For Quick Alerts
ALLOW NOTIFICATIONS  
For Daily Alerts

ಹಾಕಿ: ಸೆಮಿ ಫೈನಲ್‌ನಲ್ಲಿ ಅರ್ಜೆಂಟಿನಾ ವಿರುದ್ಧ ಭಾರತ ಮಹಿಳಾ ತಂಡಕ್ಕೆ ಸೋಲು

Olympics: Women Hockey, India lost by 2-1 in semi final

ಟೋಕಿಯೋ, ಜುಲೈ 4: ಮಹಿಳಾ ಹಾಕಿ ಸೆಮಿ ಫೈನಲ್‌ನಲ್ಲಿ ಭಾರತ ಮಹಿಳೆಯರ ತಂಡ ಬಲಿಷ್ಠ ಅರ್ಜೆಂಟಿನಾ ವಿರುದ್ಧ ಸೋಲು ಕಂಡಿದೆ. ತೀವ್ರ ಪೈಪೋಟಿಯಿಂದ ಕೂಡಿದ್ದ ಪಂದ್ಯದಲ್ಲಿ ಭಾರತ ಆರಂಭದಲ್ಲಿ ಮುನ್ನಡೆಯನ್ನು ಸಾಧಿಸಿದತಾದರೂ ಬಳಿಕ ಎದುರಾಳಿಗೆ ಎರಡು ಗೋಲು ಬಿಟ್ಟುಕೊಡುವ ಮೂಲಕ ಹಿನ್ನೆಡೆಯನ್ನು ಅನುಭವಿಸಿತು. ಬಳಿಕ ಪಂದ್ಯವನ್ನು ಸಮಬಲಗೊಳಿಸಲು ಸಾಕಷ್ಟು ಪ್ರಯತ್ನ ನಡೆಸಿತಾದರೂ ಅದು ಸಾಧ್ಯವಾಗಲೇ ಇಲ್ಲ. ಅಂತಿಮವಾಗಿ ಭಾರತ ಮಹಿಳೆಯರ ತಂಡ 1-2 ಅಂತರದಿಂದ ಸೋಲು ಅನುಭವಿಸಿದ್ದು ಫೈನಲ್ ಪ್ರವೇಶಿಸಲು ವಿಫಲವಾಗಿದೆ.

ಆದರೆ ಭಾರತ ಮಹಿಳಾ ಹಾಕಿ ತಂಡಕ್ಕೆ ಇನ್ನು ಕೂಡ ಕಂಚಿನ ಪದಕ ಗೆಲ್ಲುವ ಅವಕಾಶವಿದೆ. ಮೂರನೇ ಸ್ಥಾನದಕ್ಕಾಗಿ ನಡೆಯುವ ಪ್ಲೇ ಆಫ್ ಪಂದ್ಯದಲ್ಲಿ ಭಾರತ ಆಡಲಿದೆ. ಗ್ರೇಟ್ ಬ್ರಿಟನ್ ತಂಡದ ವಿರುದ್ಧ ಈ ಪಂದ್ಯ ನಡೆಯಲಿದ್ದು ಇದರಲ್ಲಿ ಗೆದ್ದರೆ ಭಾರತ ಮಹಿಳಾ ಹಾಕಿ ತಂಡ ಕಂಚಿನ ಪದಕ ಕೊರಳಿಗೇರಿಸಿಕೊಳ್ಳುವ ಅವಕಾಶವಿದೆ.

ಭಾರತ ಪಂದ್ಯ ಆರಂಭವಾದ ಎರಡನೇ ನಿಮಿಷದಲ್ಲಿಯೇ ಗೋಲು ಗಳಿಸುವಲ್ಲಿ ಯಶಸ್ವಿಯಾಗಿತ್ತು. ಫೆನಾಲ್ಟಿ ಕಾರ್ನರ್ ಅವಕಾಶ ಪಡೆದ ಭಾರತ ಇದನ್ನು ಗೋಲಾಗಿ ಪರಿವರ್ತಿಸುವಲ್ಲಿ ಆರಂಭದಲ್ಲಿಯೇ ಯಶಸ್ವಿಯಾಗಿತ್ತು. ಗುರ್ಜಿತ್ ಕೌರ್ ಭಾರತಕ್ಕೆ ಆರಂಭಿಕ ಮುನ್ನಡೆಯನ್ನು ಒದಗಿಸುವಲ್ಲಿ ಕಾರಣರಾದರು. ಈ ಮೂಲಕ ಭಾರತ ಕ್ವಾರ್ಟರ್‌ಫೈನಲ್ ಹಂತದಲ್ಲಿ ಆಸ್ಟ್ರೇಲಿಯಾ ವಿರುದ್ಧ ತೋರಿದ ಪ್ರದರ್ಶನ ಮುಂದುವರಿಸುವ ಭರವಸೆ ಮೂಡಿಸಿತ್ತು.

ಮೊದಲ ಕ್ವಾರ್ಟರ್‌ನಲ್ಲಿ ಎದುರಾಳಿ ಅರ್ಜೆಂಟಿನಾ ತಂಡಕ್ಕೆ ಯಾವುದೇ ಗೋಲು ಬಿಟ್ಟುಕೊಡದಂತೆ ತಡೆಯುವಲ್ಲಿ ಭಾರತ ಯಶಸ್ವಿಯಾಗಿತ್ತು. ಈ ಮೂಲಕ ಮೊದಲ ಕ್ವಾರ್ಟರ್‌ಅನ್ನು ಭಾರತ ಸಂಪೂರ್ಣವಾಗಿ ಮುನ್ನಡೆಯೊಂದಿಗೆ ಅಂತ್ಯಗೊಳಿಸಿತ್ತು.

ಆದರೆ ಎರಡನೇ ಕ್ವಾರ್ಟರ್‌ನಲ್ಲಿ ಎದುರಾಳಿ ಅರ್ಜೆಂಟಿನಾ ಅದ್ಭುತ ಪ್ರದರ್ಶನ ನೀಡಿ ಗೋಲು ಗಳಿಸುವಲ್ಲಿ ಯಶಸ್ವಿಯಾಯಿತು. ಪಂದ್ಯದ 18ನೇ ನಿಮಿಷದಲ್ಲಿ ಕ್ವಾರ್ಟರ್‌ಫೈನಲ್‌ ಅವಕಾಶವನ್ನು ಬಳಸಿಕೊಂಡ ಅರ್ಜೆಂಟಿನಾ ಸಮಬಲ ಸಾಧಿಸುವಲ್ಲಿ ಯಶಸ್ವಿಯಾಗಿತ್ತು. ಅರ್ಜೆಂಟಿನಾ ನಾಯಕಿ ಮರಿಯಾ ಬೊರಿಯೋನೊವೋಸ್ ಚೆಂಡನ್ನು ಯಶಸ್ವಿಯಾಗಿ ಗೋಲುಪೆಟ್ಟಿಗೆಗೆ ಸೇರ್ಪಡೆಗೊಳಿಸುವಲ್ಲಿ ಯಶಸ್ವಿಯಾದರು. ಈ ಮೂಲಕ ಅರ್ಜೆಂಟಿನಾ ಭಾರತದ ಮೇಲೆ ಒತ್ತಡ ಹೇರುವಲ್ಲಿ ಯಶಸ್ವಿಯಾಗಿತ್ತು.

ಮೂರನೇ ಕ್ವಾರ್ಟರ್‌ನಲ್ಲಿ ಮತ್ತೆ ಜಿದ್ದಾಜಿದ್ದಿನ ಕದನ ಏರ್ಪಟ್ಟಿತು. ಇದರಲ್ಲಿಯೂ ಅರ್ಜೆಂಟಿನಾ ಬಳಗ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾಗಿತ್ತು. ಮೊತ್ತೊಂದು ಫೆನಾಲ್ಟಿ ಕಾರ್ಟನ್ ಅವಕಾಶವನ್ನು ನಾಯಕಿ ಮರಿಯಾ ಬೊರಿಯೋನೊವೋಸ್ ಗೋಲಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾಗಿದ್ದರು. ಪಂದ್ಯದ 36ನೇ ನಿಮಿಷದಲ್ಲಿ ಅರ್ಜೆಂಟಿನಾ ಈ ಎರಡನೇ ಗೋಲು ದಾಖಲಿಸಿತು. ಈ ಮೂಲಕ ಭಾರತದ ವಿರುದ್ಧ ಮೇಲುಗೈ ಸಾಧಿಸುವಲ್ಲಿ ಅರ್ಜೆಂಟಿನಾ ಸಫಲವಾಗಿತ್ತು.

ಅಂತಿಮ ಕ್ವಾರ್ಟರ್‌ನಲ್ಲಿ ಭಾರತ ಮಹಿಳಾ ತಂಡ ಪಂದ್ಯವನ್ನು ಸಮಬಲಗೊಳಿಸಲು ಸಾಕಷ್ಟು ಪ್ರಯತ್ನವನ್ನು ನಡೆಸಿತ್ತು. ಅಂತಿಮ ಕ್ಷಣದವರೆಗೂ ಈ ಹೋರಾಟ ಮುಂದುವರಿದಿತ್ತು. ಆದರೆ ಗಳಿಸಿಕೊಂಡಿದ್ದ ಮುನ್ನಡೆಯನ್ನು ಉಳಿಸಿಕೊಳ್ಳಲು ಅರ್ಜೆಂಟಿನಾ ನಡೆಸಿದ ಪ್ರಯತ್ನಕ್ಕೆ ಮೇಲುಗೈ ದೊರೆಯಿತು. ಅಂತಿಮ ಕ್ವಾರ್ಟರ್‌ನಲ್ಲಿ ಎರಡು ತಂಡಗಳು ಕೂಡ ಗೋಲು ಗಳಿಸಲು ವಿಫಲವಾಯಿತು. ಈ ಮೂಲಕ ಅರ್ಜೆಂಟಿನಾ ತಂಡ 2-1 ಅಂತರದಿಂದ ಗೆಲುವು ದಾಖಲಿಸಿ ಫೈನಲ್‌ಗೆ ಪ್ರವೇಶ ಪಡೆದುಕೊಂಡಿದೆ.

ಭಾರತ ಮಹಿಳೆಯರ ಹಾಕಿ ತಂಡ ಒಲಿಂಪಿಕ್ಸ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸೆಮಿಫೈನಲ್‌ಗೇರುವಲ್ಲಿ ಯಶಸ್ವಿಯಾಗಿತ್ತು. ಈ ಮೂಲಕ ಐತಿಹಾಸಿಕ ಸಾಧನೆ ಮಾಡಿತ್ತು. ಈ ಸಾಧನೆಯನ್ನು ಫೈನಲ್‌ಗೇರುವ ಮೂಲಕ ಮತ್ತಷ್ಟು ಸ್ಮರಣಿಯಗೊಳಿಸುವ ಪ್ರಯತ್ನವನ್ನು ರಾಣಿ ರಾಂಪಾಲ್ ನೇತೃತ್ವದ ಭಾರತ ತಂಡ ನಡೆಸಿತು. ಆದರೆ ಇದು ಸೆಮಿಫೈನಲ್‌ನಲ್ಲಿ ಗೆಲುವು ಪಡೆಯಲು ವಿಫಲವಾಗುವ ಮೂಲಕ ಭಾರತ ನಿರಾಸೆ ಅನುಭವಿಸಿದೆ. ಆದರೆ ಭಾರತ ಮಹಿಳೆಯ ಈ ಸಾಧನೆ ಭಾರತ ಹಾಕಿ ತಂಡದ ಪಾಲಿಗೆ ನಿಜಕ್ಕೂ ಅತ್ಯಂತ ಮಹತ್ವದ್ದಾಗಿದೆ. ಸೆಮಿಫೈನಲ್‌ನಲ್ಲಿ ಭಾರತ ಸೋಲು ಕಂಡಿದ್ದರೂ ಕಂಚಿನ ಪದಕಕ್ಕೆ ಮುತ್ತಿಡುವ ಅವಕಾಶ ಭಾರತ ತಂಡಕ್ಕೆ ಇನ್ನೂ ಇದೆ. ಇದಕ್ಕಾಗಿ ಮುಂದಿನ ಶುಕ್ರವಾರ ನಡೆಯುವ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಬೇಕಿದೆ.

ಗ್ರೇಟ್ ಬ್ರಿಟನ್ ಎದುರಾಳಿ: ಕಂಚಿನ ಪದಕವನ್ನು ಗೆಲ್ಲಬೇಕಾದರೆ ಭಾರತ ಪ್ಲೇಆಫ್ ಪಂದ್ಯದಲ್ಲಿ ಗೆಲ್ಲಬೇಕಿದೆ. ಈ ಪಂದ್ಯವನ್ನು ಗೆದ್ದರೆ ಭಾರತ ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಮೂರನೇ ಸ್ಥಾನಿಯಾಗಿ ಕ್ರೀಡಾಕೂಟವನ್ನು ಮುಗಿಸಲಿದೆ. ಹೀಗಾಗಿ ಕಂಚಿನ ಪದಕ ಭಾರತದ ಪಾಲಾಗಲಿದೆ. ಈ ಪ್ಲೇ ಆಫ್‌ ಪಂದ್ಯದಲ್ಲಿ ಭಾರತಕ್ಕೆ ಗ್ರೇಟ್ ಬ್ರಿಟನ್ ತಂಡ ಎದುರಾಳಿಯಾಗಿದೆ. ಕಂಚಿನ ಪದಕ್ಕಾಗಿ ನಡೆಯಲಿರುವ ಈ ಸೆಣೆಸಾಟ ಶುಕ್ರವಾರ ನಡೆಯಲಿದ್ದು ಮುಂಜಾನೆ 7 ಗಂಟೆಗೆ ಪ್ರಾರಂಭವಾಗಲಿದೆ.

ಪುರುಷರ ತಂಡವೂ ಸೆಮಿಫೈನಲ್‌ನಲ್ಲಿ ಮುಗ್ಗರಿಸಿತ್ತು: ಇದಕ್ಕೂ ಮುನ್ನ ಭಾರತ ಪುರುಷರ ಹಾಕಿ ತಂಡ ಕೂಡ ಸೆಮಿಫೈನಲ್‌ಗೆ ಪ್ರವೇಶ ಪಡೆದುಕೊಂಡು 41 ವರ್ಷಗಳ ಬಳಿಕ ಐತಿಹಾಸಿಕ ಸಾಧನೆಯನ್ನು ಮಾಡಿತ್ತು. ಆದರೆ ಪುರುಷರ ತಂಡ ಕೂಡ ಸೆಮಿಫೈನಲ್‌ನಲ್ಲಿ ಮುಗ್ಗರಿಸಿದೆ. ಬೆಲ್ಜಿಯಂ ವಿರುದ್ಧ ನಡೆದ ಪಂದ್ಯದಲ್ಲಿ ಭಾರತ ಪುರುಷರ ತಂಡ 2-5 ಅಂತರದಿಂದ ಸೋಲು ಮೂಲಕ ಫೈನಲ್‌ಗೇರುವ ಕನಸನ್ನು ಭಗ್ನಗೊಳಿಸಿತು. ಆದರೆ ಭಾರತ ಪುರುಷರ ತಂಡ ಕೂಡ ಕಂಚಿನ ಪದಕಕ್ಕೆ ಮುತ್ತಿರುವ ಅವಕಾಶವನ್ನು ಹೊಂದಿದೆ.

ಪುರುಷರ ಹಾಕಿ ತಂಡಕ್ಕೆ ಜರ್ಮನಿ ಎದುರಾಳಿ: ಭಾರತ ಹಾಗೂ ಜರ್ಮನಿ ತಂಡಗಳು ಗುರುವಾರ ಆಗಸ್ಟ್ 5ರಂದು ಕಂಚಿನ ಪದಕಕ್ಕಾಗಿ ಅಂತಿಮ ಹೋರಾಟವನ್ನು ನಡೆಸಲಿದೆ. ಮುಂಜಾನೆ 7 ಗಂಟೆಗೆ ಈ ಪಂದ್ಯ ನಡೆಯಲಿದೆ. ಇದರಲ್ಲಿ ಗೆಲುವು ಸಾಧಿಸಿದ ತಂಡ ಕಂಚಿನ ಪದಕವನ್ನು ಮುಡಿಗೇರಿಸಿಕೊಳ್ಳಲಿದೆ.

ಫೈನಲ್‌ಗೇರಿದ ತಂಡಗಳು: ಪುರುಷರ ಹಾಕಿ ಫೈನಲ್ ಪಂದ್ಯದಲ್ಲಿ ಭಾರತ ತಂಡವನ್ನು ಮಣಿಸಿದ ಬೆಲ್ಜಿಯಂ ಹಾಗೂ ಸೆಮಿಫೈನಲ್‌ನಲ್ಲಿ ಜರ್ಮನಿ ತಂಡವನ್ನು ಮಣಿಸಿದ ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಲಿದೆ. ಈ ಫೈನಲ್ ಪಂದ್ಯ ಆಗಸ್ಟ್ 5ರಂದು ಮಧ್ಯಾಹ್ನ 3:30ಕ್ಕೆ ಆರಂಭವಾಗಲಿದೆ.
ಇನ್ನು ಮಹಿಳೆಯರ ವಿಭಾಗದಲ್ಲಿ ಗ್ರೇಟ್ ಬ್ರಿಟನ್ ತಂಡವನ್ನು ಮಣಿಸಿ ಫೈನಲ್ ಹಂತಕ್ಕೇರಿರುವ ನೆದರ್ಲ್ಯಾಂಡ್ಸ್ ತಂಡ ಅರ್ಜೆಂಟಿನಾ ತಂಡದ ಸವಾಲನ್ನು ಎದುರಿಸಲಿದೆ. ಆಗಸ್ಟ್ 6ರಂದು ಮಧ್ಯಾಹ್ನ 3:30ಕ್ಕೆ ಈ ಫೈನಲ್ ಪಂದ್ಯ ನಡೆಯಲಿದೆ.

ಇನ್ನು ಹಾಕಿಯಲ್ಲಿ ಭಾರತದ ಮಹಿಳಾ ಹಾಗೂ ಪುರುಷರ ತಂಡ ಇದೇ ಮೊದಲ ಬಾರಿಗೆ ಐತಿಹಾಸಿಕ ಸಾಧನೆ ಮಾಡಿದೆ. ಒಲಿಂಪಿಕ್ಸ್ ಇತಿಹಾಸದಲ್ಲಿ ಭಾರತದ ಪುರುಷರ ಹಾಗೂ ಮಹಿಳಾ ತಂಡಗಳು ಇದೇ ಮೊದಲ ಬಾರಿಗೆ ಸೆಮಿಫೈನಲ್‌ಗೆ ಜೊತೆಯಾಗಿ ಕಾಲಿಡುವ ಮೂಲಕ ಈ ಸಾಧನೆಯನ್ನು ಮಾಡಿದೆ.

Story first published: Wednesday, August 4, 2021, 18:19 [IST]
Other articles published on Aug 4, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+