2024ರ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಕೇವಲ 75 ದಿನಗಳು ಮಾತ್ರ ಉಳಿದಿವೆ. ಇದಕ್ಕೂ ಮುನ್ನ ಭಾರತದ ಪುರುಷರ ಹಾಕಿ ತಂಡದ ದಾಖಲೆ ಬರೆಯಲು ಸಜ್ಜಾಗುತ್ತಿದೆ.
ಪ್ಯಾರಿಸ್ ಒಲಿಂಪಿಕ್ಸ್ ಚಾಂಪಿಯನ್ ಆಗಲು 12 ತಂಡಗಳ ನಡುವೆ ತೀವ್ರ ಪೈಪೋಟಿ ಪಂದ್ಯಗಳು ನಡೆಯಲಿದೆ. ಹಾಲಿ ಒಲಿಂಪಿಕ್ ಚಾಂಪಿಯನ್ ಬೆಲ್ಜಿಯಂ, ನೆದರ್ಲ್ಯಾಂಡ್ಸ್, ಜರ್ಮನಿ, ಇಂಗ್ಲೆಂಡ್, ಸ್ಪೇನ್ ಮತ್ತು ದಕ್ಷಿಣ ಆಫ್ರಿಕಾ ಅಂತಹ ಬಲಿಷ್ಠ ತಂಡಗಳನ್ನು ಟೀಮ್ ಇಂಡಿಯಾ ಎದುರಿಸಬೇಕಾಗಿದೆ.

ಬರೋಬ್ಬರಿ 44 ವರ್ಷಗಳಿಂದ ಭಾರತದ ಪುರುಷರ ಹಾಕಿ ತಂಡವು ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕವನ್ನು ಗೆಲ್ಲಲು ಸಾಧ್ಯವಾಗಿಲ್ಲ. ಹೀಗಾಗಿ ಚಿನ್ನದ ಪದಕದ ಬರವನ್ನು ಕೊನೆಗೊಳಿಸಲು ಪ್ಯಾರಿಸ್‌ನ ಯವೆಸ್-ಡು-ಮಾನಿಯರ್ ಸ್ಟೇಡಿಯಂನಲ್ಲಿ ಟೀಮ್ ಇಂಡಿಯಾ ಹಾಕಿ ಕಣಕ್ಕೀಳಿಯಲಿದೆ. ಇದಕ್ಕಾಗಿ ಕಠಿಣ ಅಭ್ಯಾಸವನ್ನು ಟೀಮ್ ಇಂಡಿಯಾ ಹಾಕಿ ನಡೆಸಿದೆ.
ಟೀಮ್ ಇಂಡಿಯಾ ಹಾಕಿ ತಂಡವು ಜುಲೈ 27 ರಂದು ನ್ಯೂಜಿಲೆಂಡ್ ವಿರುದ್ಧ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ. ನಂತರ ಜುಲೈ 29 ರಂದು ಅರ್ಜೆಂಟೀನಾ ತಂಡವನ್ನು ಟೀಮ್ ಇಂಡಿಯಾ ಎದುರಿಸಲಿದೆ. ಜುಲೈ 30 ಮತ್ತು ಆಗಸ್ಟ್ 1 ರಂದು ಐರ್ಲೆಂಡ್ ಮತ್ತು ಬೆಲ್ಜಿಯಂ ವಿರುದ್ಧ ಸತತ ಎರಡು ಪಂದ್ಯಗಳನ್ನು ಆಡಲಿದೆ. ಕೊನೆಯ ಗುಂಪು ಹಂತದ ಪಂದ್ಯವನ್ನು ಆಗಸ್ಟ್ 2 ರಂದು ಆಸ್ಟ್ರೇಲಿಯಾ ವಿರುದ್ಧ ಟೀಮ್ ಇಂಡಿಯಾ ಕಣಕ್ಕೀಳಿಯಲಿದೆ.
ಪ್ಯಾರಿಸ್ ಒಲಿಂಪಿಕ್ಸ್‌ಗೆ ತಂಡದ ಸಿದ್ಧತೆಯ ಬಗ್ಗೆ ಮಾತನಾಡಿರುವ ನಾಯಕ ಹರ್ಮನ್‌ಪ್ರೀತ್ ಸಿಂಗ್, ನಾವು ಪ್ರಸ್ತುತ ಕಠಿಣ ತರಬೇತಿಯ ಅಂತಿಮ ಹಂತದಲ್ಲಿದ್ದೇವೆ. ಶೀಘ್ರದಲ್ಲೇ ಅರ್ಜೆಂಟೀನಾ, ಬೆಲ್ಜಿಯಂ, ಜರ್ಮನಿ ಮತ್ತು ಇಂಗ್ಲೆಂಡ್‌ನಂತಹ ಬಲಿಷ್ಠ ಎದುರಾಳಿ ತಂಡಗಳ ವಿರುದ್ಧ ನಮ್ಮನ್ನು ಪರೀಕ್ಷಿಸಿಕೊಳ್ಳಲು ಎಫ್‌ಐಹೆಚ್ ಹಾಕಿ ಪ್ರೊ ಲೀಗ್ 2023-24ನಲ್ಲಿ ಕೆಲವು ಅಗತ್ಯ ಪಂದ್ಯಗಳನ್ನು ಆಡಲು ನಾವು ಯುರೋಪ್‌ಗೆ ಹೋಗುತ್ತಿದ್ದೇವೆ. ಪ್ಯಾರಿಸ್ ಒಲಿಂಪಿಕ್ಸ್‌ಗೆ ಕೇವಲ 75 ದಿನಗಳು ಉಳಿದಿದ್ದು, ನಾವು ಸಾಧ್ಯವಾದಷ್ಟು ಉತ್ತಮ ಆಟವಾಡುವತ್ತ ಗಮನಹರಿಸುತ್ತಿದ್ದೇವೆ ಎಂದು ಹೇಳಿದ್ದಾರೆ.
ಒಲಿಂಪಿಕ್ಸ್‌ನಲ್ಲಿ ಭಾರತದ ಹಾಕಿಯಲ್ಲಿ ಶ್ರೀಮಂತ ಇತಿಹಾಸವನ್ನು ಹೊಂದಿದೆ. 1928 ರಲ್ಲಿ ಆಮ್‌ಸ್ಟರ್‌ಡ್ಯಾಮ್‌ನಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ನೆದರ್‌ಲ್ಯಾಂಡ್ಸ್ ಅನ್ನು 3-0 ಅಂತರದಿಂದ ಸೋಲಿಸುವ ಮೂಲಕ ಟೀಮ್ ಇಂಡಿಯಾ ತಮ್ಮ ಮೊದಲ ಚಿನ್ನದ ಪದಕವನ್ನು ಗೆದ್ದಿದೆ. 1932, 1936, 1948, 1952, 1956, 1964 ಮತ್ತು 1980 ರ ಒಲಿಂಪಿಕ್ಸ್‌ಗಳಲ್ಲಿ ಚಿನ್ನದ ಪದಕಗಳನ್ನು ಗೆಲ್ಲುವ ಮೂಲಕ ತಮ್ಮ ಪ್ರಾಬಲ್ಯವನ್ನು ಮುಂದುವರೆಸಿತ್ತು.
ಹೀಗೆ ತನ್ನ 8 ಚಿನ್ನದ ಪದಕಗಳ ಹೊರತಾಗಿ, ಟೀಮ್ ಇಂಡಿಯಾ 1960 ರಲ್ಲಿ ಬೆಳ್ಳಿ ಪದಕ ಮತ್ತು 1968, 1972 ಹಾಗು 2020 ರಲ್ಲಿ ಟೋಕಿಯೊದಲ್ಲಿ ನಡೆದ ಒಲಿಂಪಿಕ್ ಕ್ರೀಡಾಕೂಟಗಳಲ್ಲಿ 3 ಕಂಚಿನ ಪದಕಗಳನ್ನು ಗೆದ್ದುಕೊಂಡಿತ್ತು. ಈ ಮೂಲಕ 12 ಪದಕಗಳೊಂದಿಗೆ ಒಲಿಂಪಿಕ್ಸ್‌ನಲ್ಲಿ ಅತ್ಯಂತ ಯಶಸ್ವಿ ಪುರುಷರ ಹಾಕಿ ತಂಡವಾಗಿದೆ.