗುಡ್ ನ್ಯೂಸ್. ಅಭಿಮಾನಿಗಳ ನೆಚ್ಚಿನ ಆಟಗಾರ ಸುನಿಲ್ ಛೆಟ್ರಿ ತಮ್ಮ ನಿವೃತ್ತಿಯ ನಿರ್ಧಾರದಿಂದ ಯೂ-ಟರ್ನ್ ಹೊಡೆದಿದ್ದಾರೆ. ಈ ಸ್ಟಾರ್ ಫಾರ್ವಡ್ ಆಟಗಾರ ಮತ್ತೊಮ್ಮೆ ನಿಲಿ ಜೆರ್ಸಿಯಲ್ಲಿ ಆಡುವುದನ್ನು ಕಾಣಬಹುದಾಗಿದೆ. ಭಾರತ ತಂಡದ ಮುಂದಿನ ವೇಳಾಪಟ್ಟಿಯಾದ ಎಎಫ್‌ಸಿ ಏಷ್ಯನ್ ಕಪ್ ನಲ್ಲಿ ಆಡುವುದನ್ನು ಕಾಣಬಹುದಾಗಿದೆ. 40 ವರ್ಷ ವಯಸ್ಸಿನ ಸುನಿಲ್ ಛೆಟ್ರಿ ಕಳೆದ ವರ್ಷ ಜೂನ್‌ನಲ್ಲಿ ನಿವೃತ್ತಿ ಘೋಷಿಸಿದ್ದರು. ಆದರೆ ಸುಮಾರು 8 ತಿಂಗಳ ನಂತರ, ಅವರು ಮತ್ತೆ ಮರಳುತ್ತಿದ್ದಾರೆ.
ಸದ್ಯ ಎಎಫ್‌ಸಿ ಏಷ್ಯನ್ ಕಪ್ ಅರ್ಹತಾ ಸುತ್ತಿನ ಪಂದ್ಯಗಳು ನಡೆಯುತ್ತಿವೆ. ಭಾರತ ತಂಡ ಮಾರ್ಚ್ 25 ರಂದು ಬಾಂಗ್ಲಾ ವಿರುದ್ಧ ಕಣಕ್ಕೆ ಇಳಿಯಲಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಫುಟ್ಬಾಲ್ ಆಟಗಾರ ಸುನಿಲ್ ಛೆಟ್ರಿ ಅಂಗಳಕ್ಕೆ ಇಳಿಯಲಿದ್ದಾರೆ ಎಂದು ನಂಬಲಾಗಿದೆ. ಇವರು ಅಂತಾರಾಷ್ಟ್ರೀಯ ಫುಟ್ಬಾಲ್‌ನಲ್ಲಿ ಅತಿ ಹೆಚ್ಚು ಗೋಲುಗಳನ್ನು ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಕಾಣಿಸಿಕೊಳ್ಳುತ್ತಾರೆ. ಇವರ ಖಾತೆಯಲ್ಲಿ ಸದ್ಯ 94 ಗೋಲುಗಳು ಇವೆ.

ಸುನಿಲ್ ಛೆಟ್ರಿ ತಮ್ಮ ನಿವೃತ್ತಿಯಿಂದ ಹಿಂತಿರುಗುತ್ತಿರುವುದು ಏಕೆ ಎಂಬ ಕಾರಣ ಇನ್ನು ತಿಳಿದು ಬಂದಿಲ್ಲ. ಇವರು ಮತ್ತೆ ಅಂತಾರಾಷ್ಟ್ರೀಯ ಟೂರ್ನಿಗಳಲ್ಲಿ ಆಡಲಿದ್ದಾರೆ ಎಂಬುದನ್ನು ಭಾರತೀಯ ಫುಟ್ಬಾಲ್ ಸಂಸ್ಥೆ ತನ್ನ ಸಾಮಾಜಿಕ ಖಾತೆಯಲ್ಲಿ ಹಂಚಿಕೊಂಡಿದೆ. ಈ ವೇಳೆ ಮತ್ತೆ ಛೆಟ್ರಿ ಅಂಗಳಕ್ಕೆ ಮರಳಲಿದ್ದಾರೆ ಎಂಬ ಮಾಹಿತಿಯನ್ನು ತಿಳಿಸಿದೆ.
ಕಳೆದ ವರ್ಷ ಫಿಫಾ ವಿಶ್ವಕಪ್ 2026 ಅರ್ಹತಾ ಸುತ್ತಿನ ಪಂದ್ಯದಲ್ಲಿ ಕುವೈತ್ ವಿರುದ್ಧ 0-0 ಡ್ರಾ ಸಾಧಿಸಿದ ಬಳಿಕ ಛೆಟ್ರಿ ನಿವೃತ್ತಿ ಘೋಷಿಸಿದ್ದರು. ಇದೇ ತಿಂಗಳು ಸುನಿಲ್ ಛೆಟ್ರಿ ಮತ್ತೆ ಅಂಗಳಕ್ಕೆ ಇಳಿಯುವ ಸಾಧ್ಯತೆ ದಟ್ಟವಾಗಿದೆ.
ಭಾರತ ಫುಟ್ಬಾಲ್ ಕಂಡಂತಹ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾಗಿರುವ ಸುನಿಲ್ ಛೆಟ್ರಿ ತಮ್ಮ ಹೆಸರಿಗೆ ಹಲವು ದಾಖಲೆಗಳನ್ನು ನಮೂದಿಸಿಕೊಂಡಿದ್ದಾರೆ. ಇವರ ಹೆಸರಿನಲ್ಲಿ ಭಾರತದ ಪರ ಅತಿ ಹೆಚ್ಚು ಗೋಲು ದಾಖಲಿಸಿದ ರೆಕಾರ್ಡ್ ಇದೆ. ದೇಶದ ಪರ ಆಡುವಾಗ ಅತಿ ಹೆಚ್ಚು ಗೋಲು ಸಿಡಿಸಿದ ಲೆಕ್ಕಾಚಾರದಲ್ಲಿ ಸುನಿಲ್ ಛೆಟ್ರಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ದೇಶದ ಪರ ಆಡುವಾಗ ಗಳಿಸಿದ ಗೋಲುಗಳ ಲೆಕ್ಕಾಚಾರದಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊ, ಲಿಯೋನೆಲ್ ಮೆಸ್ಸಿ ಮತ್ತು ಅಲಿ ಡೀ ಅವರಿಗಿಂತ ಮುಂದಿದ್ದಾರೆ.

ಸುನಿಲ್ ಛೆಟ್ರಿ ಐಎಸ್‌ಎಲ್ ಕಮಾಲ್ ಪ್ರದರ್ಶನ ನೀಡುತ್ತಿದ್ದಾರೆ. ಇವರು ಆಡಿದ 23 ಪಂದ್ಯಗಳಲ್ಲಿ 12 ಗೋಲುಗಳನ್ನು ದಾಖಲಿಸಿದ್ದಾರೆ. ಈ ಮೂಲಕ ಇವರು ಅತಿ ಹೆಚ್ಚು ಗೋಲು ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಪ್ರಸಕ್ತ ಐಎಸ್‌ಎಲ್‌ನಲ್ಲಿ ಬೆಂಗಳೂರು ಫುಟ್ಬಾಲ್ ಕ್ಲಬ್ ಸ್ಥಿರ ಪ್ರದರ್ಶನ ನೀಡಿದೆ. ಈ ತಂಡ ಆಡಿದ 23 ಪಂದ್ಯಗಳಲ್ಲಿ 11 ಜಯ, 5 ಡ್ರಾ, 7 ಸೋಲು ಕಂಡಿದ್ದು 38 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.