ಪ್ಯಾರಿಸ್ ಒಲಿಂಪಿಕ್ಸ್ 2024ರಲ್ಲಿ ಕಂಚಿನ ಪದಕ ಗೆಲುವಿನ ರೂವಾರಿ ಭಾರತ ಹಾಕಿ ತಂಡದ ನಾಯಕ ಹರ್ಮನ್‌ಪ್ರೀತ್ ಸಿಂಗ್ ಅವರನ್ನು ಎಫ್‌ಐಎಚ್ ವರ್ಷದ ಆಟಗಾರ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಾಗಿದೆ. ಅಂತಾರಾಷ್ಟ್ರೀಯ ಹಾಕಿ ಫೆಡರೇಶನ್ ನೀಡುವ ಪ್ರತಿಷ್ಠಿತ ಪ್ರಶಸ್ತಿ ಇದಾಗಿದೆ.
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಹರ್ಮನ್‌ಪ್ರೀತ್ ಸಿಂಗ್ ಅಮೋಘ ಪ್ರದರ್ಶನ ನೀಡುವ ಮೂಲಕ ಭಾರತ ತಂಡವನ್ನು ಮುನ್ನಡೆಸಿದ್ದರು. 28 ವರ್ಷದ ಡಿಫೆಂಡರ್ ಹರ್ಮನ್‌ಪ್ರೀತ್ ಈ ಹಿಂದೆ 2020-21 ಮತ್ತು 2021-22ರ ಸಾಲಿನಲ್ಲಿ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಗೆದ್ದಿದ್ದರು.

2024 ರಲ್ಲಿ ಆಡಿದ ಎಲ್ಲಾ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಹರ್ಮನ್‌ಪ್ರೀತ್ ನೀಡಿದ ಪ್ರದರ್ಶನವನ್ನು ಗಣನೆಗೆ ತೆಗೆದುಕೊಂಡಿದ್ದು, ಅವರೊಂದಿಗೆ ಥಿಯೆರಿ ಬ್ರಿಂಕ್‌ಮನ್ (ನೆದರ್ಲ್ಯಾಂಡ್ಸ್), ಜೋಪ್ ಡಿ ಮೋಲ್ (ನೆದರ್ಲ್ಯಾಂಡ್ಸ್), ಹ್ಯಾನ್ಸ್ ಮುಲ್ಲರ್ (ಜರ್ಮನಿ) ಮತ್ತು ಜಾಕ್ ವ್ಯಾಲೇಸ್ (ಇಂಗ್ಲೆಂಡ್) ಅವರನ್ನು ಹೆಸರಿಸಲಾಗಿದೆ.
ಈ ಬಗ್ಗೆ ಮಾತನಾಡಿರುವ ಹರ್ಮನ್‌ಪ್ರೀತ್ ಸಿಂಗ್, 'ವರ್ಷದ ಎಫ್‌ಐಎಚ್ ಆಟಗಾರ ಪ್ರಶಸ್ತಿಗೆ ಮತ್ತೊಮ್ಮೆ ನಾಮನಿರ್ದೇಶನಗೊಂಡಿರುವುದು ನನಗೆ ದೊಡ್ಡ ಗೌರವ ಸಿಕ್ಕಂತಾಗಿದೆ. ವಿಶ್ವದ ಅತ್ಯುತ್ತಮ ಆಟಗಾರರಲ್ಲಿ ಒಬ್ಬನಾಗಲು ನನಗೆ ತುಂಬಾ ಸಂತೋಷವಾಗಿದೆ. ಆದರೆ ನನ್ನ ತಂಡದ ಬೆಂಬಲವಿಲ್ಲದೆ ಇದು ಸಾಧ್ಯವಾಗುತ್ತಿರಲಿಲ್ಲ ಎಂಬುದರಲ್ಲಿ ಸಂದೇಹವಿಲ್ಲ. ಎಫ್‌ಐಎಚ್ ಹಾಕಿ ಪ್ರೊ ಲೀಗ್ ಮತ್ತು ಪ್ಯಾರಿಸ್ 2024ರ ಒಲಿಂಪಿಕ್ ಗೇಮ್ಸ್‌ನಲ್ಲಿ ನಾನು ಗಳಿಸಿದ ಎಲ್ಲಾ ಗೋಲುಗಳು ತಂಡದಿಂದಾಗಿ ಮಾತ್ರ ಸಾಧ್ಯವಾಗಿದೆ ಎಂದು ಸಂತಸವನ್ನು ವ್ಯಕ್ತಪಡಿಸಿದ್ದಾರೆ.
ಹಾಕಿ ಕ್ಯಾಪ್ಟನ್ ಕೂಲ್ ಹರ್ಮನ್‌ಪ್ರೀತ್ ಸಿಂಗ್ ಅವರಿಗೆ ಅತ್ಯುತ್ತಮ ರಕ್ಷಣಾ ಮತ್ತು ಪೆನಾಲ್ಟಿ ಕಾರ್ನರ್‌ನಿಂದ ಅತ್ಯುತ್ತಮ ಗೋಲುಗಳನ್ನು ಗಳಿಸುವ ಸಾಮರ್ಥ್ಯವಿದೆ. ಈ ಕೌಶಲ್ಯವನ್ನು ಪ್ಯಾರಿಸ್ ಕ್ರೀಡಾಕೂಟದಲ್ಲಿ ಪ್ರದರ್ಶಿಸಿದ ಅವರು ಟೀಮ್ ಇಂಡಿಯಾ ಕಂಚಿನ ಪದಕವನ್ನು ಗೆಲ್ಲಲು ಪ್ರಮುಖ ಪಾತ್ರವಹಿಸಿದ್ದರು. ಒಲಿಂಪಿಕ್ಸ್‌ನಲ್ಲಿ 8 ಪಂದ್ಯಗಳಲ್ಲಿ 10 ಗೋಲುಗಳನ್ನು ಹೊಡೆಯುವಲ್ಲಿ ಯಶಸ್ವಿಯಾಗಿದ್ದರು. ಅದರಲ್ಲಿ 7 ಗೋಲುಗಳು ಪೆನಾಲ್ಟಿ ಕಾರ್ನರ್‌ಗಳಿಂದ ಬಂದರೆ, ಉಳಿದ 3 ಗೋಲುಗಳು ಪೆನಾಲ್ಟಿ ಸ್ಟ್ರೋಕ್‌ಗಳಿಂದ ಗಳಿಸಲಾಗಿತ್ತು.
ಒಲಿಂಪಿಕ್ ಕ್ರೀಡಾಕೂಟದ ನಂತರ ಸ್ವಲ್ಪ ವಿರಾಮದಿಂದ ಹಿಂದಿರುಗಿದ ಹರ್ಮನ್‌ಪ್ರೀತ್ ಇತ್ತೀಚಿಗ ಚೀನಾದ ಮೋಕಿಯಲ್ಲಿ ನಡೆದ ಏಷ್ಯನ್ ಹಾಕಿ ಚಾಂಪಿಯನ್ಸ್ ಟ್ರೋಫಿ 2024ರಲ್ಲಿ ಭಾರತ ತಂಡವನ್ನು ಚಾಂಪಿಯನ್ ಮಾಡಿದ್ದರು. ಈ ಟೂರ್ನಿಯಲ್ಲಿ ತಂಡವನ್ನು ನಾಯಕನಾಗಿ ಮುನ್ನಡೆಸಿದ ಅವರು ಮತ್ತೊಮ್ಮೆ ಅದ್ಭುತ ಪ್ರದರ್ಶನ ನೀಡಿ ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಪ್ರಶಸ್ತಿಯನ್ನು ಪಡೆದಿದ್ದರು.