ನ್ಯೂಜಿಲೆಂಡ್ ಮಣಿಸಿ ಎಫ್‌ಐಎಚ್ ಹಾಕಿ ಮಹಿಳಾ ನೇಷನ್ಸ್ ಕಪ್ ಮುಡಿಗೇರಿಸಿಕೊಂಡ ಭಾರತ
ಆಕ್ಲೆಂಡ್: ಭಾರತ ಮಹಿಳಾ ತಂಡ ಎಫ್‌ಐಎಚ್ ಹಾಕಿ ಮಹಿಳಾ ನೇಷನ್ಸ್ ಕಪ್ 2025-26ನಲ್ಲಿ ನ್ಯೂಜಿಲೆಂಡ್ ತಂಡವನ್ನು 2-0 ಗೋಲುಗಳಿಂದ ಮಣಿಸಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ. ಈ ಗೆಲುವಿನೊಂದಿಗೆ ಭಾರತ ತಂಡ ಮುಂದಿನ ಆವೃತ್ತಿಯ ಪ್ರತಿಷ್ಠಿತ 'ಎಫ್‌ಐಎಚ್ ಹಾಕಿ ಮಹಿಳಾ ಪ್ರೊ ಲೀಗ್'ಗೆ ಅರ್ಹತೆ ಪಡೆದುಕೊಂಡಿದೆ.
ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಸ್ಥಿರ ಪ್ರದರ್ಶನ ನೀಡಿದ ಭಾರತ ತಂಡ ಎರಡನೇ ಬಾರಿಗೆ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು. ಇದಕ್ಕೂ ಮೊದಲು ಭಾರತ 2022 ರ ಉದ್ಘಾಟನಾ ಆವೃತ್ತಿಯಲ್ಲೂ ಚಾಂಪಿಯನ್ ಆಗಿತ್ತು. ಈಗ ಎರಡನೇ ಬಾರಿ ಈ ಸಾಧನೆ ಮಾಡಿದೆ. ಭಾರತದ ಪರ ನವನೀತ್ ಕೌರ್ ಮತ್ತು ಸುನೇಲಿತಾ ಟೊಪ್ಪೊ ತಲಾ ಒಂದು ಗೋಲು ಬಾರಿಸಿ ಜಯದಲ್ಲಿ ಮಿಂಚಿದರು.

ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ರಕ್ಷಣಾ ಆಟವು ಎಲ್ಲರ ಗಮನ ಸೆಳೆಯಿತು. ಈ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ಹಲವು ಬಾರಿ ಗೋಲು ಬಾರಿಸುವ ಆಸೆಯಿಂದ ಮುನ್ನಡೆದಾಗ ಭಾರತದ ರಕ್ಷಣಾ ಆಟಗಾರರು ಇವರ ಆಸೆಗೆ ಪೆಟ್ಟು ನೀಡಿದರು. ಅಲ್ಲದೆ ಭಾರತದ ಗೋಲ್ ಕೀಪರ್ ಸವಿತಾ ಎದುರಾಳಿಗಳ ಎಲ್ಲಾ ಪ್ರಯತ್ನಗಳನ್ನು ತಡೆಯುವಲ್ಲಿ ಯಶಸ್ವಿಯಾದರು.
ಪಂದ್ಯದ 4ನೇ ನಿಮಿಷದಲ್ಲೇ ಭಾರತಕ್ಕೆ ಪೆನಾಲ್ಟಿ ಕಾರ್ನರ್ ಅವಕಾಶ ಸಿಕ್ಕಿತು. ಇದರ ಸಂಪೂರ್ಣ ಲಾಭ ಪಡೆದ ನವನೀತ್ ಕೌರ್, ಅಬ್ಬರಿಸಿದರು. ಈ ಮೂಲಕ ಭಾರತ ಮೊದಲಾವಧಿಯಲ್ಲಿ 1-0 ಮುನ್ನಡೆ ಸಾಧಿಸಿತು. 15ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ, ದೀಪಿಕಾ ಹೊಡೆದ ಚೆಂಡನ್ನು ಸುನೇಲಿತಾ ಟೊಪ್ಪೊ ಅತ್ಯಾಕರ್ಷಕವಾಗಿ ಗೋಲು ಪೆಟ್ಟಿಗೆಗೆ ತಳ್ಳುವಲ್ಲಿ ಯಶಸ್ವಿಯಾದರು. ಇದರಿಂದ ಭಾರತ ಮೊದಲಾವಧಿಯಲ್ಲೇ 2-0 ಮುನ್ನಡೆ ಸಾಧಿಸಿತು.

ಪಂದ್ಯದಲ್ಲಿ ಅಮೋಘ ರಕ್ಷಣಾ ಆಟವನ್ನು ಪ್ರದರ್ಶಿಸಿದ ಭಾರತ ಮಹಿಳಾ ತಂಡ ಎದುರಾಳಿ ತಂಡಕ್ಕೆ ಗೋಲು ಬಾರಿಸಲು ಬಿಡಲೇ ಇಲ್ಲ. ಇನ್ನುಳಿದ ಮೂರು ಕ್ವಾರ್ಟರ್‌ಗಳಲ್ಲಿ ಭಾರತ ಸಹ ಯಾವುದೇ ಗೋಲು ಬಾರಿಸಲಿಲ್ಲ. ಪರಿಣಾಮ ಭಾರತ 2-0 ಯಿಂದ ಪಂದ್ಯ ಗೆದ್ದುಕೊಂಡಿತು.
ಅಜೇಯ ಓಟ
ಈ ಇಡೀ ಟೂರ್ನಮೆಂಟ್‌ನಲ್ಲಿ ಭಾರತ ತಂಡ ಒಂದೇ ಒಂದು ಪಂದ್ಯ ಸೋತಿಲ್ಲ. ಗುಂಪು ಹಂತದ ಪಂದ್ಯಗಳಲ್ಲಿ ಅಮೆರಿಕ (3-2), ಜಪಾನ್ (2-1), ಮತ್ತು ಉರುಗ್ವೆ (3-2) ತಂಡಗಳನ್ನು ಸೋಲಿಸಿದ್ದ ಭಾರತ, ಸೆಮಿಫೈನಲ್‌ನಲ್ಲಿ ಚಿಲಿ ವಿರುದ್ಧ 6-0 ಅಂತರದ ಭರ್ಜರಿ ಜಯ ಸಾಧಿಸಿ ಫೈನಲ್ ತಲುಪಿತ್ತು. ಭಾರತದ ದೀಪಿಕಾ ಪ್ರಸ್ತುತ ಟೂರ್ನಿಯಲ್ಲಿ ಒಟ್ಟು 6 ಗೋಲುಗಳನ್ನು ಬಾರಿಸಿ ಮಿಂಚಿದರು.
ಬಹುಮಾನ ಘೋಷಣೆ
ನ್ಯೂಜಿಲೆಂಡ್ ತಂಡವನ್ನು ಮಣಿಸಿದ ಟೀಮ್ ಇಂಡಿಯಾ ಆಟಗಾರ್ತಿಯರನ್ನು ಹಾಕಿ ಇಂಡಿಯಾ ಗೌರವಿಸಿದೆ. ತಂಡದ ಪ್ರತಿಯೊಬ್ಬ ಆಟಗಾರ್ತಿಗೆ ತಲಾ 3 ಲಕ್ಷ ರೂಪಾಯಿ ಹಾಗೂ ಸಹಾಯಕ ಸಿಬ್ಬಂದಿಯ ಪ್ರತಿಯೊಬ್ಬ ಸದಸ್ಯರಿಗೆ ತಲಾ 1.5 ಲಕ್ಷ ರೂಪಾಯಿ ನಗದು ಬಹುಮಾನ ಘೋಷಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications