ಎರಡನೇ ಪಂದ್ಯ ಗೆದ್ದ ಭಾರತ, ಪೆನಾಲ್ಟಿ ಶೂಟೌಟ್ ಗೆದ್ದ ಜರ್ಮನಿ
ಭಾರತ ಹಾಗೂ ಜರ್ಮನಿ ತಂಡಗಳ ನಡುವೆ ನಡೆದ ದ್ವಿಪಕ್ಷೀಯ ಸರಣಿಯ ಹಾಕಿ ಟೂರ್ನಿಯ ಎರಡನೇ ಪಂದ್ಯದಲ್ಲಿ ಹರ್ಮನ್ ಪ್ರೀತ್ ಪಡೆ 5-3 ಗೋಲುಗಳ ಅಂತರದಿಂದ ಗೆಲುವು ಸಾಧಿಸಿದೆ. ಇನ್ನು ಉಭಯ ತಂಡಗಳು ತಲಾ ಒಂದೊಂದು ಪಂದ್ಯದಲ್ಲಿ ಜಯ ಸಾಧಿಸಿದ್ದರಿಂದ ಸರಣಿಯ ಫಲಿತಾಂಶ ಅರಿಯಲು ಪೆನಾಲ್ಟಿ ಶೂಟೌಟ್ ಮೊರೆ ಹೋಗಲಾಯಿತು. ಈ ವೇಳೆ ಭಾರತ 1-3ರಿಂದ ಸೋಲು ಕಂಡಿತು.
ಈಗಾಗಲೇ ಮೊದಲ ಪಂದ್ಯದಲ್ಲಿ ಗೆಲುವು ದಾಖಲಿಸಿದ್ದ ಜರ್ಮನಿ, ಪೆನಾಲ್ಟಿ ಶೂಟೌಟ್ ಗೆಲುವು ದಾಖಲಿಸಿ ಸರಿಣಿಯನ್ನು ಗೆದ್ದು ಬೀಗಿದೆ. ಭಾರತದ ಪರ ಸುಖಜೀತ್ ಸಿಂಗ್ (34, 48ನೇ ನಿಮಿಷ), ಹರ್ಮನ್ ಪ್ರೀತ್ ಸಿಂಗ್ (42, 43ನೇ ನಿಮಿಷ), ಅಭಿಷೇಕ್ (45ನೇ ನಿಮಿಷ) ಗೋಲು ಬಾರಿಸಿ ಮಿಂಚಿದರು. ಜರ್ಮನಿ ಪರ ಎಲೆನ್ ಎಂ (7, 57ನೇ ನಿಮಿಷ), ಹೆನ್ರಿಕ್ ಎಂ (60ನೇ ನಿಮಿಷ) ಗೋಲು ಬಾರಿಸಿ ಅಬ್ಬರಿಸಿದರು.

ಜರ್ಮನಿ ಮುನ್ನಡೆ
ಭಾರತದ ಮೊದಲ ಸೋಲಿನ ಒತ್ತಡವನ್ನು ಮೆಟ್ಟಿನಿಂತು ಆಡುವುದು ಕಷ್ಟವಾಗಿತ್ತು. ಆದರೆ ಇದೇ ಅವಧಿಯಲ್ಲಿ ಜರ್ಮನಿ, ಭಾರತದ ಮೇಲೆ ಮತ್ತಷ್ಟು ಒತ್ತಡವನ್ನು ಹೇರಲು ಪ್ರಯತ್ನ ನಡೆಸಿತು. ಮೊದಲಾವಧಿಯ ಆಟದಲ್ಲಿ ಜರ್ಮನಿ 1-0 ಮುನ್ನಡೆ ಸಾಧಿಸಿತು. ಈ ಅವಧಿಯಲ್ಲಿ ಭಾರತ ಗೋಲುಗಳಿಸಲು ಸಾಧ್ಯವೇ ಆಗಲಿಲ್ಲ.
ಎರಡನೇ ಅವಧಿಯಲ್ಲೂ ಉಭಯ ತಂಡಗಳು ರಕ್ಷಣಾತ್ಮಕ ಆಟಕ್ಕೆ ಮಣೆ ಹಾಕಿದವು. ಈ ಅವಧಿಯಲ್ಲಿ ಉಭಯ ತಂಡಗಳು ಗೋಲು ತಡೆಯವಲ್ಲಿ ಸಫಲವಾದವು. ಮೂರನೇ ಅವಧಿಯ ಆರಂಭದಲ್ಲಿ ಭಾರತ ಯೋಜನಾ ಬದ್ಧ ಆಟಕ್ಕೆ ಮಣೆ ಹಾಕಿತು. ಈ ಅವಧಿಯಲ್ಲಿ ಸುಖಜೀತ್ ಸಿಂಗ್ ಆಕರ್ಷಕ ಫೀಲ್ಡ್ ಗೋಲು ಬಾರಿಸಿ ಅಬ್ಬರಿಸಿದರು.
ಮೂರನೇ ಅವಧಿಯಲ್ಲಿ ಭಾರತದ ಅಬ್ಬರ
ಮೂರನೇ ಅವಧಿಯಲ್ಲಿ ಭಾರತಕ್ಕೆ ಸಾಲು ಸಾಲು ಪೆನಾಲ್ಟಿ ಅವಕಾಶಗಳು ಲಭಿಸಿದವು. ಈ ಎಲ್ಲ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡ ಭಾರತ ಅಬ್ಬರಿಸಿತು. ಭಾರತದ ಪರ ಒಂದೇ ನಿಮಿಷದ ಅಂತರದಲ್ಲಿ ನಾಯಕ ಹರ್ಮನ್ ಪ್ರೀತ್ ಸಿಂಗ್ ಎರಡು ಗೋಲು ಬಾರಿಸಿ ಅಂತರವನ್ನು ಹಿಗ್ಗಿಸಿದರು. ಈ ಅವಧಿಯ ಕೊನೆಯ ಕ್ಷಣದಲ್ಲಿ ಅಭಿಷೇಕ್ ಮತ್ತೊಂದು ಗೋಲು ಬಾರಿಸಿ ಗೋಲಿನ ಸಂಖ್ಯೆಗೆ ತಮ್ಮ ಕಾಣಿಕೆ ನೀಡಿದರು. ಈ ಮೂಲಕ ಭಾರತ 4-1 ರಿಂದ ಮುನ್ನಡೆ ಸಾಧಿಸಿತು.

ಕೊನೆಯ ಅವಧಿಯ ಆರಂಭದಲ್ಲಿ ಸುಖಜೀತ್ ತಮ್ಮ ಕಾಲತ್ಮಕತೆಯನ್ನು ಪ್ರದರ್ಶಿಸಿದರು. ಜರ್ಮನಿ ಗೋಲು ಕೀಪರ್ ಕಣ್ಣು ತಪ್ಪಿಸಿದ ಸುಖಜೀತ್ 48ನೇ ನಿಮಿಷದಲ್ಲಿ ಗೋಲು ಸಿಡಿಸಿದರು. ಜರ್ಮನಿ ಪರ ಎಲೆನ್ ಎಂ., ಹಾಗೂ ಹೆನ್ರಿಕ್ ಎಂ ತಲಾ ಒಂದು ಗೋಲು ಬಾರಿಸಿ ಅಂತರವನ್ನು ಕಡಿಮೆ ಮಾಡಿದರು.
ಉಭಯ ತಂಡಗಳು ತಲಾ ಒಂದೊಂದು ಪಂದ್ಯ ಗೆದ್ದಿದ್ದರಿಂದ, ಸರಣಿಯ ಫಲಿತಾಂಶ ಅರಿಯಲು ಪೆನಾಲ್ಟಿ ಶೂಟೌಟ್‌ನಲ್ಲಿ ಜರ್ಮನಿ ಗೆಲುವು ದಾಖಲಿಸಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications