ಆಗಸ್ಟ್ 2 ಶುಕ್ರವಾರ, ಪ್ಯಾರಿಸ್ ಒಲಿಂಪಿಕ್ಸ್ 2024ರಲ್ಲಿ ಭಾರತ ಹಾಕಿ ತಂಡವು ಘರ್ಜಿಸುತ್ತಿದೆ. ತನ್ನ ಅಂತಿಮ ಲೀಗ್ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು 3-2 ಗೋಲುಗಳಿಂದ ಭಾರತ ಸೋಲಿಸಿದೆ.
ಒಲಿಂಪಿಕ್ಸ್ ಹಾಕಿಯಲ್ಲಿ 52 ಬಳಿಕ ಆಸ್ಟ್ರೇಲಿಯಾ ಎದುರು ಭಾರತ ಗೆಲುವಿನ ನಗೆ ಬೀರಿದೆ. ಈ ಗೆಲುವಿನ ವಿಶೇಷವೆಂದರೆ ಆಸ್ಟ್ರೋ ಟರ್ಫ್‌ನಲ್ಲಿ ನಡೆದ 1972ರ ಒಲಿಂಪಿಕ್ಸ್‌ನಲ್ಲಿ ಭಾರತವು ಮೊದಲ ಬಾರಿಗೆ ಆಸ್ಟ್ರೇಲಿಯಾವನ್ನು ಸೋಲಿಸಿತು.

ಇಂದಿನ ಪಂದ್ಯದಲ್ಲಿ ಭಾರತದ ಪರ ನಾಯಕ ಹರ್ಮನ್‌ಪ್ರೀತ್ ಸಿಂಗ್ 2 ಗೋಲುಗಳನ್ನು ಹೊಡೆದು ಮಿಂಚಿದರು. ಭಾರತದ ಪರ ಅಭಿಷೇಕ್ ಮತ್ತು ಹರ್ಮನ್‌ಪ್ರೀತ್ ಸಿಂಗ್ ಆರಂಭದಲ್ಲಿ ಆಸ್ಟ್ರೇಲಿಯಾ ವಿರುದ್ಧ ಪ್ರಾಬಲ್ಯ ಸಾಧಿಸಿದರು.
ಪ್ಯಾರಿಸ್ ಒಲಿಂಪಿಕ್ಸ್ 2024ರ ಗುಂಪು ಹಂತದಲ್ಲಿ ಭಾರತ ಒಟ್ಟು 5 ಪಂದ್ಯಗಳನ್ನು ಆಡಿದೆ. ಅದರಲ್ಲಿ 3 ಪಂದ್ಯಗಳನ್ನು ಗೆದ್ದರೆ, ಒಂದರಲ್ಲಿ ಸೋಲು ಕಂಡಿದೆ. ಮತ್ತೊಂದು ಪಂದ್ಯವನ್ನು ಭಾರತ ಡ್ರಾ ಮಾಡಿಕೊಂಡಿದೆ.
ಇದೀಗ ಕ್ವಾರ್ಟರ್ ಫೈನಲ್ ತಲುಪಿರುವ ಹರ್ಮನ್‌ಪ್ರೀತ್ ಸಿಂಗ್ ಪಡೆ ಮುಂದಿನ ಪಂದ್ಯದಲ್ಲಿ ಮಿಂಚಿನ ಪ್ರದರ್ಶನ ನೀಡುವ ಮೂಲಕ ಪದಕ ಗೆಲ್ಲುವ ನಿರೀಕ್ಷೆಯಲ್ಲಿದೆ.
ಪಂದ್ಯದ ಆರಂಭದಲ್ಲೇ ಭಾರತದ ಆಟಗಾರರು ಆಕ್ರಮಣಕಾರಿ ಆಟವಾಡಲು ಶುರು ಮಾಡಿದರು. ಯಾವುದೇ ಸಂದರ್ಭದಲ್ಲೂ ಆಸ್ಟ್ರೇಲಿಯಾ ಪ್ರಾಬಲ್ಯ ಸಾಧಿಸಲು ಭಾರತ ಬಿಡಲಿಲ್ಲ. ಇದರ ಫಲವಾಗಿ ಭಾರತ ಮೊದಲ ಕ್ವಾರ್ಟರ್‌ನಲ್ಲಿ ಎರಡು ಗೋಲು ಗಳಿಸುವ ಮೂಲಕ ದೊಡ್ಡ ಮುನ್ನಡೆ ಸಾಧಿಸಿತು.
ಮೊದಲ ಗೋಲು ಅಭಿಷೇಕ್ ಗಳಿಸಿದರೆ, ಎರಡನೇ ಗೋಲು ನಾಯಕ ಹರ್ಮನ್‌ಪ್ರೀತ್ ಸಿಂಗ್ ಹೊಡೆದರು. ಭಾರತವು ಪೆನಾಲ್ಟಿ ಕಾರ್ನರ್‌ನ ಸಂಪೂರ್ಣ ಲಾಭವನ್ನು ಪಡೆದರು. ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಹರ್ಮನ್‌ಪ್ರೀತ್ ಸಿಂಗ್ ಅವರ ಐದನೇ ಗೋಲು ಇದಾಗಿತ್ತು.
ವಿರಾಮದ ವೇಳೆಗೆ ಭಾರತ 2-1 ಮುನ್ನಡೆ ಕಾಯ್ದುಕೊಂಡಿತ್ತು. ಆದಾಗ್ಯೂ, ಆಸ್ಟ್ರೇಲಿಯಾ ಗೋಲು ಗಳಿಸುವ ಮೂಲಕ ಪುನರಾಗಮನ ಮಾಡಿತ್ತು. ಆದರೆ ಅಷ್ಟರೊಳಗೆ ಭಾರತ ಮತ್ತೊಂದು ಗೋಲು ದಾಖಲಿಸಿತ್ತು. ಈ ಬಾರಿಯೂ ನಾಯಕ ಹರ್ಮನ್‌ಪ್ರೀತ್ ಸಿಂಗ್ ಭಾರತವನ್ನು 3-1 ಮುನ್ನಡೆ ಸಾಧಿಸಿದರು.
ಹರ್ಮನ್‌ಪ್ರೀತ್ ಸಿಂಗ್ ಪೆನಾಲ್ಟಿ ಸ್ಟ್ರೋಕ್ ಅನ್ನು ಗೋಲಾಗಿ ಪರಿವರ್ತಿಸಿದರು. ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಹರ್ಮನ್‌ಪ್ರೀತ್ ಸಿಂಗ್ ಅವರ ಈ ಆರನೇ ಗೋಲನ್ನು ಅಭಿಮಾನಿಗಳಲ್ಲಿ ಸಂತಸ ಮೂಡಿಸಿತು. ಇದಾದ ಬಳಿಕ ಮೂರನೇ ಕ್ವಾರ್ಟರ್ ಅಂತ್ಯದವರೆಗೂ ಭಾರತ ಮುನ್ನಡೆಯಲ್ಲಿತ್ತು.
ನಾಲ್ಕನೇ ಕ್ವಾರ್ಟರ್‌ನಲ್ಲಿ ಆಸ್ಟ್ರೇಲಿಯಾಕ್ಕೆ ಪೆನಾಲ್ಟಿ ಕಾರ್ನರ್ ಸಿಕ್ಕಿತು. ಇದರ ಲಾಭ ಪಡೆದ ಬ್ಲೇಕ್ ಗೋವರ್ಸ್ ಕೊನೆಯ
5 ನಿಮಿಷಗಳು ಉಳಿದಿರುವಾಗ ಗೋಲು ಹೊಡೆದರು. ಇಲ್ಲಿಂದ 3-2 ಪಂದ್ಯವನ್ನು ಸಮಬಲಗೊಳಿಸಲು ಆಸ್ಟ್ರೇಲಿಯಾಕ್ಕೆ ಉತ್ತಮ ಅವಕಾಶವಿತ್ತು.
ಆದರೆ ಭಾರತದ ಆಟಗಾರರು ಇದಕ್ಕೆ ಅವಕಾಶ ನೀಡಲಿಲ್ಲ. ಕೊನೆಯ ಕೆಲವು ಸೆಕೆಂಡ್‌ಗಳಲ್ಲಿ ಆಸ್ಟ್ರೇಲಿಯ ಸಮಬಲದ ಗೋಲು ಗಳಿಸಲು ಸಾಕಷ್ಟು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಪಿಆರ್ ಶ್ರೀಜೇಶ್ ಅವರ ಅದ್ಭುತ ಗೋಲ್ ಕೀಪಿಂಗ್ ಭಾರತದ ಗೆಲುವಿನಲ್ಲಿ ದೊಡ್ಡ ಪಾತ್ರ ವಹಿಸಿತು.