ಇಂಟರ್‌ನ್ಯಾಷನಲ್ ಕಬಡ್ಡಿ: ಸತತ 5 ಪಂದ್ಯಗಳನ್ನು ಗೆದ್ದ ಡೆಲ್ಲಿ

ಪುಣೆ, ಮೇ 20: ಸ್ಟಾರ್ ರೇಡರ್ ಸುನಿಲ್ ಜೈಪಾಲ್ ಭರ್ಜರಿ ಪ್ರದರ್ಶನದಿಂದ ಕಂಗೊಳಿಸಿದ ದಿಲರ್ ಡೆಲ್ಲಿ ತಂಡ ಇಲ್ಲಿ ನಡೆಯುತ್ತಿರುವ ಚೊಚ್ಚಲ ಆವೃತ್ತಿಯ ಇಂಡೊ ಇಂಟರ್‌ನ್ಯಾಷನಲ್ ಪ್ರೀಮಿಯರ್ ಕಬಡ್ಡಿ ಲೀಗ್ ಟೂರ್ನಿಯಲ್ಲಿ ಮುಂಬೈ ಚೇ ರಾಜೆ ತಂಡವನ್ನು ಬಗ್ಗುಬಡಿಯುವ ಮೂಲಕ ಟೂರ್ನಿಯಲ್ಲಿ ಸತತ 5ನೇ ಗೆಲುವು ದಾಖಲಿಸಿ ಆರ್ಭಟಿಸಿತು.
ಇಲ್ಲಿನ ಬಾಳೇವಾಡಿಯಲ್ಲಿರುವ ಶ್ರೀ ಶಿವ ಛತ್ರಪತಿ ಕ್ರೀಡಾ ಸಂಕೀರ್ಣದಲ್ಲಿ ಮಂಗಳವಾರ ನಡೆದ 'ಬಿ' ಝೋನ್ ವಿಭಾಗದ ಮೊದಲ ಪಂದ್ಯದಲ್ಲಿ ಮೊದಲ ಎರಡು ಕ್ವಾರ್ಟರ್‌ಗಳಲ್ಲಿ ಭಾರಿ ಮುನ್ನಡೆ ಗಳಿಸಿದ ಡೆಲ್ಲಿ ತಂಡ ಅಂತಿಮವಾಗಿ 45-36 ಅಂಕಗಳ ಅಂತರದಲ್ಲಿ ಮುಂಬೈ ಸವಾಲನ್ನು ಮೆಟ್ಟಿನಿಂತಿತು.
ಈ ಗೆಲುವಿನೊಂದಿಗೆ ಆಡಿದ ಐದೂ ಪಂದ್ಯಗಳಲ್ಲಿ ಜಯ ದಾಖಲಿಸಿರುವ ದಿಲರ್ ಡೆಲ್ಲಿ ತಂಡ ಒಟ್ಟಾರೆ 10 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಮತ್ತಷ್ಟು ಭದ್ರ ಪಡಿಸಿಕೊಂಡಿದೆ. ಮತ್ತೊಂದೆಡೆ 3 ಸೋಲು ಮತ್ತೊಂದು ಜಯ ಮತ್ತು ಡ್ರಾ ಫಲಿತಾಂಶದೊಂದಿಗೆ ಮುಂಬೈ ತಂಡ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿ ಉಳಿದಿದೆ.
ಮುಂಬೈ ತಂಡದ ಪರ ಪ್ರಮುಖ ರೇಡರ್‌ಗಳಾದ ರಶೀದ್ ಶೇಖ್ (6), ಮನೀಶ್ ಶರ್ಮಾ (5) ಮತ್ತು ಮಹೇಶ್ ಮಗ್ದುಮ್ (5) ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲರಾದ ಪರಿಣಾಮ ಟೂರ್ನಿಯಲ್ಲಿ ಮುಂಬೈ ತಂಡ ಮೂರನೇ ಸೋಲಿನ ಕಹಿ ಅನುಭವಿಸಿತು.
ಸುನಿಲ್ ಜೈಪಾಲ್ ಪಂದ್ಯಶ್ರೇಷ್ಠ
ಮಿಂಚಿನ ದಾಳಿಗಳೊಂದಿಗೆ ಮುಂಬೈ ತಂಡದ ಡಿಫಿನ್ಸ್ ವಿಭಾಗಕ್ಕೆ ತಲೆನೋವಾದ ಸುನಿಲ್ ಜೈಪಾಲ್ 9 ರೇಡ್ ಅಂಗಳು ಮತ್ತೊಂದು ಟ್ಯಾಕಲ್ ಅಂಕದ ಮೂಲಕ ಒಟ್ಟಾರೆ 10 ಅಂಕಗಳನ್ನು ದಾಖಲಿಸಿ ಡೆಲ್ಲಿ ತಂಡದ ಜಯದ ರೂವಾರಿಯೆನಿಸಿದರು. ಅವರ ಈ ಪ್ರದರ್ಶನಕ್ಕೆ ಪಂದ್ಯಶ್ರೇಷ್ಠ, ಅತ್ಯುತ್ತಮ ರೇಡರ್ ಮತ್ತು ಅತ್ಯುತ್ತಮ ಪ್ರೊಡಕ್ಟೀವ್ ರೇಡರ್ ಪ್ರಶಸ್ತಿಗಳು ಒಲಿದವು. ಡಿಫೆನ್ಸ್‌ನಲ್ಲೂ ಡೆಲ್ಲಿ ಗೆಲುವಿಗೆ ಬಲವಾಗಿ ನಿಂತ ವಿನೋದ್ ಕುಮಾರ್ ಪಂದ್ಯದ ಬೆಸ್ಟ್ ಡಿಫೆಂಡರ್ ಗೌರವಕ್ಕೆ ಪಾತ್ರರಾದರು. ಅವರಿಗೆ ವಿಪುಲ್ ಮೋಕಲ್ (4) ಮತ್ತು ಮುಖೇಶ್ ಜಗ್ಲಾನ್ (4) ಉತ್ತಮ ಸಾಥ್ ನೀಡಿದರು.
ಮೊದಲೆರಡು ಅವಧಿಗಳಲ್ಲಿ ಡೆಲ್ಲಿ ಅಬ್ಬರ
ಸ್ಥಿರ ಪ್ರದರ್ಶನ ನೀಡುತ್ತಿರುವ ದಿಲರ್ ಡೆಲ್ಲಿ ತಂಡ ಪಂದ್ಯದ ಆರಂಭದಿಂದಲೇ ಮುಂಬೈ ಎದುರು ಪ್ರಾಬಲ್ಯ ಮೆರೆಯಿತು. ರೇಡಿಂಗ್ ಮತ್ತು ಟ್ಯಾಕಲ್ ಎರಡರಲ್ಲೂ ಡೆಲ್ಲಿ ತಂಡದ ಗುಣಮಟ್ಟಕ್ಕೆ ಸರಿದೂಗದ ಮುಂಬೈ ಸತತ ಅಂಕಗಳನ್ನು ಕೈಚೆಲ್ಲಿತು. ಪರಿಣಾಮ ಮೊದಲ ಕ್ವಾರ್ಟರ್‌ನಲ್ಲಿ 13-6ರಲ್ಲಿ ಮೇಲುಗೈ ಪಡೆದ ಡೆಲ್ಲಿ, 2ನೇ ಕ್ವಾರ್ಟರ್‌ನಲ್ಲಿ 15-6ರ ಅಂತರದಲ್ಲಿ ಆಧಿಪತ್ಯ ಮೆರೆದು ಒಟ್ಟಾರೆ 28-12 ಅಂತರದ ಭಾರಿ ಮುನ್ನಡೆ ಗಳಿಸಿ ಪಂದ್ಯದ ಮೇಲಿನ ಹಿಡಿತವನ್ನು ಸಂಪೂರ್ಣವಾಗಿ ತನ್ನದಾಗಿಸಿಕೊಂಡಿತು.
ಮುಂಬೈ ಪ್ರತಿ ಹೋರಾಟ ವ್ಯರ್ಥ
ಅರ್ಧ ಪಂದ್ಯ ಮುಕ್ತಾಯಕ್ಕೆ ಒಟ್ಟಾರೆ 16 ಅಂಕಗಳ ಭಾರಿ ಮುನ್ನಡೆಯಲ್ಲಿದ್ದ ಡೆಲ್ಲಿ ತಂಡ ಉಳಿದ ಎರಡೂ ಕ್ವಾರ್ಟರ್‌ಗಳಲ್ಲಿ ರಕ್ಷಣಾತ್ಮಕ ಆಟದ ಮೊರೆ ಹೋಯಿತು. ಇದನ್ನು ಕೂಡಲೇ ಅರಿತ ಮುಂಬೈ ತಂಡ ಉತ್ತಮ ದಾಳಿ ಸಂಘಟಿಸುವ ಮೂಲಕ ಅಂಕಗಳನ್ನು ಗಳಿಸಲು ಆರಂಭಿಸಿತು. ಒಂದೆಡೆ ಅಂಕ ಬಿಟ್ಟುಕೊಟ್ಟರೂ ಮತ್ತೊಂದೆಡೆ ತನ್ನ ಖಾತೆಗೆ ಅಂಕಗಳನ್ನು ನಿಧಾನವಾಗಿ ಜೋಡಿಸುತ್ತಿದ್ದ ಡೆಲ್ಲಿ ತಂಡ ಒಟ್ಟು ಮುನ್ನಡೆಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ಅಂತಿಮವಾಗಿ ಮೂರನೇ ಮತ್ತು ನಾಲ್ಕನೇ ಕ್ವಾರ್ಟರ್ ಕ್ರಮವಾಗಿ 10-5, 14-12 ಅಂತರದಲ್ಲಿ ಮುಂಬೈ ತಂಡದ ಪಾಲಾದರೂ ಒಟ್ಟು 9 ಅಂಕಗಳ ಮುನ್ನಡೆ ಕಾಯ್ದುಕೊಂಡ ಡೆಲ್ಲಿ ತಂಡ ಗೆಲುವಿನ ನಗೆ ಬೀರಿತು.
ಕ್ವಾರ್ಟರ್‌ಗಳ ವಿವರ
1ನೇ ಕ್ವಾರ್ಟರ್: ಡೆಲ್ಲಿ 13-06 ಮುಂಬೈ
2ನೇ ಕ್ವಾರ್ಟರ್: ಡೆಲ್ಲಿ 15-06 ಮುಂಬೈ
3ನೇ ಕ್ವಾರ್ಟರ್: ಡೆಲ್ಲಿ 05-10 ಮುಂಬೈ
4ನೇ ಕ್ವಾರ್ಟರ್: ಡೆಲ್ಲಿ 12-14 ಮುಂಬೈ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications