PKL 2025: ಜೈಪುರಗೆ "ಸೂಪರ್" ಗೆಲುವು: ಕೊನೆಯಲ್ಲಿ ಮಿಂಚಿದ ಅಲಿ
ಜೈಪುರ: ಕೊನೆಯಲ್ಲಿ ಭರವಸೆಯ ಆಟಗಾರ ಅಲಿ ಚೌಬ್ತರಾಶ್ ಸೂಪರ್ ದಾಳಿಯ ಪರಿಣಾಮ ಆತಿಥೇಯ ಜೈಪುರ ಪಿಂಕ್ ಪ್ಯಾಂಥರ್ಸ್ 45-41 ಅಂಕಗಳಿಂದ ಬಂಗಾಳ ವಾರಿಯರ್ಸ್ ತಂಡವನ್ನು ಮಣಿಸಿ 12ನೇ ಆವೃತ್ತಿಯ ಪ್ರೋ ಕಬಡ್ಡಿ ಟೂರ್ನಿಯಲ್ಲಿ ನಾಲ್ಕನೇ ಗೆಲುವು ದಾಖಲಿಸಿತು. ಈ ಮೂಲಕ ಜೈಪುರ ಆಡಿದ 7 ಪಂದ್ಯಗಳಲ್ಲಿ 4 ಜಯ, 3 ಸೋಲು ಕಂಡಿದ್ದು, 8 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಬಡ್ತಿ ಪಡೆಯಿತು.
ಗುರುವಾರ ನಡೆದ ಪಂದ್ಯದಲ್ಲಿ ಆರಂಭದಿಂದಲೂ ಜೈಪುರ ಪಿಂಕ್ ಪ್ಯಾಂಥರ್ಸ್ ಮುನ್ನಡೆ ಸಾಧಿಸಿತು. ಈ ಅವಧಿಯ 11ನೇ ನಿಮಿಷದಲ್ಲಿ ಜೈಪುರ ತಂಡವು ಬಂಗಾಳವನ್ನು ಆಲ್-ಔಟ್ ಮಾಡಿ 15-9 ಅಂಕಗಳ ಮುನ್ನಡೆ ಗಳಿಸಿತು. ಈ ವೇಳೆ ಜೈಪುರ 24-18 ಅಂಕಗಳಿಂದ ಮುನ್ನಡೆ ಸಾಧಿಸಿತು. ಈ ವೇಳೆ ಜೈಪುರ ದಾಳಿಯಲ್ಲಿ 15, ಟ್ಯಾಕಲ್‌ನಲ್ಲಿ 7 ಅಂಕಗಳನ್ನು ಕಲೆ ಹಾಕಿತು.

ಎರಡನೇ ಅವಧಿಯ ಆಟದಲ್ಲಿ ಬಂಗಾಳ ಪುಟಿದೇಳುವ ಸೂಚನೆಯನ್ನು ನೀಡಿತು. ಆದರೆ ಆರಂಭದಲ್ಲಿ ಜೈಪುರ ಮತ್ತೊಮ್ಮೆ ಬಂಗಾಳ ತಂಡವನ್ನು ಆಲೌಟ್ ಮಾಡಿತು. ಈ ಮೂಲಕ ತನ್ನ ಮುನ್ನಡೆಯ ಅಂತರವನ್ನು ಹಿಗ್ಗಿಸಿಕೊಂಡಿತು. ಆದರೆ ಈ ಅವಧಿಯ 15ನೇ ನಿಮಿಷದಲ್ಲಿ ಬಂಗಾಳ ತಂಡ ಸಹ ಜೈಪುರ ತಂಡದ ಅಂಗಳವನ್ನು ಒಮ್ಮೆ ಖಾಲಿ ಮಾಡಿತು. ಪರಿಣಾಮ ಪಂದ್ಯ ಕುತೂಹಲ ಹೆಚ್ಚಿಸಿತು. ಕೊನೆಯ ಕ್ಷಣದ ವರೆಗೂ ಜೈಪುರ ಸ್ಥಿರ ದಾಳಿ ನಡೆಸಿ ಅಂಕ ಬೇಟೆಯಲ್ಲಿ ತಾನು ಸಾಧಿಸಿದ್ದ ಮುನ್ನಡೆಯನ್ನು ಕಾಯ್ದುಕೊಂಡಿತು. ಪರಿಣಾಮ ರೋಚಕ ಪಂದ್ಯವನ್ನು ಗೆದ್ದು ಮುನ್ನಡೆಯಿತು.
ದೇವಾಂಕ್ ದಾಖಲೆ
ಜೈಪುರ ತಂಡದ ಪರ ನಿತೀನ್ ಕುಮಾರ್ 13, ಅಲಿ ಚೌಬ್ತರಾಶ್ 12 ಅಂಕಗಳನ್ನು ಕಲೆ ಹಾಕಿ ಮಿಂಚಿದರು. ಪರಾಜಿತ ತಂಡದ ಪರ ದೇವಾಂಕ್ 16 ಅಂಕಗಳನ್ನು ಕಲೆ ಹಾಕಿ ಅಬ್ಬರಿಸಿದರು. ಅಲ್ಲದೆ ವೇಗವಾಗಿ 400 ರೇಡ್ ಅಂಕಗಳನ್ನು ಗಳಿಸಿದ ಆಟಗಾರ ಎಂಬ ದಾಖಲೆ ನಿರ್ಮಿಸಿದರು.

ಪುಣೇರಿಗೆ ಅಗ್ರ ಸ್ಥಾನ
ಗುರುವಾರ ನಡೆದ ಎರಡನೇ ಪಂದ್ಯದಲ್ಲಿ ಪುಣೇರಿ ಪಲ್ಟನ್ 40-22 ರಿಂದ ಮಾಜಿ ಚಾಂಪಿಯನ್ ಯು ಮುಂಬಾ ತಂಡವನ್ನು ಮಣಿಸಿ ಅಬ್ಬರಿಸಿತು. ಈ ಗೆಲುವಿನ ಮೂಲಕ ಪುಣೇರಿ ಆಡಿದ 8 ಪಂದ್ಯಗಳಲ್ಲಿ 6 ಜಯ, 2 ಸೋಲು ಕಂಡಿದ್ದು, 12 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನ ತಲುಪಿತು. ಮುಂಬಾ ಟೂರ್ನಿಯಲ್ಲಿ ಮೂರನೇ ಸೋಲು ಕಂಡಿತು. ಪಂದ್ಯದ ಆರಂಭದಿಂದಲೂ ಪುಣೇರಿ ಅಂಕಗಳಿಕೆಯಲ್ಲಿ ಮುನ್ನಡೆ ಸಾಧಿಸಿತು. ಮೊದಲಾವಧಿಯಲ್ಲಿ ಪುಣೇರಿ ಟ್ಯಾಕಲ್‌ನಲ್ಲಿ ಹೆಚ್ಚಿನ ಅಂಕವನ್ನು ಕಲೆ ಹಾಕಿತು. ಎರಡನೇ ಅವಧಿಯ ಆಟದಲ್ಲೂ ಪುಣೇರಿ ತಂಡದ ರಕ್ಷಣಾ ಆಟಗಾರರು ಅಮೋಘ ಪ್ರದರ್ಶನ ನೀಡಿದರು. ಸ್ಟುವರ್ಟ್ ದಾಳಿಯಲ್ಲಿ 8 ಅಂಕ ಕಲೆ ಹಾಕಿದರು. ರಕ್ಷಣಾ ಆಟಗಾರ ಗುರ್ದೀಪ್ 5, ಗೌರವ್ 4 ಅಂಕಗಳನ್ನು ಕಲೆ ಹಾಕಿ ಜಯದಲ್ಲಿ ಮಿಂಚಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications