ಭಾರತದಲ್ಲಿ ಅದಾಗಲೇ ಐಪಿಎಲ್ ಆರಂಭವಾಗಿತ್ತು. ಆಗಿನ್ನು ಈ ಲೀಗ್ ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಎಂಬ ಹಣೆ ಪಟ್ಟೆಯನ್ನು ಹೊಂದಿರಲಿಲ್ಲ. ಅದಾಗಲೇ ಈ ಕ್ರೀಡೆ ಹೆಚ್ಚು ಖ್ಯಾತಿಯನ್ನು ಪಡೆಯಬಹುದು ಎಂಬ ಉದ್ದೇಶದಿಂದ, ಹಲವು ಕ್ರೀಡೆಗಳು ಇದೇ ರೀತಿ ಲೀಗ್‌ನ್ನು ಆರಂಭಿಸಲು ಮುಂದಾದವು. ಈ ನಿಟ್ಟಿನಲ್ಲಿ ಕಬಡ್ಡಿ ಸಹ ಕಾರ್ಯ ಪ್ರವೃತ್ತವಾಯಿತು.
2014ರ ಆರಂಭದಲ್ಲಿ ಕಬಡ್ಡಿ ಲೀಗ್ ಆರಂಭವಾಗಲಿದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಅದರಂತೆ, ಲೀಗ್‌ಗೆ ಬಣ್ಣ ಹಚ್ಚುವ ಕಾರ್ಯ ಸಹ ಭರದಿಂದ ನಡೆಯಿತು. ಐಪಿಎಲ್‌ನಿಂದ ಪ್ರೇರಿಪಿತವಾದ ಲೀಗ್ ಹರಾಜು ನಡಿಸಿ ಆಟಗಾರರನ್ನು ಖರೀದಿಸಿತು. ತೆರೆಯ ಮರೆಯಲ್ಲಿದ್ದ ಕಬಡ್ಡಿ ಆಟಗಾರರಿಗೆ, ಈ ಲೀಗ್ ಮನ್ನಣೆ ನೀಡಿತು. ಕಬಡ್ಡಿ ಆಟಗಾರರನ್ನು ಸಹ ಗುರುತಿಸುವ ಹಾಗೆ ಆಯಿತು. ಸ್ಟಾರ್ ಗಿರಿ ಸಿಕ್ಕಿತು.

ನೋಡ ನೋಡುತ್ತಿದ್ದಂತೆ ಲೀಗ್ ಖ್ಯಾತಿಯನ್ನು ಪಡೆಯಿತು. ಪ್ರೊ ಕಬಡ್ಡಿ ಲೀಗ್ ಜನರ ನೆಚ್ಚಿನ ಕ್ರೀಡೆ ಆಯಿತು. ಈ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ ತಂಡಗಳಿಗೆ ಭಾರೀ ಹಣವನ್ನು ನೀಡಲಾಯಿತು. ಪಂದ್ಯ ಶ್ರೇಷ್ಠ, ಬೆಸ್ಟ್ ರೈಡರ್, ಬೆಸ್ಟ್ ಡಿಫೆಂಡರ್ ಹೀಗೆ ಹತ್ತು ಹಲವು ಪ್ರಶಸ್ತಿಗಳನ್ನು ನೀಡಿ ಆಟಗಾರರನ್ನು ಆಕರ್ಷಿಸಲಾಯಿತು. ಆಟಗಾರರ ಆರ್ಥಿಕ ಸ್ಥಿತಿ ಮೊದಲಿಗಿಂತಲೂ ಸುಧಾರಿಸಲು ಸಾಧ್ಯವಾಯಿತು.
ಶಾಲೆಯ ಅಂಗಳದಲ್ಲಿ, ಇಲ್ಲವೇ ರಾಜ್ಯ ಮಟ್ಟದ ಕ್ರೀಡಾ ಕೂಟದಲ್ಲಿ ಕಾಣಿಸಿಕೊಳ್ಳುತ್ತಿದ್ದ ಕಬಡ್ಡಿ ಲೀಗ್ ಆಗಿ ಬೆಳೆಯಿತು. ಇದರಿಂದ ಗ್ರಾಮೀಣ ಭಾಗದ ಕಬಡ್ಡಿ ಪ್ರತಿಭೆಗಳಿಗೆ ಹೆಚ್ಚಿನ ಆದ್ಯತೆ ಸಿಗಲು ಆರಂಭವಾಯಿತು. ದೇಶವನ್ನು ಪ್ರತಿನಿಧಿಸಬೇಕು ಎಂದು ಕನಸು ಕಾಣುತ್ತಿದ್ದ ಕಬಡ್ಡಿ ಆಟಗಾರರು, ಲೀಗ್‌ನಲ್ಲಿ ಆಡಿದರೆ ಸಾಕಪ್ಪ ಎನ್ನುವ ರೀತಿ ಬೆಳೆದು ನಿಂತಿತು.

ಆವೃತ್ತಿಯಿಂದ ಆವೃತ್ತಿಗೆ ಅಭಿಮಾನಿಗಳನ್ನು ಕಬಡ್ಡಿ ಲೀಗ್ ಸೆಳೆಯುತ್ತಲೆ ಸಾಗಿತು. ಆಟಗಾರರಿಗೆ ಗುಣ ಮಟ್ಟದ ಟ್ರೈನಿಂಗ್ ಹಾಗೂ ಮ್ಯಾಟ್ ಮೇಲೆ ಆಡುವ ವ್ಯವಸ್ಥೆಯನ್ನು ಕಲ್ಪಿಸಿ, ಲೀಗ್‌ಗೆ ಹೈಟೆಕ್ ಟಚ್ ನೀಡಲಾಯಿತು. ಈ ಲೀಗ್ ವೇಳೆ ಜನರನ್ನು ಹೆಚ್ಚಾಗಿ ಆಕರ್ಷಿಸಿದ್ದು, ಝಗಮಗ ಬೆಳಕು. ಕಬಡ್ಡಿ ಲೀಗ್‌ನ ಸೌಂಡ್ ಅಭಿಮಾನಿಗಳಿಗೆ ಹತ್ತಿರವಾಯಿತು.
ಪ್ರತಿ ಪ್ರಾಂಚೈಸಿ ತವರಿನಲ್ಲಿ ಆಡುವ ಪಂದ್ಯಗಳಿಗೆ ಭರ್ಜರಿ ರಿಸ್ಪಾನ್ಸ್ ಸಿಗಲು ಆರಂಭವಾಗ ತೊಡಗಿತು. ಇದರಿಂದ ಪುಳಕಿತವಾದ ಕಬಡ್ಡಿ ಲೀಗ್ ಮ್ಯಾನೇಜ್ಮೆಂಟ್ ತಂಡಗಳ ಸಂಖ್ಯೆಯನ್ನು ಏರಿಕೆ ಮಾಡಿತು. ಪ್ರತಿ ತಂಡಗಳು ತಮ್ಮ ತವರಿನಲ್ಲಿ ಹೆಚ್ಚಿನ ಪಂದ್ಯಗಳು ಆಡಲು ಅವಕಾಶವನ್ನು ನೀಡುವಂತೆ ವೇಳಾಪಟ್ಟಿ ರಚಿಸಲಾಯಿತು. ಆರಂಭದಲ್ಲಿ ಎಂಟಿದ್ದ ತಂಡಗಳು ಈಗ 12ಕ್ಕೆ ಬಂದು ನಿಂತಿದೆ.
ಕಬಡ್ಡಿ ಆಟಗಾರರಿಗೂ ಹೈ ಟೆಕ್ ವ್ಯವಸ್ಥೆಗಳನ್ನು ನೀಡಲು ಮ್ಯಾನೇಜ್ಮೆಂಟ್ ಮುಂದಾಯಿತು. ಒಳ್ಳೆಯ ಆಹಾರ, ವಸತಿ, ಊಟ ನೀಡಿ ಆಟಗಾರರ ಚಿತ್ತವನ್ನು ಕದ್ದಿತು. ಇದರ ಜೊತೆಗೆ ಆಟಗಾರರ ಜೇಬು ತುಂಬಿದ ಮೇಲೆ ಬೇರೆ ಕ್ರೀಡೆಗಳತ್ತ ಆಟಗಾರರು ವಾಲುವುದು ಕಡಿಮೆ ಆಯಿತು. ಇಲ್ಲಿಂದ ಬೆಳೆದ ಲೀಗ್ ಈಗ ಭಾರತದಲ್ಲಿ ಅತಿ ಹೆಚ್ಚು ಖ್ಯಾತಿ ಪಡೆದ ಕ್ರಿಕೆಟೆತರ ಕ್ರೀಡೆಗಳಲ್ಲಿ ಸ್ಥಾನ ಪಡೆಯುತ್ತದೆ.