ಕೊಡಗಿನಲ್ಲಿ ಹಾಕಿನಮ್ಮೆ ಹುಟ್ಟಿಕೊಂಡ ವಿಶಿಷ್ಟ ಕಥೆ
ಅದು ಹಲವು ದಶಕಗಳ ಹಿಂದಿನ ಕಥೆ. ಆಗಿನ್ನೂ ಕುಟ್ಟಪ್ಪರವರು ಬಾಲಕ ಅವರನ್ನು ಎಲ್ಲರೂ ಪ್ರೀತಿಯಿಂದ ಕುಟ್ಟಣಿ ಎಂದೇ ಕರೆಯುತ್ತಿದ್ದರು. ಅವರಿಗೆ ಬಾಲ್ಯದಿಂದಲೇ ಹಾಕಿ ಆಟದ ಬಗ್ಗೆ ಎಲ್ಲಿಲ್ಲದ ವ್ಯಾಮೋಹ ಹಾಗಾಗಿ ತಮ್ಮ ವಯಸ್ಸಿನ ಬಾಲಕರನ್ನು ಸೇರಿಸಿಕೊಂಡು ಕಾಡುಮರದಿಂದ ತಾವೇ ಕೆತ್ತಿ ತಯಾರಿಸಿದ ಸ್ಟಿಕ್‌ನ್ನು ಹಿಡಿದು ರಬ್ಬರ್ ಚೆಂಡನ್ನು ನೂಕುತ್ತಾ ಕುಗ್ರಾಮ ಕರಡದ ಮೈದಾನ ತುಂಬಾ ಧೂಳೆಬ್ಬಿಸುತ್ತಾ ಹಾಕಿ ಆಟವನ್ನಾಡುತ್ತಿದ್ದರು.
ಆದರೆ ಮುಂದೊಂದು ದಿನ ಇದೇ ಬಾಲಕ ಕೊಡಗಿನಲ್ಲಿ ಕೊಡವ ಕುಟುಂಬಗಳ ನಡುವಿನ ಹಾಕಿನಮ್ಮೆಯ ಹುಟ್ಟಿಗೆ ಕಾರಣನಾಗಿ ಹಾಕಿನಮ್ಮೆಯ ಜನಕ ಎಂದೇ ಹೆಸರು ಮಾಡುತ್ತಾನೆ ಎಂಬುವುದನ್ನು ಯಾರೂ ಊಹಿಸಿರಲಿಲ್ಲ. ಹಾಕಿ ಆಟದ ಬಗ್ಗೆ ಉತ್ಸಾಹ ಹೊಂದಿದ್ದ ಅವರು ಕೊಡಗಿನಲ್ಲಿ ಹಾಕಿ ಕ್ರೀಡೆಯನ್ನು ಶಾಶ್ವತವಾಗಿ ಉಳಿಸಿ ಬೆಳೆಸಲು ಕಂಕಣತೊಟ್ಟು ನಿಂತರು.

ಅವರು ಕೊಡಗಿನಲ್ಲಿ ಅಡ್ಡಾಡುವಾಗಲೆಲ್ಲಾ ಮೈದಾನದಲ್ಲಿ ಯುವಕರು ಸ್ಟಿಕ್ ಹಿಡಿದು ಆಡುತ್ತಿದ್ದ ದೃಶ್ಯಗಳು ಕಂಡು ಬರುತ್ತಿತ್ತು. ಈ ಸಂದರ್ಭ ಅವರ ತಲೆಯಲ್ಲಿ ಆಲೋಚನೆಯೊಂದು ಸುಳಿದಾಡ ತೊಡಗಿತ್ತು. ಕೊಡಗಿನಲ್ಲಿ ಕೊಡವ ಕುಟುಂಬಗಳಲ್ಲಿ ಹಲವಾರು ಮಂದಿ ಹಾಕಿ ಕ್ರೀಡೆಯತ್ತ ಒಲವು ಹೊಂದಿದ್ದಾರೆ. ಅಂತಹವರಿಗೆ ಹಾಕಿ ಪಂದ್ಯಾವಳಿಯನ್ನು ಏರ್ಪಡಿಸಿ ಏಕೆ ಪ್ರೋತ್ಸಾಹ ನೀಡಬಾರದು ಎಂದು ತಮ್ಮನ್ನು ಪ್ರಶ್ನಿಸಿಕೊಂಡ ಅವರು ಅದನ್ನು ಕಾರ್ಯರೂಪಕ್ಕೆ ತರುವಲ್ಲಿ ಕಾರ್ಯಪ್ರವೃತ್ತರಾದರು.
ಕೊಡವ ಕುಟುಂಬಗಳ ಆಟಗಾರರಿಗಾಗಿ ಹಾಕಿ ಉತ್ಸವ ನಡೆಸುವ ಬಗ್ಗೆ ಕುಟುಂಬಗಳ ಹಿರಿಯರ, ಉತ್ಸಾಹಿ ಆಟಗಾರರೊಂದಿಗೆ ಚರ್ಚೆ ನಡೆಸಿ ಪ್ರತಿವರ್ಷ ಒಂದೊಂದು ಕುಟುಂಬ ಉತ್ಸವದ ಸಾರಥ್ಯ ವಹಿಸುವಂತೆಯೂ, ಯಾವ ಕುಟುಂಬಗಳು ಪಂದ್ಯಾವಳಿಯ ಸಾರಥ್ಯ ವಹಿಸುತ್ತವೆಯೋ ಆ ಕುಟುಂಬದ ಹೆಸರಿನ ಕಪ್‌ನ್ನು ವಿಜೇತ ತಂಡಕ್ಕೆ ನೀಡಲು ತೀರ್ಮಾನಿಸಲಾಯಿತು.
1997ರಲ್ಲಿ ವೀರಾಜಪೇಟೆಯ ಪುಟ್ಟ ಗ್ರಾಮ ಪಾಂಡಂಡ ಕುಟ್ಟಪ್ಪರವರ ಹುಟ್ಟೂರಾದ ಕರಡದ ಮೈದಾನದಲ್ಲಿಯೇ ಹಾಕಿನಮ್ಮೆಯನ್ನು ಆರಂಭಿಸಲಾಯಿತು. ಪಾಂಡಂಡ ಕುಟುಂಬವೇ ಸಾರಥ್ಯ ವಹಿಸಿಕೊಂಡಿತು. ಆರಂಭದ ವರ್ಷ ಸುಮಾರು 60 ಕುಟುಂಬಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದು, ಕಲಿಯಂಡ ಕುಟುಂಬದ ತಂಡ ಕಪ್ ಒಡೆತನ ಸಾಧಿಸಿತು. ಆರಂಭದ ಪಂದ್ಯಾವಳಿಯಿಂದ ಇಲ್ಲಿಯವರೆಗೆ ಗಮನಿಸಿದರೆ ಮೊದಲು ಕೇವಲ ಪಂದ್ಯಾವಳಿಯಾಗಿದ್ದದ್ದು ನಂತರದ ವರ್ಷಗಳಲ್ಲಿ ಅದೊಂದು ಉತ್ಸವವಾಗಿ ಮಾರ್ಪಾಡಾಯಿತಲ್ಲದೆ, ಅಭಿವೃದ್ಧಿಯ ಪಥದಲ್ಲಿ ಸಾಗತೊಡಗಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications