ಮಹಿಳೆಯರ ಏಷ್ಯನ್ ಚಾಂಪಿಯನ್ ಶಿಪ್ ಟ್ರೋಫಿ ಹಾಕಿ ಟೂರ್ನಿಯ ಫೈನಲ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ ಭಾರತ ವನಿತೆಯರಯ, ಸತತ ಎರಡನೇ ಬಾರಿಗೆ ಟ್ರೋಫಿಗೆ ಮುತ್ತಿಟ್ಟಿದೆ. ಬುಧವಾರ ನಡೆದ ಫೈನಲ್ ಪಂದ್ಯದಲ್ಲಿ ಭಾರತ 1-0 ಗೋಲುಗಳಿಂದ ಚೀನಾ ತಂಡವನ್ನು ಮಣಿಸಿ ಅಬ್ಬರಿಸಿತು. ತನಗಿಂತ ಹೆಚ್ಚಿನ ಶ್ರೇಯಾಂಕಿತ ತಂಡದ ವಿರುದ್ಧ ಟೀಮ್ ಇಂಡಿಯಾ ಮಹಿಳೆಯರು ಸೊಗಸಾದ ಆಟದ ಪ್ರದರ್ಶನವನ್ನು ನೀಡಿ, ಅಭಿಮಾನಿಗಳಿಗೆ ಹಬ್ಬದೂಟವನ್ನು ಉಣ ಬಡಿಸಿದರು. ಈ ಮೂಲಕ ಟೀಮ್ ಇಂಡಿಯಾ ಮೂರನೇ ಬಾರಿಗೆ ಟ್ರೋಫಿಯನ್ನು ಎತ್ತಿ ಹಿಡಿಯಿತು.
ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡಿರುವ ಟೀಮ್ ಇಂಡಿಯಾ ತನ್ನ ಅಜೇಯ ಗೆಲುವಿನ ಓಟವನ್ನು ಮುಂದುವರೆಸಿತು. ಲೀಗ್ ಹಂತದ ಪಂದ್ಯದಲ್ಲಿ ಭಾರತ 3-0 ಗೋಲುಗಳಿಂದ ಚೀನಾ ತಂಡವನ್ನು ಮಣಿಸಿತ್ತು. ಫೈನಲ್ ಪಂದ್ಯದಲ್ಲೂ ಟೀಮ್ ಇಂಡಿಯಾ ಆತ್ಮ ವಿಶ್ವಾಸದಿಂದಲೇ ಕಣಕ್ಕೆ ಇಳಿದು ಕ್ಲಾಸಿಕ್ ಆಟದ ಪ್ರದರ್ಶನ ನೀಡಿತು. ಅಲ್ಲದೆ ಎದುರಾಳಿಗಳಿಗೆ ಗೋಲು ಬಾರಿಸುವ ಅವಕಾಶವನ್ನೇ ನೀಡದೇ, ಕೊನೆಯ ವರೆಗೂ ಸ್ಥಿರ ಪ್ರದರ್ಶನ ನೀಡಿ ಗೆಲುವು ಸಾಧಿಸಿತು.

ಜಿದ್ದಾಜಿದ್ದಿನಿಂದ ಕೂಡಿದ್ದ ಭಾರತ ಹಾಗೂ ಚೀನಾ ನಡುವಣ ಫೈನಲ್ ಪಂದ್ಯದಲ್ಲಿ ಮೊದಲಾವಧಿಯ ಆಟ ಜಿದ್ದಾಜಿದ್ದಿನಿಂದ ಕೂಡಿತ್ತು. ಆದರೆ ಈ ಅವಧಿಯಲ್ಲಿ ಉಭಯ ತಂಡದ ಆಟಗಾರ್ತಿಯರು ಅಮೋಘ ಪ್ರದರ್ಶನ ನೀಡಿದರು. ಪರಿಣಾಮ ಈ ಅವಧಿಯಲ್ಲಿ ಯಾವುದೇ ಗೋಲುಗಳ ದಾಖಲಾಗಲಿಲ್ಲ. ಇನ್ನು ಎರಡನೇ ಅವಧಿಯ ಆಟದಲ್ಲಿ ಭಾರತ ಆಕ್ರಮಣಕಾರಿ ಆಟಕ್ಕೆ ಮಣೆ ಹಾಕಿತು. ಆದರೆ ಇದರ ಲಾಭ ಸಿಗಲಿಲ್ಲ. ಚೀನಾ ತಂಡದ ರಕ್ಷಣಾ ಪಡೆಯ ಆಟಗಾರ್ತಿಯರು ಮನಮೋಹಕ ಪ್ರದರ್ಶನ ನೀಡಿದ್ದರಿಂದ ಗೆಲುವು ದಾಖಲಿಸಲು ಸಾಧ್ಯವಾಗಲಿಲ್ಲ.
ಮೂರನೇ ಅವಧಿಯ ಆರಂಭದಲ್ಲೇ ಭಾರತಕ್ಕೆ ಒಂದು ಪೆನಾಲ್ಟಿ ಕಾರ್ನರ್ ಅವಕಾಶ ಲಭಿಸಿತು. ಈ ಅವಕಾಶವನ್ನು ಎರಡೂ ಕೈಗಳಿಂದ ಬಳಸಿಕೊಂಡ ಭಾರತ, ಗೋಲು ಖಾತೆ ತೆರೆಯಿತು. ಇದೇ ಅಧಿಯ 12ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಅವಕಾಶ ಲಭಿಸಿತು. ಈ ಅವಕಾಶವನ್ನು ಬಳಸಿಕೊಳ್ಳುವಲ್ಲಿ ದೀಪಿಕಾ ವಿಫಲರಾದರು.
ನಾಲ್ಕನೇ ಅವಧಿಯಲ್ಲಿ ಗೋಲು ಬಾರಿಸಿ ಭಾರತೀಯ ಆಟಗಾರ್ತಿಯರ ಮೇಲೆ ಒತ್ತಡ ಹೇರುವ ತಂತ್ರವನ್ನು ಹೆಣೆದುಕೊಂಡಿದ್ದ ಚೀನಾ ತಂತ್ರ ಫಲಿಸಲಿಲ್ಲ. ಪರಿಣಾಮ ಭಾರತ ಮಹಿಳಾ ತಂಡ ಮೂರನೇ ಬಾರಿಗೆ ಟ್ರೋಫಿಗೆ ಮುತ್ತಿಟ್ಟಿತು. ಕೊನೆಯ ವರೆಗೂ ಭಾರತ ತಂಡದ ರಕ್ಷಣಾ ಆಟಗಾರರು ಮನಮೋಹಕ ಪ್ರದರ್ಶನ ನೀಡಿ ಗೆಲುವಿನಲ್ಲಿ ಮಿಂಚಿದರು.
ಇದಕ್ಕೂ ಮೊದಲು ನಡೆದ ಮೂರನೇ ಸ್ಥಾನಕ್ಕಾಗಿ ನಡೆದ ಕಾದಾಟದಲ್ಲಿ ಜಪಾನ್ 4-1 ಗೋಲುಗಳಿಂದ ಮಲೇಷ್ಯಾವನ್ನು ಮಣಿಸಿ ಅಬ್ಬರಿಸಿತು. ಜಪಾನ್ ಸೆಮಿಫೈನಲ್ ಕಾದಾಟದಲ್ಲಿ ಭಾರತದ ವಿರುದ್ಧ, ಮಲೇಷ್ಯಾ, ಚೀನಾ ವಿರುದ್ಧ ಸೋಲು ಕಂಡಿತ್ತು.