
ಟೋಕಿಯೋ ಒಲಿಂಪಿಕ್ಸ್ ಮಹಿಳಾ ಹಾಕಿ ಸ್ಪರ್ಧೆಯಲ್ಲಿ ಸೋಮವಾರ (ಆಗಸ್ಟ್ 2) ನಡೆದ ಕ್ವಾರ್ಟರ್ ಫೈನಲ್ ಹಂತದ ಪಂದ್ಯದಲ್ಲಿ ಭಾರತ ಮಹಿಳಾ ಹಾಕಿ ತಂಡ ಮತ್ತು ಆಸ್ಟ್ರೇಲಿಯಾ ವನಿತೆಯರ ಹಾಕಿ ತಂಡ ಸೆಣಸಾಡಿದವು. ಪ್ರಸ್ತುತ ನಡೆಯುತ್ತಿರುವ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಸೋಲಿಲ್ಲದ ಸರದಾರರಂತೆ ಮೆರೆದಾಡುತ್ತಿದ್ದ ಆಸ್ಟ್ರೇಲಿಯ ವನಿತೆಯರಿಗೆ ಭಾರತೀಯ ವನಿತೆಯರ ತಂಡ ಕ್ವಾರ್ಟರ್ ಫೈನಲ್ ಸುತ್ತಿನಲ್ಲಿ ಮಣ್ಣುಮುಕ್ಕಿಸುವ ಮೂಲಕ ಸೆಮಿಫೈನಲ್ ಸುತ್ತಿಗೆ ಲಗ್ಗೆ ಇಟ್ಟಿದೆ.
ಕ್ವಾರ್ಟರ್ ಫೈನಲ್ ಹಂತದಲ್ಲಿ ಆಸ್ಟ್ರೇಲಿಯಾ ವನಿತೆಯರ ತಂಡದ ವಿರುದ್ಧ 1-0 ಅಂತರದಲ್ಲಿ ಜಯ ಸಾಧಿಸುವುದರ ಮೂಲಕ ಭಾರತೀಯ ವನಿತೆಯರ ತಂಡ ಸೆಮಿಫೈನಲ್ ಹಂತಕ್ಕೆ ಪ್ರವೇಶ ಪಡೆದುಕೊಂಡಿದೆ. ಭಾರತ ತಂಡದ ಪರ ಎರಡನೇ ಕ್ವಾರ್ಟರ್‌ನಲ್ಲಿ ಗುರ್ಜಿತ್ ಕೌರ್ ಗೋಲನ್ನು ಬಾರಿಸುವುದರ ಮೂಲಕ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಗುರ್ಜಿತ್ ಕೌರ್ ಈ ಗೋಲು ಬಾರಿಸುವುದರ ಮೂಲಕ ಭಾರತ ತಂಡದ ಗೆಲುವಿಗೆ ಕಾರಣಕರ್ತರಾದರೆ, ಇವರ ಜೊತೆಗೆ ತಂಡದ ಗೆಲುವಿನಲ್ಲಿ ಹೆಚ್ಚು ಪ್ರಾಮುಖ್ಯತೆಯನ್ನು ವಹಿಸಿದವರು ಭಾರತ ಮಹಿಳಾ ಹಾಕಿ ತಂಡದ ಗೋಲ್ ಕೀಪರ್ ಮತ್ತು ಉಪ ನಾಯಕಿಯಾದ ಸವಿತಾ ಪೂನಿಯಾ.
ಹೌದು ಇಂದು (ಆಗಸ್ಟ್ 2) ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಆಟಗಾರ್ತಿಯರು ಬಾರಿಸಲು ಯತ್ನಿಸಿದ 8 ಪೆನಾಲ್ಟಿಗಳನ್ನು ಯಶಸ್ವಿಯಾಗಿ ತಡೆಯುವುದರ ಮೂಲಕ ಸವಿತಾ ಪೂನಿಯಾ ಆಸ್ಟ್ರೇಲಿಯಾ ವನಿತೆಯರಿಗೆ ಯಶಸ್ವಿಯಾಗಿ ಗೋಲು ಬಾರಿಸುವ ಅವಕಾಶವನ್ನು ನೀಡಲೇ ಇಲ್ಲ. ಹೀಗಾಗಿ ಟ್ವಿಟ್ಟರ್ ತುಂಬೆಲ್ಲ ಸವಿತಾ ಪೂನಿಯಾ ಕುರಿತು ನೆಟ್ಟಿಗರು ಸಾಲುಸಾಲು ಟ್ವೀಟ್ ಮಾಡುವ ಮುಖಾಂತರ ಪ್ರಶಂಸೆಯ ಸುರಿಮಳೆಗೈದಿದ್ದಾರೆ.
ಹಾಕಿ ಇಂಡಿಯಾ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಸವಿತಾ ಪುನಿಯಾ ಚಿತ್ರವನ್ನು ಹಂಚಿಕೊಂಡು 'ಗೋಡೆಯ ನೂತನ ಅರ್ಥ' ಎಂದು ಬರೆದುಕೊಳ್ಳುವುದರ ಮೂಲಕ ಭಾರತ ಹಾಕಿ ತಂಡದ ನೂತನ ಗೋಡೆ ಸವಿತಾ ಪೂನಿಯಾ ಎಂದು ಕೊಂಡಾಡಿದೆ.
ಹಾಗೂ ಖ್ಯಾತ ಕಾರ್ಟೂನಿಸ್ಟ್ ಸತೀಶ್ ಆಚಾರ್ಯ ಹತ್ತು ಕೈಗಳುಳ್ಳ ಸವಿತಾ ಪೂನಿಯಾ ಕಾರ್ಟೂನ್ ಚಿತ್ರ ಬಿಡಿಸುವ ಮೂಲಕ ವಿಶೇಷವಾಗಿ ಸವಿತಾ ಪೂನಿಯಾ ಆಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಎದುರಾಳಿಗಳಿಗೆ ಯಾವುದೇ ಗೋಲನ್ನು ಬಾರಿಸಲು ಬಿಡದ ಸವಿತಾ ಪೂನಿಯಾ ಕುರಿತಾಗಿ ಸತೀಶ್ ಆಚಾರ್ಯ ಬಿಡಿಸಿರುವ ಈ ವಿಶೇಷ ಕಾರ್ಟೂನ್ ಸದ್ಯ ಟ್ವಿಟ್ಟರ್‌ನಲ್ಲಿ ವೈರಲ್ ಆಗಿದೆ.
ಭಾರತದ ಕೇಂದ್ರ ಸಚಿವರಾದ ಹರ್ದೀಪ್ ಸಿಂಗ್ ಪೂರಿ ಟ್ವಿಟರ್ ಮೂಲಕ ಭಾರತ ವನಿತೆಯರ ಆಟವನ್ನು ಕೊಂಡಾಡಿದ್ದಾರೆ. ಗುರ್ಜಿತ್ ಕೌರ್ ಬಾರಿಸಿದ ಗೋಲಿನ ಕುರಿತು ಬರೆದುಕೊಂಡಿರುವ ಹರ್ದೀಪ್ ಸಿಂಗ್ ಪೂರಿ ಒಲಿಂಪಿಕ್ಸ್ ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ ಸೆಮಿಫೈನಲ್ ಪ್ರವೇಶಿಸಿರುವ ಭಾರತೀಯ ವನಿತೆಯರ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದಿಷ್ಟೇ ಅಲ್ಲದೆ ಇನ್ನೂ ಹಲವಾರು ಗಣ್ಯರು ಮತ್ತು ಕ್ರೀಡಾಭಿಮಾನಿಗಳು ಟ್ವಿಟ್ಟರ್‌ನಲ್ಲಿ ಭಾರತೀಯ ವನಿತೆಯರ ಹಾಕಿ ತಂಡ ಮತ್ತು ಸವಿತಾ ಪೂನಿಯಾ ಆಟವನ್ನು ಹೊಗಳಿದ್ದಾರೆ. ಇತ್ತ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವನಿತೆಯರನ್ನು ಮಣಿಸಿ ಸೆಮಿಫೈನಲ್ ಪ್ರವೇಶಿಸಿರುವ ಭಾರತೀಯ ವನಿತೆಯರ ಹಾಕಿ ತಂಡಕ್ಕೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದ್ದರೆ ಅತ್ತ ಭಾನುವಾರದಂದು ನಡೆದ ಭಾರತೀಯ ಪುರುಷರ ಹಾಕಿ ತಂಡ ಮತ್ತು ಗ್ರೇಟ್ ಬ್ರಿಟನ್ ಪುರುಷರ ಹಾಕಿ ತಂಡದ ನಡುವಿನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತೀಯ ಪುರುಷರು ಗ್ರೇಟ್ ಬ್ರಿಟನ್ ಪುರುಷರ ತಂಡವನ್ನು 2-0 ಅಂತರದಲ್ಲಿ ಸೋಲಿಸುವುದರ ಮೂಲಕ ಬರೋಬ್ಬರಿ 4 ದಶಕಗಳ ಬಳಿಕ ಒಲಿಂಪಿಕ್ಸ್‌ನಲ್ಲಿ ಸೆಮಿಫೈನಲ್ ಹಂತಕ್ಕೆ ತಲುಪಿದೆ. ಒಟ್ಟಿನಲ್ಲಿ ಭಾರತದ ಪುರುಷ ಮತ್ತು ಮಹಿಳಾ ಹಾಕಿ ತಂಡಗಳೆರಡೂ ಸೆಮಿಫೈನಲ್ ಹಂತವನ್ನು ತಲುಪಿದ್ದು ಪದಕದಾಸೆಯನ್ನು ಮತ್ತಷ್ಟು ಹೆಚ್ಚಿಸಿವೆ.