ಶುಕ್ರವಾರ ರಾಂಚಿಯ ಹಾಕಿ ಕ್ರೀಡಾಂಗಣದಲ್ಲಿ ನಡೆದ ಎಫ್‌ಐಎಚ್ ಹಾಕಿ ಒಲಿಂಪಿಕ್ ಕ್ವಾಲಿಫೈಯರ್ 2024 ರ ಕಂಚಿನ ಪದಕದ ಪಂದ್ಯದಲ್ಲಿ ಭಾರತೀಯ ಮಹಿಳಾ ಹಾಕಿ ತಂಡವು ನಿರಾಸೆ ಅನುಭವಿಸಿದೆ. ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಆತಿಥೇಯ ತಂಡ 0-1 ಗೋಲುಗಳ ಅಂತರದಿಂದ ಜಪಾನ್ ವಿರುದ್ಧ ಸೋಲು ಕಂಡಿತು. ಈ ಮೂಲಕ ಭಾರತ ಮಹಿಳಾ ತಂಡ ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವ ನಿರೀಕ್ಷೆ ಕೊನೆಗೊಂಡಿದೆ.
ಸೆಮಿಫೈನಲ್‌ನ ಶೂಟೌಟ್‌ನಲ್ಲಿ ಜರ್ಮನಿ ವಿರುದ್ಧ ಸೋಲು ಕಂಡು ಆಘಾತ ಅನುಭವಿಸಿತ್ತು. ಹೀಗಾಗಿ ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಗೆಲುವು ಸಾಧಿಸಿದ ತಂಡ, ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುತ್ತಿತ್ತು. ಆದರೆ ಈ ಟೂರ್ನಿಯಲ್ಲಿ ನಾಲ್ಕನೇ ಸ್ಥಾನವನ್ನು ಪಡೆದ ಭಾರತದ ಒಲಿಂಪಿಕ್ಸ್‌ಗೆ ಟಿಕೆಟ್ ಪಡೆಯುವ ಕನಸು ನುಚ್ಚುನೂರಾಗಿದೆ. ಎಂಟು ರಾಷ್ಟ್ರಗಳ ಪಂದ್ಯಾವಳಿಯ ಅಗ್ರ ಮೂರು ಹಾಕಿ ತಂಡಗಳು ಈ ವರ್ಷ ಜುಲೈ-ಆಗಸ್ಟ್‌ನಲ್ಲಿ ಫ್ರಾನ್ಸ್‌ನಲ್ಲಿ ನಡೆಯಲಿರುವ ಪ್ಯಾರಿಸ್ 2024 ಒಲಿಂಪಿಕ್ಸ್ ನಡೆಯಲಿದೆ.

ಆರಂಭದಲ್ಲಿ ಜಪಾನ್ ತಂಡದ ಆಕ್ರಮಣಕಾರಿ ಆಟಕ್ಕೆ ಮಣೆ ಹಾಕಿತು. 12ನೇ ಶ್ರೇಯಾಂಕಿತ ಜಪಾನ್ 6ನೇ ನಿಮಿಷದಲ್ಲಿ ಭಾರತದ ರಕ್ಷಣಾ ವಿಭಾಗದ ಆಟವನ್ನು ಮೆಟ್ಟಿನಿಂತು ಜಪಾನ್ ಅಬ್ಬರಿಸಿತು. ಅಲ್ಲದೆ ಈ ಅವಧಿಯಲ್ಲಿ ಭಾರತದ ಗೋಲ್ ಕೀಪರ್ ಕಣ್ಣು ತಪ್ಪಿಸಿ ಚೆಂಡನ್ನು ಗೋಲು ಪೆಟ್ಟಿಗೆ ಒಳಗೆ ತಳ್ಳುವಲ್ಲಿ ಜಪಾನ್ ಆಟಗಾರ್ತಿ ಸಫಲರಾದರು. ಈ ಅವಧಿಯಲ್ಲಿ ಭಾರತ 0-1ರಿಂದ ಹಿನ್ನಡೆ ಅನುಭವಿಸಿತು.
ಎರಡನೇ ಕ್ವಾರ್ಟರ್‌ನಲ್ಲಿ ಎರಡೂ ತಂಡಗಳು ತಮ್ಮ ರಕ್ಷಣೆಗೆ ಮಣೆ ಹಾಕಿದವು. ತಂಡಗಳ ಎಲ್ಲಾ ಪ್ರಯತ್ನಗಳ ಹೊರತಾಗಿಯೂ ಈ ಕ್ವಾರ್ಟರ್‌ನಲ್ಲಿ ಯಾವುದೇ ಗೋಲು ದಾಖಲಾಗಲಿಲ್ಲ. ಮೂರನೇ ಕ್ವಾರ್ಟರ್‌ನಲ್ಲಿ, ಭಾರತ ಆಕ್ರಮಣಕಾರಿಯಾಗಿ ಆಡಿತು, ಹಲವಾರು ಬಾರಿ ಸರ್ಕಲ್ ಪ್ರವೇಶಿಸಿದರೂ ಗೋಲು ಬಾರಿಸಲು ಸಾಧ್ಯವಾಗಲಿಲ್ಲ. ಭಾರತ ತಂಡವು ಪಂದ್ಯದ ತನ್ನ ಆರನೇ ಪೆನಾಲ್ಟಿ ಕಾರ್ನರ್ ಅನ್ನು ಪಡೆದುಕೊಂಡಿತು ಆದರೆ ತಂಡವು ಅದನ್ನು ಗೋಲಾಗಿ ಪರಿವರ್ತಿಸಲು ವಿಫಲವಾಯಿತು.

ನಿರ್ಣಾಯಕ ನಾಲ್ಕನೇ ಅವಧಿಯಲ್ಲಿ ಭಾರತ ಆಕ್ರಮಣಕಾರಿ ಆಟವಾಡಿತು. ಈ ಅವಧಿಯಲ್ಲಿ ಭಾರತದ ಮಹಿಳಾ ತಂಡ ಸಿಕ್ಕ ಅವಕಾಶವನ್ನು ಬಳಸಿಕೊಂಡು ಗೋಲು ಬಾರಿಸುವಲ್ಲಿ ವಿಫಲರಾದರು. ಈ ಅವಧಿಯಲ್ಲಿ ಮತ್ತೊಂದು ಪೆನಾಲ್ಟಿ ಕಾರ್ನರ್ ಅವಕಾಶ ಲಭಿಸಿತು. ಆದರೆ, ಇದನ್ನೂ ಬಳಸಿಕೊಳ್ಳುವಲ್ಲಿ ವಿಫಲರಾದರು.
ಪರಿಣಾಮ ಭಾರತ ವನಿತೆಯರ ತಂಡದ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವ ಕನಸು ದೂರ ಸರಿಯಿತು.