ಭರವಸೆಯ ಆಟಗಾರ ಆಶು ಮಲಿಕ್ ಅವರ ಭರ್ಜರಿ ದಾಳಿಯ ನೆರವಿನಿಂದ 12ನೇ ಆವೃತ್ತಿಯ ಪ್ರೊ ಕಬಡ್ಡಿಯ 54ನೇ ಪಂದ್ಯದಲ್ಲಿ ದಬಾಂಗ್ ದೆಹಲಿ 38-37 ಅಂಕಗಳಿಂದ ಹರಿಯಾಣ ಸ್ಟೀಲರ್ಸ್ ತಂಡವನ್ನು ಮಣಿಸಿ ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಭದ್ರ ಪಡಿಸಿಕೊಂಡಿತು. ಈ ಪಂದ್ಯದಲ್ಲಿ ಸೋತರೂ ಹರಿಯಾಣ ಮೂರನೇ ಸ್ಥಾನವನ್ನು ಪಡೆದಿದೆ.
ಈ ಪಂದ್ಯದಲ್ಲಿ ಮೊದಲಾರ್ಧದಲ್ಲಿ ದಬಾಂಗ್ ದೆಹಲಿ ತಂಡ ಅಮೋಘ ಆಟದ ಪ್ರದರ್ಶನ ನೀಡಿತು. ಈ ವೇಳೆ ದಾಳಿ ಹಾಗೂ ಟ್ಯಾಕಲ್‌ನಲ್ಲಿ ಸಮಬಲದ ಪ್ರದರ್ಶನ ನೀಡಿತು. ಈ ವೇಳೆ ದಬಾಂಗ್ ದಾಳಿಯಲ್ಲಿ 9 ಹಾಗೂ ಟ್ಯಾಕಲ್‌ನಲ್ಲಿ 6 ಅಂಕ ಸೇರಿಸಿತು. ಅಲ್ಲದೆ ಈ ಅವಧಿಯ 8ನೇ ನಿಮಿಷದಲ್ಲಿ ಹರಿಯಾಣ ಸ್ಟೀಲರ್ಸ್ ತಂಡವನ್ನು ಆಲೌಟ್ ಮಾಡಿ ಬೋನಸ್ ಅಂಕವನ್ನು ಕಲೆ ಹಾಕಿತು. ಮೊದಲ 20 ನಿಮಿಷದಲ್ಲಿ ಹರಿಯಾಣ ತಂಡದ ದಾಳಿ ಉತ್ತಮವಾಗಿತ್ತು. ಆದರೆ ಅಂಕಗಳಿಕೆಯಲ್ಲಿ ಮುನ್ನಡೆ ಸಾಧಿಸುವಷ್ಟ ಸಾಕಾಗಲಿಲ್ಲ. ಈ ಅವಧಿಯಲ್ಲಿ ದಬಾಂಗ್ ದೆಹಲಿ 19-13 ಅಂಕಗಳಿಂದ ಮುನ್ನಡೆ ಸಾದಿಸಿತು.

ಎರಡನೇ ಅವಧಿಯ ಆಟದಲ್ಲಿ ಹರಿಯಾಣ ಸ್ಟೀಲರ್ಸ್ ಕೆಚ್ಚೆದೆಯ ಆಟವನ್ನು ಆಡಿ ಅಂಕಗಳಿಗೆ ಚುರುಕು ಮುಟ್ಟಿಸಿತು. ಈ ಅವಧಿಯಲ್ಲಿ ದಬಾಂಗ್ ತಂಡದ ತಂತ್ರಗಾರಿಕೆಯನ್ನು ಮೆಟ್ಟಿನಿಂತು ಅಂಕಗಳನ್ನು ಕಲೆ ಹಾಕಿತು. ಅಲ್ಲದೆ ಇದೇ ಅವಧಿಯಲ್ಲಿ ದಬಾಂಗ್ ತಂಡವನ್ನು ಒಮ್ಮೆ ಆಲೌಟ್ ಮಾಡಿ ಬೋನಸ್ ಅಂಕ ಕಲೆ ಹಾಕಿತು. ಈ ಅವಧಿಯಲ್ಲಿ ಹರಿಯಾಣ 24-19 ಅಂಕಗಳ ಮುನ್ನಡೆ ಸಾಧಿಸಿತು. ಈ ಅವಧಿಯಲ್ಲಿ ಸ್ಟೀಲರ್ಸ್ ದಾಳಿಯಲ್ಲಿ 15 ಹಾಗೂ ಟ್ಯಾಕಲ್‌ನಲ್ಲಿ 7 ಅಂಕಗಳನ್ನು ಸೇರಿಸಿತು. ದಬಾಂಗ್ ಸಹ ಸ್ಥಿರ ಪ್ರದರ್ಶನ ನೀಡಿತು. ಅಲ್ಲದೆ ಅಂಕಗಳಲ್ಲಿ ಅಂತರವನ್ನು ಕಾಯ್ದುಕೊಂಡಿತು.
ದಬಾಂಗ್ ತಂಡದ ಪರ ಆಶು ಮಲಿಕ್ 23 ಬಾರಿ ಎದುರಾಳಿ ಕೋರ್ಟ್‌ಗೆ ಎಂಟ್ರಿ ನೀಡಿ 11 ಟಚ್ ಪಾಯಿಂಟ್ ಹಾಗೂ 4 ಬೋನಸ್ ಅಂಕವನ್ನು ಸೇರಿಸಿ ಜಯದಲ್ಲಿ ಮಿಂಚಿದರು. ಪರಾಜಿತ ತಂಡದ ಪರ ವಿನಯ್ 18 ಅಂಕ ಕಲೆ ಹಾಕಿ ಸೋಲಿನಲ್ಲಿ ಮಿಂಚಿದರು.

ಇದಕ್ಕೂ ಮೊದಲು ನಡೆದ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ 33-27 ರಿಂದ ಯುಪಿ ಯೋಧಾಸ್ ತಂಡವನ್ನು ಮಣಿಸಿತು. ಈ ಪಂದ್ಯದ ಮೊದಲಾವಧಿಯಲ್ಲಿ ಜೈಂಟ್ಸ್ 21-16 ಅಂಕಗಳಿಂದ ಮುನ್ನಡೆ ಸಾಧಿಸಿತು. ಈ ಅವಧಿಯಲ್ಲಿ ಯುಪಿ ಒಂದು ಬಾರಿ ಆಲೌಟ್ ಆಯಿತು. ಎರಡನೇ ಅವಧಿಯಲ್ಲಿ ಪುಟಿದೇಳುವ ಸೂಚನೆಯನ್ನು ಹೊಂದಿದ್ದ ಯೋಧಾಸ್ ತಂಡದ ಪ್ಲ್ಯಾನ್ ಕೈ ಕೊಟ್ಟಿತು. ಈ ಅವಧಿಯಲ್ಲಿ ಉಭಯ ತಂಡಗಳು ಭರ್ಜರಿ ಪ್ರದರ್ಶನ ನೀಡಿದವು. ಈ ಅವಧಿಯಲ್ಲಿ ಗುಜರಾತ್ ತಂಡದ ಕೈ ಮೇಲಾಗಿತ್ತು. ಟೈಟಾನ್ಸ್ ಈ ಟೂರ್ನಿಯಲ್ಲಿ ಎರಡನೇ ಗೆಲುವು ದಾಖಲಿಸಿದೆ. ವಿಜೇತ ತಂಡದ ಮೊಹಮ್ಮದ್ರೆಜಾ ಹಾಗೂ ಅಂಕಿತ ತಲಾ 8 ಅಂಕವನ್ನು ಕಲೆ ಹಾಕಿದರು.