ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಪದಕದ ಬೇಟೆ ಮುಂದುವರಿದಿದೆ. ಪುರಷರ ಕಬಡ್ಡಿಯಲ್ಲಿಯೂ ಭಾರತ ತಂಡ ಇರಾನ್ ತಂಡವನ್ನು ಮಣಿಸಿ ಚಿನ್ನದ ಪದಕವನ್ನು ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ತೀವ್ರ ಪೈಪೋಟಿಯಿಂದ ಕೂಡಿದ್ದ ಈ ಪಂದ್ಯದ ಅಂತಿಮ ಘಟ್ಟದಲ್ಲಿ ಭಾರೀ ವಿವಾದ ಉಂಟಾಗಿದ್ದು ಸುಮಾರು ಒಂದು ಗಂಟೆಗಳ ಕಾಲ ಪಂದ್ಯ ಮುಂದುವರಿಯಲು ಅವಕಾಶ ದೊರೆಯಲಿಲ್ಲ. ಪಂದ್ಯ ಮುಂದುವರಿದ ಬಳಿಕ ಭಾರತ ಪಂದ್ಯವನ್ನು ತನ್ನ ವಶಕ್ಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಭಾರತದ ಚಿನ್ನದ ಪದಕಗಳ ಪಟ್ಟಿಗೆ ಮತ್ತೊಂದು ಪದಕ ಸೇರ್ಪಡೆಯಾಗಿದೆ.
ಪಂದ್ಯದ ಮುಕ್ತಾಯದ ಹಂತದಲ್ಲಿ ಭಾರತದ ರೈಡರ್ ಪವನ್ ಸೆಹ್ರಾವತ್ ಅವರ ರೈಡಿಂಗ್ ಸಂದರ್ಭದಲ್ಲಿ ಉಂಟಾದ ವಿವಾದ ತೀವ್ರ ಸ್ವರೂಪವನ್ನು ಪಡೆದುಕೊಂಡಿತು. ಪಂದ್ಯದ ರೆಫ್ರಿಗಳ ಅಸ್ಪಷ್ಟ ನಿಲುವಿನಿಂದಾಗಿ ದೊಡ್ಡ ಮಟ್ಟದ ಗೊಂದಲವುಂಟಾಗಿ ಮಾತಿನ ಚಕಮಕಿ ಕೂಡ ನಡೆಯಿತು. ಆದರೆ ಅಂತಿಮವಾಗಿ ಭಾರತ ಈ ಪಂದ್ಯದಲ್ಲಿ 33-29 ಅಂಕಗಳ ಅಂತರದಿಂದ ಗೆಲುವು ಸಾಧಿಸಿ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿ.

ಚಿನ್ನದ ಪದಕದ ಹಣಾಹಣಿಯಲ್ಲಿ ಮೊದಲಾರ್ಧದ ಮುಕ್ತಾಯದ ಹಂತದಲ್ಲಿ ಭಾರತ ತಂಡ ಇರಾನ್ ವಿರುದ್ಧ ಮುನ್ನಡೆ ಸಾಧಿಸಿತ್ತು. 2018ರ ಏಷ್ಯನ್ ಗೇಮ್ಸ್ ಚಾಂಪಿಯನ್ ತಂಡವನ್ನು ಆಲ್ ಔಟ್ ಮಾಡಿದ ನಂತರ ಭಾರತ 17-13 ರಿಂದ ಮುನ್ನಡೆ ಪಡೆದುಕೊಂಡಿತ್ತು. ಅದಕ್ಕೂ ಮುನ್ನ ಭಾರತ 7-9 ಹಿನ್ನಡೆಯಲ್ಲಿತ್ತು ಆದರೆ ಪಂದ್ಯದಲ್ಲಿ ಅದ್ಭುತ ಪುನರಾಗಮನವನ್ನು ಮಾಡಿ ಮೇಲುಗೈ ಸಾಧಿಸಿತ್ತು.
ದ್ವಿತೀಯಾರ್ಧದಲ್ಲಿಯೂ ಭಾರತದ ಆರಂಭ ಉತ್ತಮವಾಗಿತ್ತು. 15 ನಿಮಿಷಗಳು ಇರುವಾಗ 21-16 ರಲ್ಲಿ ಐದು ಪಾಯಿಂಟ್‌ಗಳ ಮುನ್ನಡೆ ಸಾಧಿಸಿತು. ಈ ಹಂತದಲ್ಲಿ ನಾಯಕ ಪವನ್ 'ಮಾಡು ಇಲ್ಲವೇ ಮಡಿ' ರೈಡಿಂಗ್‌ಗೆ ತೆರಳಿದ್ದಾಗ ನಡೆದ ಘಟನೆ ದೊಡ್ಡ ವಿವಾದಕ್ಕೆ ಕಾರಣವಾಯಿತು. ರೈಡರ್ ಲಾಬಿಯಿಂದ ಹೊರಬಂದ ವಿಚಾರವಾಗಿ ಅಂಪೈರ್‌ಗಳು ಹಳೇಯ ಹಾಗೂ ಹೊಸ ನಿಯಮಗಳ ಎರಡೂ ನಿಮಗಳ ಬಳಕೆಯ ಬಗ್ಗೆ ಗೊಂದಲ ಮಾಡಿಕೊಂಡ ಕಾರಣ ಇಡೀ ಪಂದ್ಯದ ಮೇಲೆಯೇ ಕರಿ ಛಾಯೆ ಆವರಿಸಿತ್ತು. ಇಈ ಹಂತದಲ್ಲಿ ಸಾಕಷ್ಟು ವಾಗ್ವಾಗಳು ಕೂಡ ಏರ್ಪಟ್ಟಿತ್ತು. ಸ್ವತಃ ರೆಫ್ರಿಗಳು ಈ ಸಂದರ್ಭದಲ್ಲಿ ಗೊಂಚಲದಲ್ಲಿರುವುದು ಅತ್ಯಂತ ಸ್ಪಷ್ಟವಾಗಿತ್ತು.
ಮೊದಲಿಗೆ ಎರಡು ತಂಡಗಳಿಗೂ ತಲಾ ಒಂದೊಂದು ಅಂಕಗಳನ್ನು ನೀಡಿದ್ದಾಗ ಭಾರತ ಆಕ್ಷೇಪಿಸಿತ್ತು. ನಂತರ ಭಾರತಕ್ಕೆ ಮೂರು ಹಾಗೂ ಇರಾನ್‌ಗೆ ಒಂದು ಅಂಕವನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಇರಾನ್ ಕೂಡ ಪ್ರತಿಭಟಿಸಿತು. ಹೀಗೆ ತೀವ್ರ ಗೊಂದಲಕಾರಿ ಸನ್ನಿವೇಶ ಉಂಟಾಗಿತ್ತು. ಅಂತಿಮವಾಗಿ ಒಂದು ನಿರ್ಧಾರಕ್ಕೆ ಬಂದು ಭಾರತಕ್ಕೆ ಮೂರು ಅಂಕಗಳನ್ನು ನೀಡಲಾಗಿದ್ದು ಒಂದು ಅಂಕ ಇರಾನ್ ಪಾಲಾಯಿತು.
ನಂತರ ಪಂದ್ಯ ಮುಂದುವರಿದಿದ್ದು ಭಾರತ ಪಂದ್ಯವನ್ನು ಗೆದ್ದು ಬೀಗಿದೆ. ಈ ಮೂಲಕ 2018ರ ಚಾಂಪಿಯನ್ ಇರಾನ್ ತಂಡವನ್ನು ಭಾರತ ಮಣಿಸಿದ್ದು ಚಿನ್ನದ ಪದಕ್ಕಕೆ ಕೊರಳೊಡ್ಡಿದೆ.