ಒಲಿಂಪಿಕ್ಸ್: ಕಂಚಿನ ಪದಕಕ್ಕಾಗಿ ನಡೆಯುವ ಸೆಣೆಸಾಟದಲ್ಲಿ ಭಾರತ ಹಾಕಿ ತಂಡಕ್ಕೆ ಜರ್ಮನಿ ಎದುರಾಳಿ

ಟೋಕಿಯೋ, ಆಗಸ್ಟ್ 3: ಅದ್ಭುತ ಪ್ರದರ್ಶನದ ಮೂಲಕ ಸೆಮಿಫೈನಲ್‌ಗೆ ಪ್ರವೇಶಿಸಿದ್ದ ಭಾರತೀಯ ಹಾಕಿ ತಂಡ ಸೆಮಿಫೈನಲ್‌ನಲ್ಲಿ ಮುಗ್ಗರಿಸಿತು. ಬೆಲ್ಜಿಯಂ ವಿರುದ್ಧದ ಪಂದ್ಯದಲ್ಲಿ ಭಾರತ ಪುರುಷರ ತಂಡ 2-5 ಗೋಲುಗಳ ಅಂತರ ಎದುರಾಳಿಗೆ ಶರಣಾಗಿದೆ. ಹೀಗಾಗಿ ಭಾರತ ಹಾಕಿ ತಂಡ ಫೈನಲ್ ಪಂದ್ಯಕ್ಕೆ ಅರ್ಹತೆಯನ್ನು ಪಡೆದು ಚಿನ್ನದ ಪದಕ ಅಥವಾ ಬೆಳ್ಳಿಯ ಪದಕ ಗೆಲ್ಲುವ ಅವಕಾಶವನ್ನು ಕಳೆದುಕೊಂಡಿದೆ. ಆದರೆ ಭಾರತದ ಹೋರಾಟ ಇಲ್ಲಿಗೆ ಅಂತ್ಯವಾಗಿಲ್ಲ. ಕಂಚಿನ ಪದಕವನ್ನು ಗೆದ್ದು ಹಾಕಿಯಲ್ಲಿ ನಾಲ್ಕು ದಶಕದಿಂದ ಎದುರಿಸುತ್ತಿರುವ ಒಲಿಂಪಿಕ್ಸ್ ಪದಕದ ಬರವನ್ನು ನೀಗಿಸಿಕೊಳ್ಳುವ ಅವಕಾಶ ಇನ್ನೂ ಇದೆ.
ಕಂಚಿನ ಪದಕವನ್ನು ಗೆಲ್ಲಬೇಕಾದರೆ ಭಾರತ ಪ್ಲೇಆಫ್ ಪಂದ್ಯದಲ್ಲಿ ಗೆಲ್ಲಬೇಕಿದೆ. ಈ ಪಂದ್ಯವನ್ನು ಗೆದ್ದರೆ ಭಾರತ ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಮೂರನೇ ಸ್ಥಾನಿಯಾಗಿ ಕ್ರೀಡಾಕೂಟವನ್ನು ಮುಗಿಸಲಿದೆ. ಹೀಗಾಗಿ ಕಂಚಿನ ಪದಕ ಭಾರತದ ಪಾಲಾಗಲಿದೆ. ಈ ಪ್ಲೇ ಆಫ್‌ಗೆ ಭಾರತದ ಎದುರಾಳಿ ಯಾರು ಎಂಬ ಪ್ರಶ್ನೆಗೆ ಇದೀಗ ಉತ್ತರ ಸ್ಪಷ್ಟವಾಗಿದೆ.

ಜರ್ಮನಿ ಭಾರತಕ್ಕೆ ಎದುರಾಳಿ
ಹೌದು, ಕಳೆದ ಬಾರಿಯ ಒಲಿಂಪಿಕ್ಸ್ ಕ್ರೀಡಾಕೂಟದ ಕಂಚಿನ ಪದಕ ವಿಜೇತ ತಂಡವಾಗಿರುವ ಜರ್ಮನಿ ಈ ಬಾರಿಯೂ ಮೂರನೇ ಸ್ಥಾನಕ್ಕಾಗಿ ಹೋರಾಟವನ್ನು ನಡೆಸಲಿದೆ. ಭಾರತ ಹಾಗೂ ಜರ್ಮನಿ ತಂಡಗಳು ಪ್ಲೇಆಫ್‌ನಲ್ಲಿ ಸೆಣೆಸಾಡಲಿದ್ದು ಗೆದ್ದ ತಂಡ ಮೂರನೇ ಸ್ಥಾನವನ್ನು ಪಡೆದುಕೊಳ್ಳಲಿದೆ. ಈ ಮೂಲಕ ಕನಿಷ್ಟ ಕಂಚಿನ ಪದಕವನ್ನು ಕೊರಳಿಗೇರಿಸಿಕೊಳ್ಳುವ ಪ್ರಯತ್ನವನ್ನು ಎರಡು ತಂಡಗಳು ಕೂಡ ನಡೆಸಲಿದೆ.

2ನೇ ಸೆಮಿಫೈನಲ್‌ನಲ್ಲಿ ಆಸಿಸ್‌ಗೆ ಮಣಿದ ಜರ್ಮನಿ
ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಭಾರತ, ಬೆಲ್ಜಿಯಂ, ಆಸ್ಟ್ರೇಲಿಯಾ ಹಾಗೂ ಜರ್ಮನಿ ತಂಡಗಳು ಸೆಮಿಫೈನಲ್ ಪ್ರವೇಶಿಸಿದ್ದವು. ಎರಡನೇ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ಹಾಗೂ ಜರ್ಮನಿ ತಂಡಗಳು ಪ್ರಶಸ್ತಿ ಫೈನಲ್ ಸುತ್ತಿಗೆ ಪ್ರವೇಶ ಪಡೆಯಲು ಹೋರಾಟವನ್ನು ನಡೆಸಿದ್ದವು. ಈ ಹೋರಾಟದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ತಂಡ ಜರ್ಮನಿ ವಿರುದ್ಧ ಸಂಪೂರ್ಣ ಮೇಲುಗೈ ಸಾಧಿಸಿದೆ. 3-1 ಅಂತರದಿಂದ ಆಸ್ಟ್ರೇಲಿಯಾ ಗೆಲುವು ಸಾಧಿಸಿದ್ದು ಫೈನಲ್‌ಗೆ ಪ್ರವೇಶ ಪಡೆದುಕೊಂಡಿದೆ.

ಭಾರತದ ಕನಸು ಭಗ್ನಗೊಳಿಸಿದ ಬೆಲ್ಜಿಯಂ
41 ವರ್ಷಗಳ ಬಳಿಕ ಭಾರತ ಒಲಿಂಪಿಕ್ಸ್‌ನ ಹಾಕಿ ಕ್ರೀಡಾಕೂಟದಲ್ಲಿ ಸೆಮಿಫೈನಲ್ ಹಂತಕ್ಕೆ ಪ್ರವೇಶ ಪಡೆದುಕೊಂಡಿತ್ತು. ಹೀಗಾಗಿ ಸುದೂರ್ಘ ಕಾಲದ ಬಳಿಕ ಭಾರತ ಮತ್ತೊಮ್ಮೆ ಚಿನ್ನದ ಪದಕ ಗೆಲ್ಲುವ ಕನಸಿಗೆ ಹತ್ತಿರವಾಗಿತ್ತು. ಹೀಗಾಗಿ ಮಂಗಳವಾರ ಮುಂಜಾನೆ 7 ಗಂಟೆಗೆ ಆರಂಭವಾದ ಸೆಮಿಫೈನಲ್ ಪಂದ್ಯದ ಮೇಲೆ ಕೋಟ್ಯಂತರ ಕ್ರೀಡಾಪ್ರೇಮಿಗಳ ನಿರೀಕ್ಷೆಯಿತ್ತು. ಆದರೆ ಇದಕ್ಕೆ ಪೂರಕವಾಗಿ ಮೊದಲಾರ್ಧದಲ್ಲಿ ಭಾರತೀಯ ಹಾಕಿ ತಂಡ ಅತ್ಯದ್ಭುತ ಪ್ರದರ್ಶನ ನಿಡುವ ಮೂಲಕ ಮೇಲುಗೈ ಸಾಧಿಸಿತ್ತು. ಮೊದಲಾರ್ಧದಲ್ಲಿ ಭಾರತ 2-1 ಅಂತರದಿಂದ ಮುನ್ನಡೆ ಪಡೆದಿತ್ತು. ಆದರೆ ಮೂರನೇ ಕ್ವಾರ್ಟರ್‌ನಲ್ಲಿ ಬೆಲ್ಜಿಯಂ ಭಾರತದ ಲೆಕ್ಕಾಚಾರವನ್ನು ತಲೆಕೆಳಗಾಗಿಸಿತು. ಪೆನಾಲ್ಟಿ ಕಾರ್ನರ್ ಅವಕಾಶ ಪಡೆದು ಬೆಲ್ಜಿಯಂ ಸತತ ಗೋಲುಗಳನ್ನು ದಾಖಲಿಸಿತು. ಈ ಮೂಲಕ ಭಾರತ ಅಂತಿಮವಾಗಿ 5-2 ಅಂತರದಿಂದ ಆಘಾತಕಾರಿ ರೀತಿಯಲ್ಲಿ ಸೋಲು ಕಂಡಿತ್ತು.

ಬುಧವಾರ ಅಂತಿಮ ಸೆಣೆಸಾಟ
ಭಾರತ ಹಾಗೂ ಜರ್ಮನಿ ತಂಡಗಳು ಗುರುವಾರ ಆಗಸ್ಟ್ 5ರಂದು ಕಂಚಿನ ಪದಕಕ್ಕಾಗಿ ಅಂತಿಮ ಹೋರಾಟವನ್ನು ನಡೆಸಲಿದೆ. ಮುಂಜಾನೆ 7 ಗಂಟೆಗೆ ಈ ಪಂದ್ಯ ನಡೆಯಲಿದೆ. ಇದರಲ್ಲಿ ಗೆಲುವು ಸಾಧಿಸಿದ ತಂಡ ಕಂಚಿನ ಪದಕವನ್ನು ಮುಡಿಗೇರಿಸಿಕೊಳ್ಳಲಿದೆ.

ಆಸ್ಟ್ರೇಲಿಯಾ ಬೆಲ್ಜಿಯಂ ಮಧ್ಯೆ ಫೈನಲ್ ಪಂದ್ಯ
ಭಾರತ ತಂಡವನ್ನು ಮಣಿಸಿದ ಹಾಲಿ ಚಾಂಪಿಯನ್ ಬೆಲ್ಜಿಯಂ ಹಾಗೂ ಆಸ್ಟ್ರೇಲಿಯಾ ತಂಡಗಳು ಈಗ ಪುರುಷರ ಹಾಕಿ ಸ್ಪರ್ಧೆಯಲ್ಲಿ ಫೈನಲ್ ಪಂದ್ಯಕ್ಕೆ ಪ್ರವೇಶ ಪಡೆದುಕೊಂಡಿದೆ. ಈ ಎರಡು ತಂಡಗಳ ಮಧ್ಯೆ ಗುರುವಾರ ಆಗಸ್ಟ್ 5ರಂದು ಸಂಜೆ 3:30ಕ್ಕೆ ಫೈನಲ್ ಪಂದ್ಯ ನಡೆಯಲಿದೆ. ಬಲಿಷ್ಠ ತಂಡಗಳ ನಡುವಿನ ಸೆಣೆಸಾಟದಲ್ಲಿ ಯಾರು ಗೆಲ್ಲಲಿದ್ದಾರೆ ಎಂಬುದು ಈಗ ಕುತೂಹಲ ಮೂಡಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications