Pro Kabaddi 2025: ಬುಲ್ಸ್ ಆಟಕ್ಕೆ ಜೈಪುರ ತಬ್ಬಿಬ್ಬು: ಅಲಿರಾಜ್ ಅಬ್ಬರ
ನವದೆಹಲಿ: ಭರವಸೆಯ ಆಟಗಾರ ಅಲಿರಾಜ್ ಮಿರ್ಜೈನ್ ಹಾಗೂ ನಾಯಕ ಯೋಗೇಶ್ ಅವರ ಭರ್ಜರಿ ಆಟದ ನೆರವಿನಿಂದ ಬೆಂಗಳೂರು ಬುಲ್ಸ್ 12ನೇ ಆವೃತ್ತಿಯ ಪ್ರೊ ಕಬಡ್ಡಿ ಟೂರ್ನಿಯ 77ನೇ ಪಂದ್ಯದಲ್ಲಿ 47-26 ಅಂಕಗಳಿಂದ ಜೈಪುರ್ ಪಿಂಕ್ ಪ್ಯಾಂಥರ್ಸ್ ತಂಡವನ್ನು ಮಣಿಸಿತು. ಈ ಮೂಲಕ ಬುಲ್ಸ್ ಪ್ರಸಕ್ತ ಟೂರ್ನಿಯಲ್ಲಿ ಏಳನೆ ಗೆಲುವು ದಾಖಲಿಸಿದ್ದು, 14 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಐದನೇ ಸ್ಥಾನಕ್ಕೆ ಬಡ್ತಿ ಪಡೆದಿದೆ.
ಶನಿವಾರ ನಡೆದ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಆರಂಭದಿಂದಲೂ ಭರ್ಜರಿ ಆಟದ ಪ್ರದರ್ಶನ ನೀಡಿತು. ಈ ವೇಳೆ ಬುಲ್ಸ್ ಸಂಘಟಿತ ಆಟದ ಪ್ರದರ್ಶನ ನೀಡಿತು. ಈ ವೇಳೆ ದಾಳಿಯಲ್ಲಿ 7, ಟ್ಯಾಕಲ್‌ನಲ್ಲಿ 7 ಅಂಕವನ್ನು ಕಲೆ ಹಾಕಿತು. ಅಲ್ಲದೆ ಇದೇ ಅವಧಿಯಲ್ಲಿ ಒಮ್ಮೆ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡದ ಅಂಗಳವನ್ನು ಖಾಲಿ ಮಾಡಿತು. ಪರಿಣಾಮ ಬುಲ್ಸ್ 18-13 ಅಂಕಗಳಿಂದ ಮುನ್ನಡೆ ಸಾಧಿಸಿತು.

ಮೊದಲಾವಧಿಯಲ್ಲಿ ಸಾಧಿಸಿದ್ದ 5 ಅಂಕಗಳ ಮುನ್ನಡೆಯನ್ನು ಗಮನದಲ್ಲಿಟ್ಟುಕೊಂಡು ಆಡಿದ ಬುಲ್ಸ್ ಅಭಿಮಾನಿಗಳಿಗೆ ಎರಡನೇ ಅವಧಿಯಲ್ಲಿ ಹಬ್ಬದೂಟವನ್ನು ಉಣಬಡಿಸಿತು. ಈ ಅವಧಿಯ ಆಟದಲ್ಲಿ ಬುಲ್ಸ್ ದಾಳಿಯಲ್ಲಿ 14 ಹಾಗೂ ಟ್ಯಾಕಲ್‌ನಲ್ಲಿ 11 ಅಂಕವನ್ನು ಕಲೆ ಹಾಕಿತು. ಅಲ್ಲದೆ 4 ಬೋನಸ್ ಅಂಕವನ್ನು ಕಲೆ ಹಾಕಿತು. ಒಟ್ಟಾರೆ ಪಂದ್ಯದಲ್ಲಿ ಬುಲ್ಸ್ ಅಮೋಘ ಟ್ಯಾಕಲ್‌ನ್ನು ನಡೆಸಿತು. ಒಟ್ಟಾರೆ 40 ನಿಮಿಷದ ಆಟದಲ್ಲಿ ಬುಲ್ಸ್ 18 ಅಂಕವನ್ನು ಟ್ಯಾಕಲ್‌ನಲ್ಲಿ ಕಲೆ ಹಾಕಿತು.
ಅಲಿರಾಜ್ ಅಬ್ಬರ
ಭರವಸೆಯ ಆಟಗಾರ ಅಲಿರಾಜ್ ಮಿರ್ಜೈನ್ 22 ಬಾರಿ ಎದುರಾಳಿ ಕೋರ್ಟ್‌ಗೆ ಎಂಟ್ರಿ ನೀಡಿ 12 ಟಚ್ ಪಾಯಿಂಟ್‌ಗಳನ್ನು ಕಲೆ ಹಾಕಿದರು. ರಕ್ಷಣಾ ಆಟಗಾರ ಯೋಗೇಶ್ 8 ಅಂಕವನ್ನು ಕಲೆ ಹಾಕಿದರು. ಪರಾಜಿತ ತಂಡದ ಪರ ಅಲಿ ಸಮಾಧಿ 9 ಅಂಕ ಪೇರಿಸಿದರು.
ಪುಣೇರಿಗೆ ಜಯ
ಶನಿವಾರ ನಡೆದ ಇನ್ನೊಂದು ಪಂದ್ಯದಲ್ಲಿ ಪುಣೇರಿ ಪಲ್ಟನ್ 36-23 ಅಂಕಗಳಿಂದ ತಮಿಳು ತಲೈವಾಸ್‌ಗೆ ಮಣಿಸಿತು. ಈ ಮೂಲಕ ಟೂರ್ನಿಯಲ್ಲಿ 11 ಗೆಲುವು ದಾಖಲಿಸಿ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನ ಭದ್ರ ಪಡಿಸಿಕೊಳ್ಳುವುದರೊಂದಿಗೆ ಮುಂದಿನ ಹಂತಕ್ಕೆ ಅರ್ಹತೆ ಪಡೆದಿದೆ. ಆಟದ ಮೊದಲಾವಧಿಯಿಂದಲೂ ಪುಣೇರ ಅಮೋಘ ಆಟದ ಪ್ರದರ್ಶನ ನೀಡಿತು. ಮೊದಲ 20 ನಿಮಿಷದ ಆಟದಲ್ಲಿ ಪುಣೇರಿ ದಾಳಿಯಲ್ಲಿ 12, ಟ್ಯಾಕಲ್‌ನಲ್ಲಿ 5 ಅಂಕ ಸೇರಿಸಿತು. ಅಲ್ಲದೆ ಒಮ್ಮೆ ತಲೈವಾಸ್ ತಂಡವನ್ನು ಆಲೌಟ್ ಸಹ ಮಾಡಿತು. ಈ ಅವಧಿಯಲ್ಲಿ ಪುಣೇರಿ 20-11 ಅಂಕಗಳಿಂದ ಮುನ್ನಡೆಯಿತು.

ಎರಡನೇ ಅವಧಿಯ ಆಟದಲ್ಲಿ ತಲೈವಾಸ್ ಎಚ್ಚರಿಕೆಯ ಆಟವನ್ನು ಆಡುವ ಸೂಚನೆಯನ್ನು ನೀಡಿತು. ಆದರೆ ಮೊದಲಾವಧಿಯಲ್ಲಿ ಸಾಧಿಸಿದ್ದ 9 ಅಂಕಗಳ ಹಿನ್ನಡೆಯನ್ನು ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಈ ಅವಧಿಯಲ್ಲಿ ಉಭಯ ತಂಡಗಳ ರಕ್ಷಣಾ ಆಟ ಮನಮೋಹಕವಾಗಿತ್ತು. ಅಂತಿಮವಾಗಿ ಪುಣೇರಿ ಸ್ಥಿರ ಪ್ರದರ್ಶನ ನೀಡಿ ಜಯ ಸಾಧಿಸಿತು. ಪುಣೇರಿ ತಂಡದ ಪರ ಸ್ಟಾರ್ ರೈಡರ್ ಪಂಕಜ್ 9, ಆಲ್‌ರೌಂಡರ್ ಅಸ್ಲಂ ಇನಾಮ್ದಾರ್ 7 ಅಂಕ ಸೇರಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications