ಕೊನೆಯ ಕ್ಷಣದಲ್ಲಿ ಅಮೋಘ ಪ್ರದರ್ಶನ ನೀಡಿದ ಕನ್ನಡಿಗ ಗಣೇಶ ಹಣಮಂತಗೋಳ್ ಅವರ ಭರ್ಜರಿ ರೈಡ್‌ನ ಪರಿಣಾಮ 12ನೇ ಆವೃತ್ತಿಯ ಪ್ರೋ ಕಬಡ್ಡಿ ಲೀಗ್‌ನ 34ನೇ ಪಂದ್ಯದಲ್ಲಿ ಬೆಂಗಳೂರು ಬುಲ್ಸ್, ತೆಲುಗು ಟೈಟಾನ್ಸ್ ತಂಡವನ್ನು ಮಣಿಸಿತು. ಕೊನೆಯ ಕ್ಷಣದವರೆಗೂ ರೋಚಕತೆ ಹುಟ್ಟಿಸಿದ್ದ ಪಂದ್ಯದಲ್ಲಿ ಬುಲ್ಸ್ ಸ್ಥಿರ ಪ್ರದರ್ಶನ ನೀಡಿ ಜಯ ಸಾಧಿಸಿತು. ಈ ಮೂಲಕ ಬೆಂಗಳೂರು ಬುಲ್ಸ್ ಅಡಿದ 7 ಪಂದ್ಯಗಳಲ್ಲಿ 4 ಜಯ, 3 ಸೋಲು ಕಂಡಿದ್ದು, 8 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ನಾಲ್ಕನೇ ಜಯ ದಾಖಲಿಸಿದೆ. ಮಂಗಳವಾರ ಬುಲ್ಸ್ ಮತ್ತೊಂದು ಪಂದ್ಯದಲ್ಲಿ ತಮಿಳು ತಲೈವಾಸ್ ವಿರುದ್ಧ ಕಾದಾಟ ನಡೆಸಲಿದೆ.
ಸೋಮವಾರ ಎಸ್‌ಎಂಎಸ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ 34-32 ರಿಂದ ತೆಲುಗು ಟೈಟಾನ್ಸ್ ತಂಡವನ್ನು ಮಣಿಸಿತು. ಈ ಸೋಲಿನ ಮೂಲಕ ತೆಲುಗು ಟೈಟಾನ್ಸ್ ತಂಡ ಅಂಕ ಪಟ್ಟಿಯಲ್ಲಿ 5ನೇ ಸ್ಥಾನಕ್ಕೆ ಕುಸಿತ ಕಂಡಿದೆ. ತೆಲುಗು ತಂಡ ಆಡಿದ 7 ಪಂದ್ಯಗಳಲ್ಲಿ 3 ಜಯ ಸಾಧಿಸಿ, 5ನೇ ಸ್ಥಾನಕ್ಕೆ ಕುಸಿದಿದೆ.

ಮೊದಲಾವಧಿಯ ಆಟದಲ್ಲಿ ಉಭಯ ತಂಡಗಳು ಜಿದ್ದಾಜಿದ್ದಿನ ಆಟವನ್ನು ಪ್ರದರ್ಶಿಸಿದವು. ಈ ವೇಳೆ ಬುಲ್ಸ್ ಆರಂಭದಲ್ಲಿ ಅಂಕಗಳಿಕೆಯಲ್ಲಿ ಮುನ್ನಡೆ ಸಾಧಿಸಿತು. ಆದರೆ ಈ ಮುನ್ನಡೆ ಹೆಚ್ಚು ಕ್ಷಣ ನಡೆಯಲಿಲ್ಲ. ತೆಲುಗು 14-11 ಅಂಕಗಳಿಂದ ಮುನ್ನಡೆ ಸಾಧಿಸಿತು. ಈ ವೇಳೆ ಟೈಟಾನ್ಸ್ ದಾಳಿಯಲ್ಲಿ 8, ಟ್ಯಾಕಲ್‌ನಲ್ಲಿ 4 ಅಂಕ ಕಲೆ ಹಾಕಿದರು. ಬುಲ್ಸ್ ರಕ್ಷಣಾ ವಿಭಾಗದಲ್ಲಿ 5 ಅಂಕ ಕಲೆ ಹಾಕಿ ಮಿಂಚಿತು.
ಎರಡನೇ ಅವಧಿಯ ಆಟದಲ್ಲಿ ಬೆಂಗಳೂರು ಬುಲ್ಸ್ ಅಮೋಘ ಪ್ರದರ್ಶನ ನೀಡಿತು. ಈ ವೇಳೆ ದಾಳಿಯಲ್ಲಿ ಬೆಂಗಳೂರು ತಂಡದ ಸ್ಟಾರ್ ರೈಡರ್‌ಗಳು ಸ್ಥಿರ ಪ್ರದರ್ಶನ ನೀಡಿದರು. ಎರಡನೇ ಅವಧಿಯ ಆಟದಲ್ಲಿ ಬುಲ್ಸ್ 23-18 ಅಂಕಗಳಿಂದ ಮುನ್ನಡೆ ಸಾಧಿಸಿತು. ಈ ವೇಳೆ ದಾಳಿಯಲ್ಲಿ 16 ಅಂಕಗಳನ್ನು ಕಲೆ ಹಾಕಿದರೆ, ಟೈಟಾನ್ಸ್ 14 ಅಂಕಗಳನ್ನು ಸೇರಿಸಿತು. ಕೊನೆಯ 20 ನಿಮಿಷದಲ್ಲಿ ಬುಲ್ಸ್ ಹಾಗೂ ಟೈಟಾನ್ಸ್ ತಂಡಗಳು ಒಮ್ಮೆ ಆಲೌಟ್ ಆದವು. ಬೆಂಗಳೂರು ತಂಡದ ಪರ ಅಲಿರಾಜ್ ಮಿರ್ಜೈನ್ 20 ಬಾರಿ ದಾಳಿ ನಡೆಸಿ 11 ಪಾಯಿಂಟ್ ಗಳಿಸಿದರು. ಟೈಟಾನ್ಸ್ ತಂಡದ ಪರ ಭರತ್ 13 ಅಂಕ ಸೇರಿಸಿ ಸೋಲಿನಲ್ಲಿ ಮಿಂಚಿದರು.
ಸೋಮವಾರ ನಡೆದ ಮೊದಲ ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್ 40-37 ರಿಂದ ಗುಜರಾತ್ ಟೈಟಾನ್ಸ್ ತಂಡವನ್ನು ಮಣಿಸಿ ಅಬ್ಬರಿಸಿತು. ಈ ಗೆಲುವಿನ ಮೂಲಕ ಹರಿಯಾಣ ಸ್ಟೀಲರ್ಸ್ ಟೂರ್ನಿಯಲ್ಲಿ ಮೂರನೇ ಗೆಲುವಿನ ನಗೆ ಬೀರಿದ್ದು, ಅಂಕ ಪಟ್ಟಿಯಲ್ಲಿ ಏಳನೇ ಸ್ಥಾನವನ್ನು ಪಡೆದಿದೆ. ಸ್ಟೀಲರ್ಸ್ ತಂಡದ ಪರ ರೈಡರ್ ಶಿವಂ 12 ಅಂಕ ಕಲೆ ಹಾಕಿ ಅಬ್ಬರಿಸಿದರು.