ಆಗಸ್ಟ್ 10 ಶನಿವಾರ, ಭಾರತ ಹಾಕಿ ತಂಡ ಅದ್ಭುತ ಪ್ರದರ್ಶನ ನೀಡಿ 2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದುಕೊಂಡಿದೆ. ಈ ಗೆಲುವಿನೊಂದಿಗೆ ಭಾರತ ಟೋಕಿಯೊ ಒಲಿಂಪಿಕ್ಸ್ ಪದಕವನ್ನು ಉಳಿಸಿಕೊಂಡಿದೆ.
ಇದೀಗ ಕಂಚಿನ ಪದಕ ಗೆದ್ದ ಭಾರತ ಹಾಕಿ ತಂಡ ತವರಿಗೆ ಮರಳಿದೆ. ಭಾರತಕ್ಕೆ ಆಗಮಿಸಿದ ಹಾಕಿ ಟೀಮ್ ಇಂಡಿಯಾಗೆ ವಿಮಾನ ನಿಲ್ದಾಣದಲ್ಲಿ ಭವ್ಯ ಸ್ವಾಗತ ನೀಡಲಾಗಿದೆ. ಭಾರತ ತಂಡ ವಿಮಾನ ನಿಲ್ದಾಣದಿಂದ ಹೊರ ಬಂದ ತಕ್ಷಣ ಅಭಿಮಾನಿಗಳು ಡ್ರಮ್ ಬಾರಿಸಿ ಹಾರ ಹಾಕಿ ಸ್ವಾಗತಿಸಿದರು.

ಈ ವೇಳೆ ಭಾರತ ಹಾಕಿ ತಂಡದ ಆಟಗಾರರು ಡ್ರಮ್ ಬಾರಿಸಿ ಕುಣಿದು ಕುಪ್ಪಳಿಸಿದರು. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹಾಕಿ ತಂಡವನ್ನು ಸ್ವಾಗತಿಸಲು ಅಭಿಮಾನಿಗಳು ಸಾಕಷ್ಟು ಉತ್ಸಾಹಗೊಂಡಿದರು.
ನಾಯಕ ಹೇಳಿದ್ದೇನು?
ಭಾರತಕ್ಕೆ ಮರಳಿದ ನಂತರ ಹಾಕಿ ತಂಡದ ನಾಯಕ ಹರ್ಮನ್‌ಪ್ರೀತ್ ಸಿಂಗ್ ಮಾತನಾಡಿದರು. 'ಪದಕವು ಪದಕವಾಗಿದ್ದು, ಅದನ್ನು ಗೆಲ್ಲುವುದು ದೇಶಕ್ಕೆ ದೊಡ್ಡ ವಿಷಯವಾಗಿದೆ. ನಾವು ಫೈನಲ್ ತಲುಪಿ ಚಿನ್ನ ಗೆಲ್ಲಲು ಪ್ರಯತ್ನಿಸಿದ್ದವು. ಆದರೆ ದುರದೃಷ್ಟವಶಾತ್ ನಮ್ಮ ಕನಸು ನನಸಾಗಲಿಲ್ಲ. ಆದರೆ, ನಾವು ಬರಿಗೈಯಲ್ಲಿ ಹಿಂದಿರುಗಿಲ್ಲ. ಸತತವಾಗಿ ಪದಕಗಳನ್ನು ಗೆದ್ದಿರುವುದು ಸ್ವತಃ ದಾಖಲೆಯಾಗಿದೆ. ನಾವು ಪಡೆದ ಪ್ರೀತಿ ದೊಡ್ಡ ವಿಷಯ' ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಪಿಆರ್ ಶ್ರೀಜೇಶ್ ಅವರು ತಮ್ಮ ಕೊನೆಯ ಪಂದ್ಯವನ್ನು ಆಡುತ್ತಿರುವಾಗ ಭಾವನಾತ್ಮಕ ಕ್ಷಣವಾಗಿತ್ತು. ಅವರು ನಿವೃತ್ತರಾದರೂ, ನಮ್ಮೊಂದಿಗೆ ಇರುತ್ತಾರೆ. ಅವರ ಬೆಂಬಲಕ್ಕಾಗಿ ನಾನು ಭಾರತ ಸರ್ಕಾರ, ಎಸ್‌ಎಐ ಮತ್ತು ಒಡಿಶಾ ಸರ್ಕಾರಕ್ಕೆ ಧನ್ಯವಾದಗಳನ್ನು ಹೇಳುತ್ತೇನೆ.
ನಮಗೆ ಸಿಗುತ್ತಿರುವ ಪ್ರೀತಿ ನಮ್ಮ ಜವಾಬ್ದಾರಿಯನ್ನು ಹೆಚ್ಚು ಮಾಡುತ್ತದೆ. ನಾವು ಆಡಿದಾಗಲೆಲ್ಲಾ ದೇಶಕ್ಕೆ ಪದಕಗಳನ್ನು ತರಲು ಪ್ರಯತ್ನಿಸುತ್ತೇವೆ ಎಂದು ಹರ್ಮನ್‌ಪ್ರೀತ್ ಹೇಳಿದರು.
52 ವರ್ಷಗಳ ನಂತರ ಇತಿಹಾಸ
ಸೆಮಿಫೈನಲ್‌ನಲ್ಲಿ ಭಾರತ ತಂಡವು ಜರ್ಮನಿ ವಿರುದ್ಧ ಸೋಲನ್ನು ಎದುರಿಸಬೇಕಾಯಿತು. ಈ ಸೋಲಿನೊಂದಿಗೆ ಭಾರತದ ಬೆಳ್ಳಿ ಹಾಗೂ ಚಿನ್ನದ ಪದಕ ಗೆಲ್ಲುವ ಕನಸು ಭಗ್ನಗೊಂಡಿತು. ಆದರೆ, ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಸ್ಪೇನ್ ವಿರುದ್ಧ ಭಾರತ 2-1 ಗೋಲುಗಳ ಅಂತರದಿಂದ ಅದ್ಭುತ ಗೆಲುವು ಸಾಧಿಸಿತು.
ಈ ಪಂದ್ಯದಲ್ಲಿ ಭಾರತದ ಪರ ಹರ್ಮನ್‌ಪ್ರೀತ್ ಎರಡು ಅದ್ಭುತ ಗೋಲು ಗಳಿಸಿದ್ದರು. ಒಲಿಂಪಿಕ್ಸ್‌ನಲ್ಲಿ ಭಾರತ ಕಂಚಿನ ಪದಕ ಜಯಿಸಿರುವುದು ನಾಲ್ಕನೇ ಬಾರಿ. ಇದರೊಂದಿಗೆ ಭಾರತ ಹಾಕಿ ತಂಡದ 52 ವರ್ಷಗಳ ನಂತರ ಇತಿಹಾಸ ಮರುಕಳಿಸಿದೆ. ಇದುವರೆಗ ಭಾರತ ಹಾಕಿ ತಂಡ 8 ಬಾರಿ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದೆ.