ಪ್ಯಾರಿಸ್ ಒಲಿಂಪಿಕ್ಸ್ ಹಾಕಿ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತ ನಿರಾಸೆ ಕಂಡಿದೆ. ಫೈನಲ್ ಪ್ರವೇಶಿಸುವ ಕನಸು ಕಂಡಿದ್ದ ಹರ್ಮನ್ ಪ್ರೀತ್ ಸಿಂಗ್ ಪಡೆಗೆ ಆಘಾತವಾಗಿದೆ. ಈಗ ಭಾರತ ಕಂಚಿನ ಪದಕಕ್ಕಾಗಿ ಹೋರಾಟವನ್ನು ನಡೆಸಲಿದೆ.
ಮಂಗಳವಾರ ನಡೆದ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತ 2-3 ಗೋಲುಗಳಿಂದ ಜರ್ಮನಿ ವಿರುದ್ಧ ಸೋಲು ಕಂಡಿತು. ಕಳೆದ ಬಾರಿಯ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕಕ್ಕಾಗಿ ಫೈಟ್ ನಡೆಸಿದ್ದಾಗ ಭಾರತ ಈ ಪಂದ್ಯದಲ್ಲಿ ಅಮೋಘ ಪ್ರದರ್ಶನ ನಿಡಿ ಜಯ ಸಾಧಿಸಿತ್ತು. ಆದರೆ ಮಂಗಳವಾರ ನಿರಾಸೆ ಕಂಡಿದೆ. ಈ ಮೂಲಕ ಭಾರತ ಹಾಕಿ ತಂಡ ಬಂಗಾರ ಗೆಲ್ಲುವ ಕನಸು ಭಗ್ನ ಗೊಂಡಿದೆ.

ಭಾರತ ಹಾಗೂ ಜರ್ಮನಿ ತಂಡಗಳು ಸೆಮಿಫೈನಲ್ ಪಂದ್ಯದಲ್ಲಿ ಕಾದಾಟ ನಡೆಸಿದವು. ಈ ವೇಳೆ ಭಾರತದ ಆರಂಭ ಭರ್ಜರಿಯಾಗಿತ್ತು. ಮೊದಲ ಆರಂಭದಲ್ಲಿ ಸಿಕ್ಕ ಅವಕಾಶವನ್ನು ಭಾರತದ ಕ್ಯಾಪ್ಟನ್ ಹರ್ಮನ್ ಪ್ರೀತ್ ಸಿಂಗ್ ತಂಡಕ್ಕೆ ಮುನ್ನಡೆ ದೊರಕಿಸಿಕೊಡುವಲ್ಲಿ ಸಫಲರಾದರು. ಏಳನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಅವಕಾಶವನ್ನು ಹರ್ಮನ್ ಬಳಸಿಕೊಂಡು ಅಬ್ಬರಿಸಿದರು. ಈ ಅವಧಿಯಲ್ಲಿ ಭಾರತ 1-0 ಗೋಲುಗಳಿಂದ ಮುನ್ನಡೆ ಸಾಧಿಸಿತು.
ಎರಡನೇ ಅವಧಿಯ ಆರಂಭದಿಂದಲೂ ಜರ್ಮನಿ ಅಮೋಘ ಆಟದ ಪ್ರದರ್ಶನ ನೀಡಿತು. ಆಕ್ರಮಣಕಾರಿ ಆಟಕ್ಕೆ ಮಣೆ ಹಾಕಿದ ಜರ್ಮನಿ ಸಿಕ್ಕ ಅವಕಾಶದಲ್ಲಿ ಗೋಲು ಬಾರಿಸಿತು. 18ನೇ ನಿಮಿಷದಲ್ಲಿ ಜರ್ಮನಿ ಗೋಲು ಬಾರಿಸಿ ಅಬ್ಬರಿಸಿತು. ಈ ಮೂಲಕ ಜರ್ಮನಿ ಸಹ ಅಂಕಗಳಿಕೆಯಲ್ಲಿ ಸಮನಾಗಿಸಿತು.

ಎರಡನೇ ಅವಧಿಯಲ್ಲಿ ಜರ್ಮನಿ ಎಚ್ಚರಿಕೆ ಆಟವನ್ನು ಆಡಿತು. ಅಲ್ಲದೆ ಭಾರತದ ರಕ್ಷಣಾ ವಿಭಾಗಕ್ಕೆ ಪದೇ ಪದೇ ಪ್ರಶ್ನೆಗಳನ್ನು ಕೇಳುತ್ತಲೆ ಸಾಗಿತು. ಈ ವೇಳೆ ಕ್ರಿಸ್ಟಪೋರ್‌ಗೆ ಸಿಕ್ಕ ಪೆನಾಲ್ಟಿ ಅವಕಾಶವನ್ನು ಜರ್ಮನಿ ಬಳಸಿಕೊಂಡಿತು. 27ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಅವಕಾಶವನ್ನು ತಡೆಯುವಲ್ಲಿ ವಿಫಲವಾದ ಭಾರತ ಹಿನ್ನಡೆ ಅನುಭವಿಸಿತು.
ಮೂರನೇ ಅವಧಿಯ ಆರನೇ ನಿಮಿಷದಲ್ಲಿ ಭಾರತಕ್ಕೆ ಪೆನಾಲ್ಟಿ ಕಾರ್ನರ್ ಅವಕಾಶವೊಂದು ಲಭಿಸಿತು. ಈ ಅವಕಾಶವನ್ನು ಬಳಸಿಕೊಂಡ ಹರ್ಮನ್ ಚೆಂಡು ಗೋಲು ಪೆಟ್ಟಿಗೆಯತ್ತ ನೂಕಿದರು. ಆದರೆ ಚೆಂಡು ಜರ್ಮನಿ ಡಿಫೆಂಡರ್ ಬ್ಯಾಟ್‌ಗೆ ಬಡೆಯಿತು. ಅಲ್ಲಿಯೆ ಇದ್ದು ಸುಖಜೀತ್ ಸಿಂಗ್ ಅಮೋಘ ಪ್ರದರ್ಶನ ನೀಡಿದ ಫಲವಾಗಿ ಭಾರತ ಸಮಬಲ ಸಾಧಿಸಿತು.
ಉಭಯ ತಂಡಗಳು ಕೊನೆಯ ಅವಧಿಯಲ್ಲಿ ಕೆಚ್ಚೆದಯ ಆಟದ ಪ್ರದರ್ಶನ ನೀಡಿದವು. ಈ ವೇಳ ಜರ್ಮನ್ ಆಕ್ರಮಣಕಾರಿ ಆಟಕ್ಕೆ ಮಣೆ ಹಾಕಿತು. ಈ ಅವಧಿಯಲ್ಲಿ ಭಾರತ ಸಹ ಹಲವು ಬಾರಿ ಡಿ ಪ್ರವೇಶಿಸಿ ಚೆಂಡನ್ನು ಎದುರಾಳಿ ಗೋಲು ಪೆಟ್ಟಿಗೆಯ ಒಳಗೆ ನೂಕಲು ಪ್ರಯತ್ನಿಸಿತು. ಆದರೆ ಅದು ಸಾಧ್ಯವಾಗಲಿಲ್ಲ.
ಪಂದ್ಯದ 54ನೇ ನಿಮಿಷದಲ್ಲಿ ಜರ್ಮನಿ ಆಟಗಾರರ ಮುಖದಲ್ಲಿ ಮಂದಹಾಸ ಮೂಡಿಸುವ ಕೆಲಸವನ್ನು ಮಾರ್ಕೊ ಮಾಡಿದರು. ಇವರು ಸಹ ಸಿಕ್ಕ ಅವಕಾಶದಲ್ಲಿ ಗೋಲು ಬಾರಿಸಿ ತಂಡಕ್ಕೆ ಮುನ್ನಡೆ ತಂದು ಕೊಟ್ಟರು.
ಕೊನೆಯ ಆರು ನಿಮಿಷದಲ್ಲಿ ಗೋಲು ಬಾರಿಸುವ ಅವಕಾಶವನ್ನು ಪಡೆದ ಭಾರತೀಯ ಆಟಗಾರರು ಈ ಒತ್ತಡವನ್ನು ಮೆಟ್ಟಿ ನಿಲ್ಲುವಲ್ಲಿ ವಿಫಲರಾದರು. ಪರಿಣಾಮ ಭಾರತ ಪಂದ್ಯವನ್ನು ಸೋತಿತು. ಇನ್ನು ಭಾರತ ಗುರುವಾರ ಕಂಚಿನ ಪದಕಕ್ಕಾಗಿ ನಡೆಯುವ ಹೋರಾಟದಲ್ಲಿ ಸ್ಪೇನ್ ವಿರುದ್ಧ ಸೆಣಸಾಟ ನಡೆಸಲಿದೆ.