
ಮಸ್ಕತ್, ಅಕ್ಟೋಬರ್ 26: ಓಮನ್ ನ ಮಸ್ಕತ್ ನಲ್ಲಿ ನಡೆಯುತ್ತಿರುವ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಪುರುಷರ ಹಾಕಿ ಟೂರ್ನಿಯಲ್ಲಿ ಭಾರತ ಶನಿವಾರ (ಅಕ್ಟೋಬರ್ 27) ಸೆಮಿಫೈನಲ್ ನಲ್ಲಿ ಬಲಿಷ್ಟ ಜಪಾನ್ ಸವಾಲು ಸ್ವೀಕರಿಸಲಿದೆ. ಸೆಮಿಫೈನಲ್ ನಲ್ಲಿ ಗೆಲ್ಲುವ ವಿಶ್ವಾಸದಲ್ಲೂ ಭಾರತದ ಪುರುಷರಿದ್ದಾರೆ.
ಟೂರ್ನಿಯಲ್ಲಿ ಆಡಿರುವ 5ರಲ್ಲಿ ಒಂದೂ ಪಂದ್ಯ ಸೋಲದೆ ಭಾರತ ಸೋಲಿಲ್ಲದ ಸರದಾರನಾಗಿ ಮಿಂಚಿದೆ. ಅಂದರೆ 5 ಪಂದ್ಯಗಳಲ್ಲಿ ನಾಲ್ಕು ಪಂದ್ಯ ಗೆದ್ದು ಮತ್ತೊಂದನ್ನು ಡ್ರಾ ಮಾಡಿಕೊಂಡಿದೆ. ಈ ಮೊದಲು ಜಪಾನ್ ವಿರುದ್ಧದ ಪಂದ್ಯದಲ್ಲೂ ಎದುರಾಳಿಯನ್ನು ಭಾರತದ ಪುರುಷರು ಭರ್ಜರಿ 9-0ಯಿಂದ ಹಿಮ್ಮೆಟ್ಟಿಸಿದ್ದರು.
ಪಾಯಿಂಟ್ ಟೇಬಲ್ ನಲ್ಲಿ ಭಾರತ 13 ಪಾಯಿಂಟ್ ಗಳೊಂದಿಗೆ ಅಗ್ರ ಸ್ಥಾನದಲ್ಲಿದ್ದರೆ, 10 ಅಂಕ ಗಳಿಸಿರುವ ಪಾಕಿಸ್ತಾನ ದ್ವಿತೀಯ ಸ್ಥಾನದಲ್ಲಿ, 10 ಅಂಕ ಸಂಪಾದಿಸಿರುವ ಮಲೇಷ್ಯಾ ತೃತೀಯ ಸ್ಥಾನದಲ್ಲಿದೆ. ಚಾಂಪಿಯನ್ಸ್ ಟ್ರೋಫಿ ಇತಿಹಾಸದ ಕೆದಕಿದರೆ ಅದಲ್ಲಿ ಮುಂಚೂಣಿಯಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳೇ ಇವೆ. ಎರಡೂ ತಂಡಗಳು ಎರಡು ಸಾರಿ ಚಾಂಪಿಯನ್ ಅನ್ನಿಸಿಕೊಂಡಿವೆ.
ಏಷ್ಯಾನ್ ಗೇಮ್ಸ್ ಪುರುಷರ ಹಾಕಿಯಲ್ಲಿ ಜಪಾನ್ ತಂಡ ಚಾಂಪಿಯನ್ ಆಗಿ ಮೂಡಿಬಂದಿತ್ತು. ಮಲೇಷ್ಯಾ ರನ್ನರ್ಸ್ ಅನ್ನಿಸಿಕೊಂಡಿದ್ದರೆ, ಭಾರತ ಕಂಚಿನ ಪದಕಕ್ಕೆ ತೃಪ್ತಿಪಟ್ಟಿತ್ತು. ಹೀಗಾಗಿ ಏಷ್ಯನ್ ಗೇಮ್ಸ್ ಹಿನ್ನಡೆಯ ಸೇಡು ತೀರಿಸಲು ಭಾರತಕ್ಕಿದು ಸಕಾಲ.
ಪಂದ್ಯ ಅಕ್ಟೋಬರ್ 27ರಂದು ಮಸ್ಕತ್ ನ ಸುಲ್ತಾನ್ ಕ್ವಾಬೂಸ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನಲ್ಲಿ ಭಾರತೀಯ ಕಾಲಮಾನ 10.40pm ಹೊತ್ತಿಗೆ ಪ್ರಾರಂಭಗೊಳ್ಳಲಿದೆ. ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್ ಪಂದ್ಯವನ್ನು ನೇರಪ್ರಸಾರಗೊಳಿಸಲಿದೆ. ಜಾಲತಾಣಿಗರು ಹಾಟ್‌ಸ್ಟಾರ್ ನಲ್ಲಿ ಪಂದ್ಯದ ನೇರಪ್ರಸಾರ ವೀಕ್ಷಿಸಬಹುದು.