12ನೇ ಆವೃತ್ತಿಯ ಪ್ರೋ ಕಬಡ್ಡಿ ಟೂರ್ನಿಯ 88ನೇ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಜಿದ್ದಾಜಿದ್ದಿನ ಹೋರಾಟ ನಡೆಸಿ, ವಿರೋಚಿತ ಸೋಲು ಕಂಡಿದೆ. ಗುರುವಾರ ನಡೆದ ಮೊದಲ ಪಂದ್ಯದಲ್ಲಿ ಬುಲ್ಸ್ ಟೈ ಬ್ರೇಕರ್‌ವರೆಗೂ ಸಾಗಿದ ಪಂದ್ಯದಲ್ಲಿ ಪಾಟ್ನಾ ಪೈರೇಟ್ಸ್ ವಿರುದ್ಧ ನಿರಾಸೆ ಕಂಡಿದೆ. ಈ ಮೂಲಕ ಬುಲ್ಸ್ ಪ್ರಸಕ್ತ ಆವೃತ್ತಿಯ ಕಬಡ್ಡಿ ಟೂರ್ನಿಯಲ್ಲಿ 8ನೇ ಸೋಲು ಕಂಡಿದೆ. ಮಹತ್ವದ ಪಂದ್ಯದಲ್ಲಿ ಬುಲ್ಸ್ ಸೋಲು ಕಂಡರೂ ಸಹ 16 ಅಂಕಗಳನ್ನು ಕಲೆ ಹಾಕಿದ್ದು, ಅಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನವನ್ನು ಕಾಯ್ದುಕೊಂಡಿದೆ. ನಿಗದಿತ ಸಮಯದ ಆಟದಲ್ಲಿ ಬೆಂಗಳೂರು ಬುಲ್ಸ್ ಹಾಗೂ ಪಾಟ್ನಾ ಪೈರೇಟ್ಸ್ ತಂಡಗಳಿ ತಲಾ 32 ಅಂಕಗಳನ್ನು ಕಲೆ ಹಾಕಿದ್ದರಿಂದ ಪಂದ್ಯದ ಫಲಿತಾಂಶ ಅರಿಯಲು ಟೈ ಬ್ರೇಕರ್ ಮೊರೆ ಹೋಗಲಾಯಿತು.
ಮೊದಲಾವಧಿಯ ಆಟದಲ್ಲಿ ಬುಲ್ಸ್ ಅಂಕಗಳನ್ನು ಕಲೆ ಹಾಕುವಲ್ಲಿ ವಿಫಲವಾಯಿತು. ಪರಿಣಾಮ ಈ ಅವಧಿಯ ಆಟದಲ್ಲಿ ಪಾಟ್ನಾ 16-13 ಅಂಕಗಳಿಂದ ಮುನ್ನಡೆ ಸಾಧಿಸಿತು. ಈ ವೇಳೆ ಉಭಯ ತಂಡಗಳು ಬೋನಸ್ ಅಂಕವನ್ನು ಕಲೆ ಹಾಕುವಲ್ಲಿ ವಿಫಲವಾದವು. ಎರಡನೇ ಅವಧಿಯ ಆಟದಲ್ಲಿ ಬೆಂಗಳೂರು ಕ್ಲಾಸಿಕ್ ಆಟದ ಪ್ರದರ್ಶನ ನೀಡಿ ದಾಳಿಯಲ್ಲಿ ಅಂಕಗಳ ಬೇಟೆ ನಡೆಸಿತು. ಈ ಬುಲ್ಸ್ ರೈಡಿಂಗ್‌ನಲ್ಲಿ 12, ಟ್ಯಾಕಲ್‌ನಲ್ಲಿ 3 ಅಂಕಗಳನ್ನು ಕಲೆ ಹಾಕಿತು. ಅಲ್ಲದೆ ಈ ಅವಧಿಯಲ್ಲಿ ಉಭಯ ತಂಡಗಳು ತಲಾ ಒಮ್ಮೆ ಆಲೌಟ್ ಆದವು.

ಬೆಂಗಳೂರು ತಂಡದ ಪರ ಸ್ಟಾರ್ ರೈಡರ್ ಅಲಿರಾಜ್ ಮಿರ್ಜೈನ್ 24 ಬಾರಿ ಎದುರಾಳಿ ಕೋರ್ಟ್‌ಗೆ ಎಂಟ್ರಿ ನೀಡಿ 11 ಟಚ್ ಪಾಯಿಂಟ್, 6 ಬೋನಸ್ ಅಂಕವನ್ನು ಕಲೆ ಹಾಕಿ ಮಿಂಚಿದರು. ಪಾಟ್ನಾ ಪೈರೇಟ್ಸ್ ತಂಡದ ಪರ ಆಯನ್ 14 ಅಂಕ ಕಲೆ ಹಾಕಿದರು.
ಗುರುವಾರ ನಡೆದ ಎರಡನೇ ಪಂದ್ಯದಲ್ಲಿ ಯು ಮುಂಬಾ 33-26 ಅಂಕಗಳಿಂದ ತೆಲುಗು ಟೈಟಾನ್ಸ್ ತಂಡವನ್ನು ಮಣಿಸಿತು. ಈ ಪಂದ್ಯದ ಮೊದಲಾವಧಿಯಿಂದಲೂ ಮುಂಬಾ ತಂಡ ಭರ್ಜರಿ ಪ್ರದರ್ಶನ ನೀಡಿತು. ಈ ಅವಧಿಯಲ್ಲಿ ಮುಂಬಾ ದಾಳಿ ಹಾಗೂ ಟ್ಯಾಕಲ್‌ನಲ್ಲಿ ಸಮನಾದ ಅಂಕವನ್ನು ಕಲೆ ಹಾಕಿತು. ಯು ಮುಂಬಾ ಎರಡನೇ ಅವಧಿಯಲ್ಲೂ ಆರಂಭದಿಂದ ಸಾಧಿಸಿದ್ದ ಹಿಡಿತವನ್ನು ಬಿಟ್ಟು ಕೊಡಲಿಲ್ಲ. ಈ ಅವಧಿಯಲ್ಲೂ ಮಾಜಿ ಚಾಂಪಿಯನ್ ಮುಂಬಾ ತಂಡದ ಅಮೋಘ ವಾಗಿತ್ತು. ಅಲ್ಲದೆ ಈ ಅವಧಿಯಲ್ಲಿ ತೆಲುಗು ತಂಡವನ್ನು ಒಮ್ಮೆ ಮುಂಬಾ ಆಲೌಟ್ ಮಾಡಿತು. ವಿಜೇತ ತಂಡದ ಪರ ಅಜಿತ್ ಚೌಹಾಣ್ 8 ಅಂಕ ಕಲೆ ಹಾಕಿ ಜಯದಲ್ಲಿ ಮಿಂಚಿದರು.
ಗುರುವಾರ ನಡೆದ ಮೂರನೇ ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್ ಭರ್ಜರಿ ಪ್ರದರ್ಶನ ನೀಡಿ ಜಯ ಸಾಧಿಸಿತು. ಹರಿಯಾಣ ತಂಡ ಮೊದಲಾವಧಿಯಲ್ಲಿ ಭರ್ಜರಿ ಮುನ್ನಡೆ ಸಾಧಿಸಿತು. ಈ ಅವಧಿಯಲ್ಲಿ ಸ್ಟೀಲರ್ಸ್ ದಾಳಿಯಲ್ಲಿ 14, ಟ್ಯಾಕಲ್‌ನಲ್ಲಿ 7 ಅಂಕವನ್ನು ಕಲೆ ಹಾಕಿತು. ಅಲ್ಲದೆ 2 ಬಾರಿ ಯುಪಿ ತಂಡವನ್ನು ಆಲೌಟ್ ಮಾಡಿತು. ಇನ್ನು ಎರಡನೇ ಅವಧಿಯ ಆಟದಲ್ಲೂ ಸ್ಟೀಲರ್ಸ್ ಸೊಗಸಾದ ಆಟದ ಪ್ರದರ್ಶನವನ್ನು ನೀಡಿ ಅಬ್ಬರಿಸಿತು. ಪರಿಣಾಮ ಸ್ಟೀಲರ್ಸ್ 53-26 ರಿಂದ ಯುಪಿ ಯೋಧಾಸ್ ವಿರುದ್ಧ ಜಯ ಸಾಧಿಸಿ ಅಂಕ ಪಟ್ಟಿಯಲ್ಲಿ 5ನೇ ಸ್ಥಾನವನ್ನು ಕಾಯ್ದುಕೊಂಡಿತು. ಹರಿಯಾಣ ತಂಡದ ಪರ ಶಿವಂ 17 ಬಾರಿ ಎದುರಾಳಿ ಕೋರ್ಟ್‌ಗೆ ಎಂಟ್ರಿ ನೀಡಿ 15 ಅಂಕ ಸೇರಿಸಿತು.