11ನೇ ಆವೃತ್ತಿ ಪ್ರೊ ಕಬಡ್ಡಿ ಟೂರ್ನಿಯಲ್ಲಿ ಬೆಂಗಳೂರು ಬುಲ್ಸ್ ತಂಡದ ಸೋಲಿನ ಸರಪಳಿ ಮುಂದುವರೆದಿದೆ. ಮಂಗಳವಾರ ನಡೆದ ಪ್ರಸಕ್ತ ಆವೃತ್ತಿಯ 49ನೇ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ 32-39 ರಿಂದ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡದ ವಿರುದ್ಧ ಸೋಲು ಕಂಡಿತು. ಮಹತ್ವದ ಪಂದ್ಯದಲ್ಲಿ ಬುಲ್ಸ್ ತಂಡದ ರಕ್ಷಣಾ ವಿಭಾಗದ ಆಟಗಾರರು ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾದರು. ಪರಿಣಾಮ ಬುಲ್ಸ್ ಟೂರ್ನಿಯಲ್ಲಿ ಏಳನೇ ಸೋಲು ಕಂಡಿದೆ.
ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿರುವ ಜೈಪುರ ಪಿಂಕ್ ತಂಡ ದಾಳಿ ಹಾಗೂ ಟ್ಯಾಕಲ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿ ಜಯ ಸಾಧಿಸಿತು. ಈ ಮೂಲಕ ಪೂರ್ಣ ಅಂಕ ಕಲೆ ಹಾಕಿತು. ಆಡಿದ 8 ಪಂದ್ಯಗಳಲ್ಲಿ ಜೈಪುರ 4 ಜಯ, 3 ಸೋಲು, 1 ಡ್ರಾ ಸಾಧಿಸಿದ್ದು, 25 ಅಂಕಗಳನ್ನು ಕಲೆ ಹಾಕಿ ಏಳನೇ ಸ್ಥಾನವನ್ನು ಪಡೆದಿದೆ.

ಬೆಂಗಳೂರು ಸಾಲು ಸಾಲು ಸೋಲುಗಳಿಂದ ಪಾಠ ಕಲಿತಂತೆ ಆಡಿದ ಬುಲ್ಸ್ ಸ್ಥಿರ ಪ್ರದರ್ಶನ ಅಂಕಗಳನ್ನು ಕಲೆ ಹಾಕುತ್ತಾ ಸಾಗಿತ್ತು. ಈ ಅವಧಿಯಲ್ಲಿ ಬುಲ್ಸ್ ದಾಳಿಯಲ್ಲಿ 11 ಹಾಗೂ ಟ್ಯಾಕಲ್‌ನಲ್ಲಿ 5 ಅಂಕಗಳನ್ನು ಕಲೆ ಹಾಕಿತು. ಅವಧಿಯಲ್ಲಿ ಪಿಂಕ್ ಪ್ಯಾಂಥರ್ಸ್ ಒಂದು ಬಾರಿ ಆಲೌಟ್ ಆಯಿತು.
ಎರಡನೇ ಅವಧಿಯ ಆಟದಲ್ಲಿ ಬುಲ್ಸ್ ತಂಡದ ರಣ ತಂತ್ರವನ್ನು ಮೆಟ್ಟಿ ನಿಂತು ಅಮೋಘ ಪ್ರದರ್ಶನ ನೀಡಿತು. ಈ ಅವಧಿಯಲ್ಲಿ ಪ್ಯಾಂಥರ್ಸ್ ದಾಳಿಯಲ್ಲಿ 7, ಟ್ಯಾಕಲ್‌ನಲ್ಲಿ 10 ಅಂಕಗಳನ್ನು ಕಲೆ ಹಾಕಿತು. ಈ ಅವಧಿಯಲ್ಲಿ ಬೆಂಗಳೂರು ತಂಡ ಎರಡು ಬಾರಿ ಅಂಗಳ ಖಾಲಿ ಮಾಡಿದ್ದರಿಂದ ಜೈಪುರ ಬೋನಸ್ ಅಂಕವನ್ನು ಕಲೆ ಹಾಕಿತು.
ಜೈಪುರ ಪರ ಅರ್ಜುನ್ ದೇಶ್ವಾಲ್ 19 ಅಂಕಗಳನ್ನು ಕಲೆ ಹಾಕಿ ಗೆಲುವಿನಲ್ಲಿ ಮಿಂಚಿದರು. ಪರಾಜಿತ ತಂಡದ ಪರ ಅಜಿಂಕ್ಯ ಪವಾರ 9 ಅಂಕ ಸೇರಿಸಿದರು.

ಪ್ರಸಕ್ತ ಟೂರ್ನಿಯ 50ನೇ ಪಂದ್ಯದಲ್ಲಿ ದಬಾಂಗ್ ದೆಹಲಿ ಕೆಸಿ ಹಾಗೂ ಪುಣೇರಿ ಪಲ್ಟನ್ ತಂಡಗಳು ತಲಾ 38 ಅಂಕಗಳನ್ನು ಕಲೆ ಹಾಕಿ, ಅಂಕಗಳನ್ನು ಹಂಚಿಕೊಂಡವು. ಈ ಪಂದ್ಯದಲ್ಲಿ ಡ್ರಾ ಸಾಧಿಸಿದ ಪುಣೇರಿ 33 ಅಂಕಗಳನ್ನು ಕಲೆ ಹಾಕಿ ಮೊದಲ ಸ್ಥಾನಕ್ಕೆ ಬಡ್ತಿ ಪಡೆಯಿತು. ಇನ್ನು ದಬಾಂಗ್ ದೆಹಲಿ ಆಡಿದ 10 ಪಂದ್ಯಗಳಲ್ಲಿ, 4 ಜಯ, 5 ಸೋಲು, 1 ಡ್ರಾ ಸಾಧಿಸಿದ್ದು, 27 ಅಂಕಗಳನ್ನು ಕಲೆ ಹಾಕಿದ್ದು ಅಂಕ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ.
ದಬಾಂಗ್ ಪರ ಆಶು ಮಲಿಕ್ 17 ಅಂಕಗಳನ್ನು ಕಲೆ ಹಾಕಿದರು. ಪುಣೇರಿ ಪರ ಆಕಾಶ್ ಶಿಂಧೆ 8 ಅಂಕಗಳನ್ನು ಬಾಚಿಕೊಂಡರು.
ಬುಧವಾರ ಗುಜರಾತ್ ಜೈಂಟ್ಸ್ ಹಾಗೂ ಬಂಗಾಳ ವಾರಿಯರ್ಸ್ ತಂಡಗಳು ಮೊದಲ ಪಂದ್ಯದಲ್ಲಿ ಕಾದಾಟ ನಡೆಸಲಿವೆ. ಎರಡನೇ ಪಂದ್ಯದಲ್ಲಿ ಪಾಟ್ನಾ ಪೈರೇಟ್ಸ್, ಹರಿಯಾಣ ಸ್ಟೀಲರ್ಸ್ ನಡುವೆ ಹೋರಾಟ ನಡೆಸಲಿದೆ.