Asian Champions Trophy Hockey: ಚೀನಾ ಮಣಿಸಿದ ಭಾರತಕ್ಕೆ ಪ್ರಶಸ್ತಿ
ಭಾರತ ಪುರುಷರ ಹಾಕಿ ತಂಡ ಏಷ್ಯನ್ ಚಾಂಪಿಯನ್ ಟ್ರೋಫಿಯಲ್ಲಿ ತನ್ನ ಅಮೋಘ ಪ್ರದರ್ಶನ ಮುಂದುವರೆಸಿದೆ. ಫೈನಲ್ ಪಂದ್ಯದಲ್ಲಿ ಭಾರತ ಆತಥೇಯ ಚೀನಾ ತಂಡವನ್ನು 1-0 ಗೋಲುಗಳಿಂದ ಮಣಿಸಿ, ದಾಖಲೆಯ ಐದನೇ ಬಾರಿಗೆ ಟ್ರೋಫಿಗೆ ಮುತ್ತಿಟ್ಟಿದೆ. ಚೊಚ್ಚಲ ಬಾರಿಗೆ ಟೂರ್ನಿಯ ಚಾಂಪಿಯನ್ ಪಟ್ಟವನ್ನು ಅಲಂಕರಿಸುವ ಚೀನಾ ಕನಸು ನುಚ್ಚುನೂರಾಗಿದೆ.
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭರ್ಜರಿ ಪ್ರದರ್ಶನ ನೀಡಿ ಕಂಚಿನ ಸಾಧನೆ ಮಾಡಿದ್ದ ಭಾರತ, ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯಲ್ಲಿ ಅಬ್ಬರಿಸಿದೆ. ಲೀಗ್ ಹಂತದ ಎಲ್ಲ ಪಂದ್ಯಗಳನ್ನು ಗೆದ್ದಿದ್ದ ಭಾರತ, ಪ್ರಶಸ್ತಿ ಸುತ್ತಿನ ಕಾದಾಟದಲ್ಲಿ ಸ್ಥಿರ ಪ್ರದರ್ಶನ ನೀಡಿ ಪ್ರಶಸ್ತಿ ಪಡೆದಿದೆ. ಭಾರತ ಸತತ ಎರಡನೇ ಬಾರಿಗೆ ಚಾಂಪಿಯನ್ ಪಟ್ಟವನ್ನು ಪಡೆದಿದೆ. ಇದಕ್ಕೂ ಮೊದಲು 2011, 2016, 2018 ಹಾಗೂ 2023ರಲ್ಲಿ ಭಾರತ ಕಪ್‌ಗೆ ಮುತ್ತಿಟ್ಟಿತ್ತು.

ಮೂರು ಅವಧಿಯಲ್ಲಿ ಗೋಲು ಬರ
ಉಭಯ ತಂಡಗಳು ಆರಂಭದಿಂದಲೂ ರಕ್ಷಣಾತ್ಮಕ ಆಟಕ್ಕೆ ಮಣೆ ಹಾಕಿದವು. ಈ ವೇಳೆ ಭಾರತ, ಎದುರಾಳಿ ತಂಡದ ರಣ ತಂತ್ರವನ್ನು ಅರಿತು, ಗೋಲು ಪೆಟ್ಟಿಗೆಯ ಹತ್ತಿರ ಹಲವು ಬಾರಿ ಚೆಂಡನ್ನು ಒಯ್ದರು, ಮೊದಲೆರೆಡು ಅವಧಿಯಲ್ಲಿ ಗೋಲು ಗಳಿಸಲು ಸಾಧ್ಯವಾಗಲಿಲ್ಲ. ಈ ವೇಳೆ ಆತಿಥೇಯ ತಂಡ ಸಹ ಅಮೋಘ ಪ್ರದರ್ಶನ ನೀಡಿ ಗಮನ ಸೆಳೆಯಿತು. ಎರಡು ಅವಧಿಯ ಆಟ ಹಾಗೂ ಮೂರನೇ ಅವಧಿಯಲ್ಲಿ ಗೋಲುಗಳ ಬರವನ್ನು ಉಭಯ ತಂಡಗಳು ಅನುಭವಿಸಿದವು.
ಎರಡನೇ ಕ್ವಾರ್ಟರ್‌ನಲ್ಲಿ ಚೀನಾದ ರಕ್ಷಣಾ ವಿಭಾಗ ಉತ್ತಮ ಪ್ರದರ್ಶನ ನೀಡಿತು. ಮೂರನೇ ಕ್ವಾರ್ಟರ್‌ನಲ್ಲಿ, ಚೀನಾ ಗೋಲು ಗಳಿಸಲು ಹಲವಾರು ದಾಳಿಗಳನ್ನು ಮಾಡಿತು, ಆದರೆ ಅವರು ಭಾರತದ ಗೋಲ್‌ಕೀಪರ್ ಕೃಷ್ಣ ಪಾಠಕ್ ಅವರ ಕಣ್ಣು ತಪ್ಪಿಸಲು ಸಾಧ್ಯವೇ ಆಗಲಿಲ್ಲ.
ಜುಗರಾಜ್ ಸಿಂಗ್ ಮಿಂಚು
ಮೂರು ಅವಧಿಯಲ್ಲಿ ಗೋಲುಗಳ ಬರವನ್ನು ಅನುಭವಿಸಿದ ಉಭಯ ತಂಡಗಳ ಆಟ ರೋಚಕತೆಯನ್ನು ಹೆಚ್ಚಿಸಿತ್ತು. ಈ ಅವಧಿಯಲ್ಲಿ ಮೊದಲ ಗೋಲು ಬಾರಿಸಲು ಎರಡೂ ತಂಡಗಳು ಜಿದ್ದಾಜಿದ್ದಿನ ಫೈಟ್ ನಡೆಸಿದವು. ಕೊನೆಯ ಅವಧಿಯ ಕೊನೆಯ ಕ್ಷಣದಲ್ಲಿ ಭಾರತದ ಪರ ಭರವಸೆಯ ಆಟಗಾರ ಜುಗರಾಜ್ ಸಿಂಗ್ ಅತ್ಯುತ್ತಮ ಫೀಲ್ಡ್ ಗೋಲು ಬಾರಿಸಿ ತಂಡಕ್ಕೆ ಪಂದ್ಯದಲ್ಲಿ 1-0 ಮುನ್ನಡೆ ತಂದುಕೊಟ್ಟರು. ಇದು ಭಾರತ ಹಾಕಿ ತಂಡದ ಗೆಲುವಿನ ನಿರೀಕ್ಷೆಯನ್ನು ಹೆಚ್ಚಿಸಿತು.
1-0 ಗೋಲುಗಳ ಮುನ್ನಡೆ ಸಾಧಿಸಿದ ಬಳಿಕ ಭಾರತ ಚೀನಾಕ್ಕೆ ಗೋಲು ಬಾರಿಸುವ ಅವಕಾಶವನ್ನು ನೀಡಲಿಲ್ಲ. ಫೈನಲ್‌ನಲ್ಲಿ ಜುಗ್ರಾಜ್ ಅವರ ಗೋಲು ತಂಡವು ಟ್ರೋಫಿ ಗೆಲ್ಲುವಲ್ಲಿ ಪ್ರಮುಖವಹಿಸಿತು.
ಹರ್ಮನ್‌ಗೆ ಸರಣಿ ಶ್ರೇಷ್ಠ ಗರಿ
ಲೀಗ್ ಹಂತದ ಎಲ್ಲ ಪಂದ್ಯಗಳನ್ನು ಗೆದ್ದು ಕೊಂಡಿದ್ದ ಭಾರತ ಸುಲಭವಾಗಿ ಸೆಮಿಫೈನಲ್ ಪ್ರವೇಶಿಸಿತು. ಉಪಾಂತ್ಯ ಪಂದ್ಯದಲ್ಲಿ ಹರ್ಮನ್ ಪ್ರೀತ್ ಸಿಂಗ್ ಪಡೆ 4-1 ಗೋಲುಗಳಿಂದ ದಕ್ಷಿಣ ಕೊರಿಯಾವನ್ನು ಸೋಲಿಸಿತು. ಟೂರ್ನಿಯುದ್ದಕ್ಕೂ ಅಮೋಘ ಪ್ರದರ್ಶನ ನೀಡಿದ ಭಾರತದ ನಾಯಕ ಹರ್ಮನ್ ಪ್ರೀತ್ ಸಿಂಗ್ ಮುಡಿಗೆ ಸರಣಿ ಶ್ರೇಷ್ಠ ಪ್ರಶಸ್ತಿ ಲಭಿಸಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications