ಹಾಕಿ ದಂತಕತೆ, 3 ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಬಲ್ಬೀರ್ ಸಿಂಗ್ ನಿಧನ

ಮೂರು ಬಾರಿಯ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಭಾರತೀಯ ಹಾಕಿ ದಂತಕತೆ ಬಲ್‌ಬೀರ್ ಸಿಂಗ್ ವಿಧಿವಶರಾಗಿದ್ದಾರೆ. ಕಳೆದ ಎರಡು ವಾರಗಳಲ್ಲಿ ಬಲ್ಬೀರ್ ಸಿಂಗ್ ಆರೋಗ್ಯದಲ್ಲಿ ಸಾಕಷ್ಟು ಏರುಪೇರಾಗಿತ್ತು. ಅವರನ್ನು ಚಂಡಿಗಢದ ಪೋರ್ಟೀಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ನೀಡಲಾಗುತ್ತಿತ್ತು.
ಚಿಕಿತ್ಸೆ ಫಲಕಾರಿಯಾಗದೆ ಬಲ್ಬೀರ್ ಸಿಂಗ್ (95) ಸೋಮವಾರ ಮುಂಜಾನೆ ಮೃತಪಟ್ಟಿದ್ದಾರೆ. ಚಂಡಿಗಢದಲ್ಲಿ ಪುತ್ರಿ ಹಾಗೂ ಮೊಮ್ಮಗನೊಂದಿಗೆ ವಾಸವಾಗಿರುವ ಬಲ್ಬೀರ್ ಸಿಂಗ್, ನ್ಯೂಮೊನಿಯದ ಜತೆಗೆ ಅಧಿಕ ಜ್ವರದಿಂದ ಬಳಲುತ್ತಿದ್ದರು. ಉಸಿರಾಟದಲ್ಲೂ ತೀವ್ರ ಸಮಸ್ಯೆ ಕಾಣಿಸಿಕೊಂಡಿತ್ತು.
ಬಲ್ಬೀರ್ ಸಿಂಗ್ ಮೇ 18 ರಿಂದ ಅರೆ ಪ್ರಜ್ಞಾವಸ್ಥೆಯಲ್ಲಿದ್ದರು. ತೀವ್ರ ಜ್ವರ ಮತ್ತು ನ್ಯುಮೋನಿಯಾ ಕಾರಣದಿಂದ ಆಸ್ಪತ್ರೆಗೆ ದಾಖಲಾದ ಬಳಿಕ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟುವಿಕೆಯೂ ಅಧಿಕವಾಯಿತು ಎಂದು ತಿಳಿದು ಬಂದಿದೆ. ಉಸಿರಾಟದ ಸಮಸ್ಯೆ ಕಂಡು ಬಂದ ಕಾರಣ ಬಲ್ಬೀರ್ ಸಿಂಗ್ ಅವರನ್ನು ಕೊರೊನಾ ಪರೀಕ್ಷೆಗೂ ಒಳಪಡಿಸಲಾಗಿತ್ತು.
ಭಾರತ ಹಾಕಿ ತಂಡ ಸಾಧಿಸಿದ ಹಲವು ಗೆಲುವುಗಳಲ್ಲಿ ಬಲ್ಬೀರ್ ಸಿಂಗ್ ಪ್ರಮುಖ ಪಾತ್ರ ವಹಿಸಿದ್ದರು. 1948, 1952, 1956ರಲ್ಲಿ ನಡೆದ ಒಲಿಂಪಿಕ್ಸ್ ಭಾರತ ಪದಕ ಮುಡಿಗೇರಿಸಿಕೊಂಡಿತ್ತು. ಆಗಿನ ಭಾರತೀಯ ಹಾಕಿ ತಂಡದಲ್ಲಿ ಬಲ್ಬೀರ್ ಸಿಂಗ್ ಸದಸ್ಯರಾಗಿದ್ದರು.
ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ ಹೆಸರಿಸಿದ 16 ಆಧುನಿಕ ದಂತಕತೆಗಳಲ್ಲಿ ದೇಶದ ಶ್ರೇಷ್ಠ ಕ್ರೀಡಾಪಟುಗಳಲ್ಲಿ ಒಬ್ಬರೆನಿಸಿದ ಬಲ್ಬೀರ್ ಸಿಂಗ್ ಕೂಡ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಒಲಿಂಪಿಕ್ಸ್ ಹಾಕಿಯ ಫೈನಲ್ ಪಂದ್ಯದಲ್ಲಿ ವೈಯ್ಯಕ್ತಿಕವಾಗಿ ಅತಿಹೆಚ್ಚು ಗೋಲು ಗಳಿಸಿದ ದಾಖಲೆ ಬಲ್ಬೀರ್ ಸಿಂಗ್ ಅವರ ಹೆಸರಿನಲ್ಲೇ ಇದ್ದು ಅದನ್ನು ಮುರಿಯಲು ಈವರೆಗೂ ಯಾರಿಂದಲೂ ಸಾಧ್ಯವಾಗಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications