ಜೂನಿಯರ್ ಏಷ್ಯಾ ಕಪ್ ಹಾಕಿಯಲ್ಲಿ ಭಾರತ ಮತ್ತೊಮ್ಮೆ ಪ್ರಾಬಲ್ಯ ಮೆರೆದಿದ್ದು ಟೂರ್ನಿಯ ಇತಿಹಾಸದಲ್ಲಿ ನಾಲ್ಕನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿದ ಸಾಧನೆ ಮಾಡಿದೆ. ಗುರುವಾರ ನಡೆದ ಜೂನಿಯರ್ ಪುರುಷರ ಏಷ್ಯಾಕಪ್ ಹಾಕಿ ಟೂರ್ನಿಯ ಫೈನಲ್ ಪಂದ್ಯದಲ್ಲಿ ಬದ್ಧ ಎದುರಾಳಿ ಪಾಕಿಸ್ತಾನ ತಂಡವನ್ನು ಮಣಿಸುವ ಮೂಲಕ ಈ ಸಾಧನೆ ಮಾಡಿದೆ ಭಾರತ ಜೂನಿಯರ್ ಹಾಕಿ ತಂಡ.
ಫೈನಲ್ ಪಂದ್ಯದಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಚಾಂಪಿಯನ್ ಪಟ್ಟಕ್ಕಾಗಿ ಕಾದಾಟ ನಡೆಸಿದ್ದು ಈ ಕದನದಲ್ಲಿ ಭಾರತ ತಂಡ ಪಾಕಿಸ್ತಾನವನ್ನು 2-1 ಅಂತರದಿಂದ ಮಣಿಸುವಲ್ಲಿ ಯಶಸ್ವಿಯಾಯಿತು. ಭಾರತದ ಪರವಾಗಿ 13ನೇ ನಿಮಿಷದಲ್ಲಿ ಅಂಗದ್ ಬಿರ್ ಸಿಂಗ್ ಹಾಗೂ ಅರೈಜೀತ್ ಸಿಂಗ್ ಹುಂಡಾಲ್ 20ನೇ ನಿಮಿಷದಲ್ಲಿ ಗೋಲು ಗಳಿಸಿ ತ,ಡದ ಗೆಲುವಿಗೆ ಕಾರಣವಾದರು. ಪಾಕಿಸ್ತಾನದ ಪರವಾಗಿ ಬಂದ ಏಕೈಕ ಗೋಲನ್ನು ಅಬ್ದುಲ್ ಬಶರತ್ 37ನೇ ನಿಮಿಷದಲ್ಲಿ ಬಾರಿಸಿದರು.

ಇನ್ನು ಭಾರತ ಜೂನಿಯರ್ ಮೆನ್ಸ್ ಏಷ್ಯಾ ಕಪ್ ಟೂರ್ನಿಯಲ್ಲಿ ಈ ಹಿಂದೆ 2004, 2008 ಹಾಗೂ 2015ರಲ್ಲಿ ಚಾಂಪಿಯನ್ ಪಟ್ಟಕ್ಕೇರಿತ್ತು. ಇದೀಗ ನಾಲ್ಕನೇ ಬಾರಿಗೆ ಈ ಸಾಧನೆ ಮಾಡಿದಂತಾಗಿದೆ. ಇನ್ನು ಪಾಕಿಸ್ತಾನ ತಂಡ ಮೂರು ಬಾರಿ ಚಾಂಪಿಯನ್ ಎನಿಸಿಕೊಂಡಿದ್ದು 1987, 1992 ಹಾಗೂ 1996ರಲ್ಲಿ ಚಾಂಪಿಯನ್ ಎನಿಸಿಕೊಂಡಿತ್ತು.
ಇನ್ನು ಈ ಪಂದ್ಯದಲ್ಲಿ ಎರಡು ತಂಡಗಳು ಕೂಡ ಆಕ್ರಮಣಕಾರಿ ಆಟಕ್ಕೆ ಮುಂದಾಯಿತು. ಈ ಪೈಪೋಟಿಯಲ್ಲಿ 13ನೇ ನಿಮಿಷದಲ್ಲಿ ಮೊದಲ ಗೋಲು ಗಳಿಸುವ ಮೂಲಕ ಅಂಗದ್ ಬಿರ್ ಸಿಂಗ್ ಭಾರತಕ್ಕೆ ಮೊದಲ ಮೇಲುಗೈ ಒದಗಿಸಿದರು. ಇನ್ನು ಈ ಟೂರ್ನಿಯಲ್ಲಿ ಭಾರತದ ಪರವಾಗಿ ಅತಿ ಹೆಚ್ಚು ಗೋಲುಗಳಿಸಿರುವ ಅರೈಜೀತ್ ಸಿಂಗ್ ಫೈನಲ್ ಪಂದ್ಯದಲ್ಲಿಯೂ ಭಾರತದ ಪರ ಗೋಲು ಸಿಡಿಸಿದರು. ಎರಡನೇ ಕ್ವಾರ್ಟರ್ ಆರಂಭವಾದ ಐದನೇ ನಿಮಿಷದಲ್ಲಿ ಅರೈಜಿತ್ ಓ ಗೋಲು ಸಿಡಿಸಿದ್ದು ಮುನ್ನಡೆಯನ್ನು ಹೆಚ್ಚಿಸಿದರು.
ಇನ್ನು ಈ ಹಿನ್ನೆಡೆಯಿಮದ ಹೊರಬರಲು ಪಾಕಿಸ್ತಾನ ತಮಡ ಸಾಕಷ್ಟು ಪ್ರಯತ್ನ ನಡೆಸಿತಾದರೂ ಭಾರತದ ಸಂಘಟಿತ ಪ್ರದರ್ಶನದಿಂದಾಗಿ ಅದು ಸಾಧ್ಯವಾಗಲಿಲ್ಲ. ಆದರೆ 38ನೇ ನಿಮಿಷದಲ್ಲಿ ಪಾಕ್ ಪರ ಏಕೈಕ ಗೋಲು ಸಿಡಿಯಿತು. ಆದರೆ ಬಳಿಕ ಭಾರತ ತಮಡದ ವಿರುದ್ಧ ಗೋಲು ಗಳಿಸುವಲ್ಲಿ ಪಾಕಿಸ್ತಾನ ವಿಫಲವಾಗಿ ಶರಣಾಗಿದೆ.
ಇನ್ನು ಈ ದಾಖಲೆಯ ಸಾಧನೆಯ ಜೊತೆಗೆ ಭಾರತ ಜೂನಿಯರ್ ಹಾಕಿ ತಂಡ ಮಲೇಷ್ಯಾದಲ್ಲಿ ನಡೆಯಲಿರುವ ಎಫ್‌ಐಎಚ್ ಪುರುಷರ ಜೂನಿಯರ್ ವಿಶ್ವಕಪ್‌ಗೆ ಅರ್ಹತೆ ಸಂಪಾದಿಸಿದೆ. ತಂಡದ ಈ ಸಾಧನೆಯನ್ನು ಗುರುತಿಸಿ ಹಾಕಿ ಇಂಡಿಯಾ ಪ್ರತಿ ಆಟಗಾರನಿಗೆ ನಗದು ಬಹುಮಾನ ಘೋಷಿಸಿದೆ. ಪ್ರತಿ ಆಟಗಾರರರಿಗೆ ತಲಾ 2 ಲಕ್ಷ ರೂಪಾಯಿ ಮತ್ತು ಪ್ರತಿ ಸಹಾಯಕ ಸಿಬ್ಬಂದಿಗೆ 1 ಲಕ್ಷ ರೂಪಾಯಿ ನಗದು ಬಹುಮಾನವನ್ನು ಘೋಷಣೆ ಮಾಡಿದೆ.