ಮುಂಬರುವ ಪ್ರಮುಖ ಹ್ಯಾಂಗ್‌ಝೌ ಏಷ್ಯನ್ ಗೇಮ್ಸ್‌ಗೆ ಸಜ್ಜಾಗುತ್ತಿರುವ ಹಾಕಿ ಇಂಡಿಯಾ, ಬೆಂಗಳೂರಿನಲ್ಲಿ ಆರಂಭವಾಗಿರುವ ರಾಷ್ಟ್ರೀಯ ಹಾಕಿ ಕೋಚಿಂಗ್ ಶಿಬಿರಕ್ಕೆ 39 ಸದಸ್ಯರ ಪುರುಷರ ಸಂಭಾವ್ಯ ತಂಡವನ್ನು ಆಯ್ಕೆ ಮಾಡಿದೆ.
ಆಟಗಾರರು ತಮ್ಮ ಕೌಶಲ್ಯವನ್ನು ಉತ್ತಮಪಡಿಸಿಕೊಳ್ಳಲು ಅವಕಾಶ ನೀಡುವ ಶಿಬಿರವನ್ನು ಆಗಸ್ಟ್ 21ರಿಂದ ಸೆಪ್ಟೆಂಬರ್ 18ರವರೆಗೆ ಭಾರತೀಯ ಕ್ರೀಡಾ ಪ್ರಾಧಿಕಾರ (SAI) ಕೇಂದ್ರದಲ್ಲಿ ಆಯೋಜಿಸಲಾಗಿದೆ.

ಗಮನಾರ್ಹವಾಗಿ, ಈ ಬಾರಿಯ ಏಷ್ಯನ್ ಗೇಮ್ಸ್ ಕ್ರೀಡಾಕೂಟವು ಸೆಪ್ಟೆಂಬರ್ 23ರಿಂದ ಅಕ್ಟೋಬರ್ 8ರವರೆಗೆ ಚೀನಾದಲ್ಲಿ ಆಯೋಜನೆಯಾಗುತ್ತಿದೆ.
ಆಗಸ್ಟ್ ಆರಂಭದಲ್ಲಿ ಚೆನ್ನೈನಲ್ಲಿ ದಾಖಲೆಯ ನಾಲ್ಕನೇ ಬಾರಿ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಎತ್ತಿ ಹಿಡಿದಿರುವ ಭಾರತೀಯ ಪುರುಷರ ಹಾಕಿ ತಂಡವು, ಸೆಪ್ಟೆಂಬರ್ 24ರಂದು ಉಜ್ಬೇಕಿಸ್ತಾನ್ ವಿರುದ್ಧ ಏಷ್ಯನ್ ಗೇಮ್ಸ್‌ನಲ್ಲಿ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ.
ಭಾರತ ಹಾಕಿ ತಂಡವು ಪಾಕಿಸ್ತಾನ, ಜಪಾನ್, ಬಾಂಗ್ಲಾದೇಶ, ಸಿಂಗಾಪುರ ಮತ್ತು ಉಜ್ಬೇಕಿಸ್ತಾನ್ ಜೊತೆಗೆ ಗುಂಪು ಎ ನಲ್ಲಿ ಸ್ಥಾನ ಪಡೆದಿದೆ.
"ಕಳೆದ ಕೆಲವು ತಿಂಗಳುಗಳಲ್ಲಿ ನಾವು ತಂಡವಾಗಿ ಬೆಳೆಯುತ್ತಿದ್ದೇವೆ ಮತ್ತು ನಿರಂತರವಾಗಿ ಕಲಿಯುತ್ತಿದ್ದೇವೆ ಎಂಬುದನ್ನು ನಾವು ತೋರಿಸಿದ್ದೇವೆ," ಎಂದು ಭಾರತ ಹಾಕಿ ತಂಡದ ಮುಖ್ಯ ಕೋಚ್ ಕ್ರೇಗ್ ಫುಲ್ಟನ್ ಅವರು ಹಾಕಿ ಇಂಡಿಯಾ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.
"2024ರ ಪ್ಯಾರಿಸ್ ಒಲಿಂಪಿಕ್ಸ್‌ಗೆ ಸ್ಥಾನವನ್ನು ಭದ್ರಪಡಿಸಲು ನಮ್ಮ ಹಾದಿಯಾಗಬಹುದಾದ ಹ್ಯಾಂಗ್‌ಝೌ ಏಷ್ಯನ್ ಗೇಮ್ಸ್‌ಗಾಗಿ ನಾವು ನಮ್ಮ ಸಿದ್ಧತೆಗಳನ್ನು ನಡೆಸುತ್ತಿರುವ ಕಾರಣ ಶಿಬಿರವು ನಮಗೆ ಪ್ರಮುಖವಾಗಿದೆ," ಎಂದು ತಿಳಿಸಿದರು.
"ಚೆನ್ನೈನಲ್ಲಿ ನಡೆದ 2023ರ ಹೀರೋ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ನಾವು ನಿಜವಾಗಿಯೂ ಉತ್ತಮ ಹಾಕಿ ಆಡಿದ್ದೇವೆ. ಪಂದ್ಯಾವಳಿಯಲ್ಲಿ ನಾವು ಅಜೇಯರಾಗಿ ಉಳಿದಿದ್ದೇವೆ ಎಂಬ ಅಂಶವನ್ನು ಗಮನಿಸಿದರೆ ನಾವು ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದ್ದೇವೆ ಎಂದರ್ಥ".
"ಮುಂಬರುವ ಪಂದ್ಯಾವಳಿಗಳಲ್ಲಿ ಅದನ್ನು ಮುಂದುವರಿಸಲು ನಾವು ಬಯಸುತ್ತೇವೆ. ಶಿಬಿರವು ನಮಗೆ ಕೆಲವು ಕ್ಷೇತ್ರಗಳಲ್ಲಿ ಕೆಲಸ ಮಾಡಲು ಒಂದು ಅವಕಾಶವಾಗಿದೆ," ಎಂದು ಭಾರತ ತಂಡದ ನಾಯಕ ಹರ್ಮನ್‌ಪ್ರೀತ್ ಸಿಂಗ್ ತಿಳಿಸಿದರು.
ಗೋಲ್‌ಕೀಪರ್‌ಗಳು: ಕೃಷ್ಣ ಬಹದ್ದೂರ್ ಪಾಠಕ್, ಪಿಆರ್ ಶ್ರೀಜೇಶ್, ಸೂರಜ್ ಕರ್ಕೇರಾ, ಪವನ್, ಪ್ರಶಾಂತ್ ಕುಮಾರ್ ಚೌಹಾಣ್
ಡಿಫೆಂಡರ್ಸ್: ಜರ್ಮನ್‌ಪ್ರೀತ್ ಸಿಂಗ್, ಸುರೇಂದರ್ ಕುಮಾರ್, ಹರ್ಮನ್‌ಪ್ರೀತ್ ಸಿಂಗ್, ವರುಣ್ ಕುಮಾರ್, ಅಮಿತ್ ರೋಹಿದಾಸ್, ಗುರಿಂದರ್ ಸಿಂಗ್, ಜುಗ್ರಾಜ್ ಸಿಂಗ್, ಮನದೀಪ್ ಮೋರ್, ನಿಲಮ್ ಸಂಜೀಪ್ ಕ್ಸೆಸ್, ಸಂಜಯ್, ಯಶದೀಪ್ ಸಿವಾಚ್, ದಿಪ್ಸನ್ ಟಿರ್ಕಿ, ಮಂಜೀತ್.
ಮಿಡ್‌ಫೀಲ್ಡರ್‌ಗಳು: ಮನ್‌ಪ್ರೀತ್ ಸಿಂಗ್, ಹಾರ್ದಿಕ್ ಸಿಂಗ್, ವಿವೇಕ್ ಸಾಗರ್ ಪ್ರಸಾದ್, ಮೊಯರಂಗತೇಮ್ ರವಿಚಂದ್ರ ಸಿಂಗ್, ಶಂಶೇರ್ ಸಿಂಗ್, ನೀಲಕಂಠ ಶರ್ಮಾ, ರಾಜ್‌ಕುಮಾರ್ ಪಾಲ್, ಸುಮಿತ್, ಆಕಾಶದೀಪ್ ಸಿಂಗ್, ಗುರ್ಜಂತ್ ಸಿಂಗ್, ಮೊಹಮ್ಮದ್. ರಹೀಲ್ ಮೌಸೀನ್, ಮಣಿಂದರ್ ಸಿಂಗ್.
ಫಾರ್ವರ್ಡ್ಸ್: ಎಸ್ ಕಾರ್ತಿ, ಮನ್‌ದೀಪ್ ಸಿಂಗ್, ಲಲಿತ್ ಕುಮಾರ್ ಉಪಾಧ್ಯಾಯ, ಅಭಿಷೇಕ್, ದಿಲ್ಪ್ರೀತ್ ಸಿಂಗ್, ಸುಖಜೀತ್ ಸಿಂಗ್, ಸಿಮ್ರಂಜೀತ್ ಸಿಂಗ್, ಶಿಲಾನಂದ್ ಲಾಕ್ರಾ, ಪವನ್ ರಾಜ್ಭರ್.