
ಮ್ಯಾಡ್ರಿಡ್, ಮಾರ್ಚ್ 12 : ಸ್ಪೇನಿನ ಪ್ರತಿಷ್ಠಿತ ಫುಟ್ಬಾಲ್ ಕ್ಲಬ್ ರಿಯಲ್ ಮ್ಯಾಡ್ರಿಡ್ ತಂಡದ ಮುಖ್ಯ ಕೋಚ್ ಹುದ್ದೆಯನ್ನು ತೊರೆದಿದ್ದ ಪುಟ್ಬಾಲ್ ದಿಗ್ಗಜ ಜಿನೆದಿನ್ ಜಿದಾನೆ ಅವರು, ತಂಡಕ್ಕೆ ಮರಳಿದ್ದಾರೆ. 10 ತಿಂಗಳ ಬಳಿಕ ಮ್ಯಾಡ್ರಿಡ್ ಕ್ಲಬ್ಬಿನ ಮುಖ್ಯ ಕೋಚ್ ಆಗಿ ಮತ್ತೊಮ್ಮೆ ಕಾರ್ಯ ನಿರ್ವಹಿಸಲು ಸಜ್ಜಾಗಿದ್ದಾರೆ.
ಫ್ರೆಂಚ್ ತಾರೆ ಜಿದಾನೆ ಅವರು ಸ್ಯಾಂಟಿಯಾಗೋ ಸೊಲಾರಿ ಅವರಿಂದ ತೆರವಾದ ಸ್ಥಾನಕ್ಕೆ ಮತ್ತೆ ಬಂದಿದ್ದಾರೆ.ಬಾರ್ಸಿಲೋನಾ ಹಾಗೂ ಅಜಾಕ್ಸ್ ವಿರುದ್ಧ ಸೋಲು ಕಂಡಿರುವ ರಿಯಲ್ ಮ್ಯಾಡ್ರಿಡ್ ಗೆ ಜಿದಾನೆ ಹಿಂತಿರುಗಿರುವುದರಿಂದ ಹೆಚ್ಚಿನ ಹುರುಪು ಸಿಕ್ಕಿದೆ ಎಂದರೆ ತಪ್ಪಾಗಲಾರದು.
ಜನವರಿ 2016ರಿಂದ ಕಳೆದ ಮೇ ತಿಂಗಳ ತನಕ ಕೋಚ್ ಆಗಿದ್ದ ಜಿದಾನೆ ಅವರು ಅಧ್ಯಕ್ಷ ಫ್ಲೊರೆಂಟಿನೋ ಪೆರೆಜ್ ಅವರಿಗೆ ಆಘಾತವಾಗುವ ರೀತಿಯಲ್ಲಿ ತಂಡವನ್ನು ತೊರೆದಿದ್ದರು.
ಆದರೆ, ಕೋಚ್ ಆಗಿದ್ದಷ್ಟು ಕಾಲ ಜಿದಾನೆ ಉತ್ತಮ ಫಲಿತಾಂಶ ನೀಡಿದ್ದಾರೆ. ಜಿದಾನೆಗಿಂತ ಮಿಗ್ಯುಯಲ್ ಮುನೋಜ್ ಮಾತ್ರ ಮುಂದಿದ್ದಾರೆ. ಪ್ರತಿ 97 ದಿನಗಳಿಗೊಮ್ಮೆ ಟ್ರೋಫಿ ಗೆದ್ದುಕೊಟ್ಟ ಸಾಧನೆ ಅವರ ಹೆಸರಿನಲ್ಲಿದೆ.
ರಿಯಲ್ ಮ್ಯಾಡ್ರಿಡ್ ಕೋಚ್ ಹಾಗೂ ಗೆದ್ದ ಟ್ರೋಫಿಗಳು
1. ಮಿಗ್ಯುಯಲ್ ಮುನೊಜ್ : 14 (9 ಲಾ ಲೀಗಾ, 2 ಕೋಪಾ ಡೆಲ್ ರೆ, 2 ಯುರೋಪಿಯನ್ ಕಪ್, 1 ಇಂಟರ್ ಕಾಂಟಿನೆಂಟಲ್ ಕಪ್)
2. ಜಿನೆದಿನ್ ಜಿದಾನೆ : 9 (1 ಲಾಲೀಗಾ, 1 ಸೂಪರ್ ಕೋಪಾ ಡಿ ಎಸ್ಪಾನಾ, 3 ಚಾಂಪಿಯನ್ಸ್ ಲೀಗ್, 2 ಯುಇಎಫ್ಎ ಸೂಪರ್ ಕಪ್, 2 ಕ್ಲಬ್ ವಿಶ್ವಕಪ್)
3. ಲೂಯಿಸ್ ಮೊಲೊವ್ನಿ : 8 (3 ಲಾ ಲೀಗಾ, 2 ಕೋಪಾ ಡೆಲ್ ರೇ. 1 ಕೋಪಾ ಡೆ ಲಾ ಲಿಗಾ, 2 ಯುಇಎಫ್ಎ ಕಪ್)
4. ವಿನ್ಸೆಂಟ್ ಡೆಲ್ ಬಾಸ್ಕೊ : 7 (2 ಲಾ ಲೀಗಾ, 1 ಸೂಪರ್ ಕೋಪಾ ಡಿ ಎಸ್ಪಾನಾ, 2 ಚಾಂಪಿಯನ್ಸ್ ಲೀಗ್, 1 ಯುಇಎಫ್ಎ ಸೂಪರ್ ಕಪ್, 1 ಇಂಟರ್ ಕಾಂಟಿನೆಂಟಲ್ ಕಪ್)
5. ಲೀ ಬೀನ್ ಹಾಕರ್ : 6 (3 ಲಾ ಲೀಗಾ, 1 ಕೋಪಾ ಡಿ ರೇ, 2 ಸೂಪರ್ ಕೋಪಾ ಡಿ ಎಸ್ಪಾನಾ)