12ನೇ ಆವೃತ್ತಿಯ ಪ್ರೋ ಕಬಡ್ಡಿ ಟೂರ್ನಿಯಲ್ಲಿ ಹರಿಯಾಣ ಸ್ಟೀಲರ್ಸ್ ತಂಡ ತನ್ನ ಅಮೋಘ ಪ್ರದರ್ಶನವನ್ನು ಮುಂದುವರೆಸಿದೆ. ಈ ಆವೃತ್ತಿಯ 41ನೇ ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್ 34-30 ರಿಂದ ಪುಣೇರಿ ಪಲ್ಟನ್ ತಂಡವನ್ನು ಮಣಿಸಿತು. ಈ ಮೂಲಕ ಸ್ಟೀಲರ್ಸ್ ಈ ಆವೃತ್ತಿಯಲ್ಲಿ ಐದನೇ ಗೆಲುವು ದಾಖಲಿಸಿತು. ಈ ಮೂಲಕ ಹರಿಯಾಣ ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಬಡ್ತಿ ಪಡೆಯಿತು.
ಶುಕ್ರವಾರ ನಡೆದ ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್ ಭರ್ಜರಿ ಪ್ರದರ್ಶನ ನೀಡಿತು. ಈ ಅವಧಿಯಲ್ಲಿ ಸ್ಟೀಲರ್ಸ್ ದಾಳಿಯಲ್ಲಿ 10 ಹಾಗೂ ಟ್ಯಾಕಲ್‌ನಲ್ಲಿ 5 ಅಂಕವನ್ನು ಕಲೆ ಹಾಕಿದರು. ಮೊದಲ 20 ನಿಮಿಷದಲ್ಲಿ ಹರಿಯಾಣ 19-10 ಅಂಕಗಳ ಮುನ್ನಡೆ ಸಾಧಿಸಿತು. ಈ ಅವಧಿಯಲ್ಲಿ ಪುಣೇರಿ ಪಲ್ಟನ್ ತಂಡ ಒಮ್ಮೆ ಆಲೌಟ್ ಆಯಿತು. ಪರಿಣಾಮ ಸ್ಟೀಲರ್ಸ್ ಬೋನಸ್ ಅಂಕವನ್ನು ಸಹ ಕಲೆ ಹಾಕಿತು.

ಎರಡನೇ ಅವಧಿಯ ಆಟದಲ್ಲಿ ಪುಣೇರಿ ಹರಿಯಾಣ ಸ್ಟೀಲರ್ಸ್ ತಂಡದ ರಣ ತಂತ್ರವನ್ನು ಅರಿತು ಆಡಿತು. ಅಲ್ಲದೆ ಜಿದ್ದಾಜಿದ್ದಿನ ಪ್ರದರ್ಶನ ನೀಡಿ ಪಂದ್ಯದ ರೋಚಕತೆ ಹೆಚ್ಚಿಸಿತ್ತು. ಈ ಅವಧಿಯಲ್ಲಿ ಉಭಯ ತಂಡಗಳ ದಾಳಿ ಕೋರರು ಅಮೋಘ ಪ್ರದರ್ಶನ ನೀಡಿ ತಂಡಕ್ಕೆ ಆಧಾರವಾದರು. ಈ ಅವಧಿಯಲ್ಲಿ ಹರಿಯಾಣ ಸ್ಟೀಲರ್ಸ್ ಒಮ್ಮೆ ಆಲೌಟ್ ಆಯಿತು. ಪಂದ್ಯದ ಕೊನೆಯ ಕ್ಷಣದಲ್ಲಿ ಹರಿಯಾಣ ಸ್ಟೀಲರ್ಸ್ ತಂಡದ ಶಿವಂ ಅಮೋಘ ದಾಳಿ ನಡೆಸಿ ತಂಡದ ಗೆಲುವನ್ನು ಖಚಿತ ಪಡಿಸಿದರು.
ಹರಿಯಾಣ ಸ್ಟೀಲರ್ಸ್ ತಂಡದ ಪರ ಸ್ಟಾರ್ ರೈಡರ್ ವಿನಯ್ 13 ಅಂಕವನ್ನು ಕಲೆ ಹಾಕಿ ಗೆಲುವಿನಲ್ಲಿ ಮಿಂಚಿದರು. ರಕ್ಷಣಾ ವಿಭಾಗದಲ್ಲಿ ನಾಯಕ ಜೈದೀಪ್ (4 ಅಂಕ) ಮತ್ತು ರಾಹುಲ್ ಸೇತ್ಪಾಲ್ (3 ಅಂಕ) ಸ್ಥಿರ ಪ್ರದರ್ಶನ ನೀಡಿದರು. ಪರಾಜಿತ ತಂಡದ ಪರ ಪಂಕಜ್ ಮೋಹಿತೆ 14 ಅಂಕ ಸಂಪಾದಿಸಿ ಸೋಲಿನಲ್ಲಿ ಮಿಂಚಿದರು. ಅಗ್ರ ಸ್ಥಾನದಲ್ಲಿರುವ ಪುಣೇರಿ ಟೂರ್ನಿಯಲ್ಲಿ ಮೂರನೇ ಸೋಲು ಕಂಡಿತು. ಆದರೂ ಸಹ ಅಗ್ರ ಸ್ಥಾನವನ್ನು ಖಚಿತ ಪಡಿಸಿಕೊಂಡಿತು.
ಎರಡನೇ ಪಂದ್ಯದಲ್ಲಿ ತೆಲಗು ಸಲ[ 43-29 ರಿಂದ ತಮಿಳು ತಲೈವಾಸ್ ತಂಡವನ್ನು ಮಣಿಸಿತು. ತೆಲುಗು ತಂಡದ ಪರ ವಿಜಯ್ ಮಲಿಕ್ 10 ಅಂಕ ಕಲೆ ಹಾಕಿ ಗೆಲುವಿನಲ್ಲಿ ಮಿಂಚಿದರು. ಮೊದಲಾವಧಿಯಲ್ಲಿ ತೆಲುಗು ತಂಡ ಅಮೋಘ ಆಟವನ್ನು ಪ್ರದರ್ಶಿಸಿತು. ಈ ಅವಧಿಯಲ್ಲಿ ತೆಲುಗು ದಾಳಿಯಲ್ಲಿ 13, ಟ್ಯಾಕಲ್‌ನಲ್ಲಿ 6 ಅಂಕ ಸೇರಿಸಿತು. ಅಲ್ಲದೆ ಒಮ್ಮೆ ತಮಿಳು ತಲೈವಾಸ್ ತಂಡವನ್ನು ಆಲೌಟ್ ಸಹ ಮಾಡಿತು. ಎರಡನೇ ಅವಧಿಯ ಆಟದಲ್ಲೂ ತೆಲುಗು ಭರ್ಜರಿ ಪ್ರದರ್ಶನ ನೀಡಿ ಅಂಕಗಳಿಕೆಯಲ್ಲಿ ಅಂತರವನ್ನು ಕಾಯ್ದುಕೊಂಡಿತು. ಈ ಅವಧಿಯಲ್ಲಿ ದಾಳಿ ಹಾಗೂ ರಕ್ಷಣಾ ಆಟದಲ್ಲಿ ಸಮಬಲದ ಪ್ರದರ್ಶನ ನೀಡಿದ ತೆಲುಗು ಅಬ್ಬರಿಸಿತು. ಈ ಅವಧಿಯಲ್ಲಿ ತಮಿಳು ಎರಡು ಬಾರಿ ತೆಲುಗು ಒಂದು ಬಾರಿ ಆಲೌಟ್ ಆಯಿತು. ವಿಜೇತ ತಂಡದ ಪರ ವಿಜಯ್ ಮಲಿಕ್ 10, ಭರತ್ 8 ಅಂಕ ಕಲೆ ಹಾಕಿದರು. ಪರಾಜಿತ ತಂಡದ ಪರ ಅರ್ಜುನ್ 7 ಅಂಕ ಸೇರಿಸಿದರು. ಈ ಗೆಲುವಿನ ಮೂಲಕ ತೆಲುಗು ಟೂರ್ನಿಯಲ್ಲಿ 4ನೇ ಗೆಲುವು ದಾಖಲಿಸಿ ಅಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಬಡ್ತಿ ಪಡೆಯಿತು.