ಹಲವು ವರ್ಷಗಳಿಂದ ಹಾಕಿ ಏಷ್ಯನ್ ಗೇಮ್ಸ್‌ನ ಪ್ರಮುಖ ಭಾಗವಾಗಿದೆ. ಏಷ್ಯನ್ ಗೇಮ್ಸ್‌ನ ಮೊದಲ ಆವೃತ್ತಿಯನ್ನು 1951 ರಲ್ಲಿ ಭಾರತದ ನವದೆಹಲಿಯಲ್ಲಿ ನಡೆಸಲಾಯಿತು. ಆದರೆ ಹಾಕಿ ಏಳು ವರ್ಷಗಳ ನಂತರ 1958ರ ಟೋಕಿಯೋದಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ಚೊಚ್ಚಲ ಬಾರಿಗೆ ಆಡಿಸಲಾಯಿತು.
ಅಂದಿನಿಂದ ಏಷ್ಯಾದ ಪ್ರಮುಖ ಟೂರ್ನಿಯಲ್ಲಿ ಹಾಕಿ ಕ್ರೀಡೆಯು ವೈಶಿಷ್ಟ್ಯ ಕಾಪಾಡಿಕೊಂಡು ಬಂದಿದೆ. ಆದರೆ, 1978ರ ಏಷ್ಯನ್ ಕ್ರೀಡಾಕೂಟದವರೆಗೆ ಪುರುಷರ ಹಾಕಿಯನ್ನು ಮಾತ್ರ ಆಡಿಸಲಾಗುತ್ತಿತ್ತು. ನವದೆಹಲಿಯಲ್ಲಿ ನಡೆದ 1982ರ ಏಷ್ಯನ್ ಕ್ರೀಡಾಕೂಟದಲ್ಲಿ ಮಹಿಳಾ ಹಾಕಿಯನ್ನು ಪರಿಚಯಿಸಲಾಯಿತು.

ಆರಂಭಿಕ ವರ್ಷಗಳಲ್ಲಿ ಪಾಕಿಸ್ತಾನದ ಪುರುಷರ ಹಾಕಿ ತಂಡವು ಏಷ್ಯನ್ ಗೇಮ್ಸ್‌ನಲ್ಲಿ ಪ್ರಬಲ ಶಕ್ತಿಯಾಗಿ ಹೊರಹೊಮ್ಮಿತು. ಹೆಚ್ಚಾಗಿ ಸಾಂಪ್ರದಾಯಿಕ ಎದುರಾಳಿಯಾದ ಭಾರತದ ವಿರುದ್ಧ ಎಂಬುದು ಗಮನಾರ್ಹ.
ಆ ಸಮಯದಲ್ಲಿ ಭಾರತ ಮತ್ತು ಪಾಕಿಸ್ತಾನದ ಪೈಪೋಟಿಯು ಹಾಕಿಯಲ್ಲಿ ಅತಿ ದೊಡ್ಡ ಕಾಳಗವಾಗಿತ್ತು. ಭಾರತವು ಒಲಿಂಪಿಕ್ಸ್ ವೇದಿಕೆಯಲ್ಲಿ ಅತ್ಯುತ್ತಮವಾಗಿದ್ದಾಗ, ಏಷ್ಯನ್ ಕ್ರೀಡಾಕೂಟದಲ್ಲಿ ಇದು ಉಲ್ಟಾ ಆಗಿತ್ತು.
ನಾಲ್ಕು ಬಾರಿ ಹಾಕಿ ವಿಶ್ವಕಪ್ ವಿಜೇತ ಪಾಕಿಸ್ತಾನ ತಂಡವು 1958ರ ಏಷ್ಯನ್ ಗೇಮ್ಸ್‌ನಲ್ಲಿ ಮೊದಲ ಬಾರಿಗೆ ಏಷ್ಯನ್ ಗೇಮ್ಸ್ ಪುರುಷರ ಹಾಕಿ ಚಿನ್ನದ ಪದಕವನ್ನು ಗೆದ್ದುಕೊಂಡರೆ, ಭಾರತ ಪುರುಷರ ಹಾಕಿ ತಂಡವು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟಿತು.
ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಹಾಕಿ ತಂಡವು ಮೂರು ಚಿನ್ನದ ಪದಕಗಳನ್ನು (1966, 1998 ಮತ್ತು 2014) ಗೆದ್ದಿದೆ. ಮತ್ತೊಂದೆಡೆ, ಭಾರತ ಒಂಬತ್ತು ಬೆಳ್ಳಿ ಮತ್ತು ಮೂರು ಕಂಚಿನ ಪದಕಗಳಿಗೆ ಕೊರಳೊಡ್ಡಿದೆ.
2018ರ ಜಕಾರ್ತಾ ಏಷ್ಯನ್ ಗೇಮ್ಸ್‌ನಲ್ಲಿ ಪುರುಷರ ಹಾಕಿಯಲ್ಲಿ ಜಪಾನ್ ಚಿನ್ನದ ಪದಕವನ್ನು ಗೆದ್ದರೆ, ಮಲೇಷ್ಯಾ ಬೆಳ್ಳಿ ಮತ್ತು ಭಾರತ ಕಂಚಿನ ಪದಕ ಗೆದ್ದಿತ್ತು.
2022ರ ಏಷ್ಯನ್ ಗೇಮ್ಸ್ ಪಂದ್ಯಾವಳಿಯು 2023 ಸೆಪ್ಟೆಂಬರ್ 23ರಿಂದ ಅಕ್ಟೋಬರ್ 8ರವರೆಗೆ ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯಲಿದೆ.
ಮುಂಬರುವ ಆವೃತ್ತಿಯ ಏಷ್ಯನ್ ಗೇಮ್ಸ್ ಹಾಕಿ ವಿಜೇತರು ಪ್ಯಾರಿಸ್ 2024ರ ಒಲಿಂಪಿಕ್ಸ್‌ಗೆ ನೇರವಾಗಿ ಅರ್ಹತೆ ಪಡೆಯುತ್ತಾರೆ. ಒಟ್ಟು 12 ಪುರುಷರ ತಂಡಗಳು ಹ್ಯಾಂಗ್‌ಝೌ ಕ್ರೀಡಾಕೂಟದಲ್ಲಿ ಸ್ಪರ್ಧಿಸಲಿವೆ.
1958 - ಬೆಳ್ಳಿ
1962 - ಬೆಳ್ಳಿ
1966 - ಚಿನ್ನ
1970 - ಬೆಳ್ಳಿ
1974 - ಬೆಳ್ಳಿ
1978 - ಬೆಳ್ಳಿ
1982 - ಬೆಳ್ಳಿ
1986 - ಕಂಚು
1990 - ಬೆಳ್ಳಿ
1994 - ಬೆಳ್ಳಿ
1998 - ಚಿನ್ನ
2002 - ಬೆಳ್ಳಿ
2010 - ಕಂಚು
2014 - ಚಿನ್ನ
2018 - ಕಂಚು