
ಬಹುನಿರೀಕ್ಷಿತ ಪ್ರೊ ಕಬಡ್ಡಿ ಲೀಗ್ ಮತ್ತೆ ಬಂದಿದ್ದು, ನಿನ್ನೆ ( ಡಿಸೆಂಬರ್ 22 ) ಬೆಂಗಳೂರು ಬುಲ್ಸ್ ಮತ್ತು ಯು ಮುಂಬಾ ತಂಡಗಳ ನಡುವೆ ನಡೆದ ಹಣಾಹಣಿಯ ಮೂಲಕ ಆರಂಭವನ್ನು ಪಡೆದುಕೊಂಡಿದೆ. ಹೌದು, 8ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಟೂರ್ನಿಯ ಚೊಚ್ಚಲ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಮತ್ತು ಯು ಮುಂಬಾ ತಂಡಗಳ ನಡುವೆ ನಡೆದ ಸೆಣಸಾಟದಲ್ಲಿ ಯು ಮುಂಬಾ ಜಯ ಸಾಧಿಸುವುದರ ಮೂಲಕ ಶುಭಾರಂಭ ಮಾಡಿದೆ. ಹಾಗೂ ಮೊದಲನೇ ದಿನ ನಡೆದ ಮತ್ತೆರಡು ಪಂದ್ಯಗಳ ಪೈಕಿ ತೆಲುಗು ಟೈಟಾನ್ಸ್ ಮತ್ತು ತಮಿಳು ತಲೈವಾಸ್ ನಡುವಿನ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡರೆ, ಬೆಂಗಾಲ್ ವಾರಿಯರ್ಸ್ ಮತ್ತು ಯುಪಿ ಯೋಧಾ ನಡುವಿನ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ ಜಯ ಸಾಧಿಸಿದೆ.
ಹೀಗೆ ಮೊದಲನೇ ದಿನ ಯು ಮುಂಬಾ ಮತ್ತು ಬೆಂಗಾಲ್ ವಾರಿಯರ್ಸ್ ಗೆಲುವಿನ ಖಾತೆ ತೆರೆದಿದ್ದರೆ, ದ್ವಿತೀಯ ದಿನದಂದು ನಡೆಯಲಿರುವ 3 ಪಂದ್ಯಗಳಲ್ಲಿ ಯಾವ ತಂಡಗಳು ಗೆದ್ದು ಶುಭಾರಂಭವನ್ನು ಮಾಡಲಿವೆ ಎಂಬ ಕುತೂಹಲ ಹುಟ್ಟುಕೊಂಡಿದೆ. ದ್ವಿತೀಯ ದಿನವಾದ ಇಂದು ( ಡಿಸೆಂಬರ್ 23 ) ಗುಜರಾತ್ ಜಿಯಂಟ್ಸ್ vs ಜೈಪುರ ಪಿಂಕ್ ಪ್ಯಾಂಥರ್ಸ್, ದಬಾಂಗ್ ಡೆಲ್ಲಿ vs ಪುಣೇರಿ ಪಲ್ಟಾನ್ ಮತ್ತು ಹರಿಯಾಣ ಸ್ಟೀಲರ್ಸ್ vs ಪಾಟ್ನಾ ಪೈರೇಟ್ಸ್ ಪಂದ್ಯಗಳು ನಡೆಯಲಿವೆ. ಹೀಗೆ ಇಂದು ನಡೆಯಲಿರುವ ಈ 3 ಪಂದ್ಯಗಳ ಕುರಿತಾದ ಮಾಹಿತಿ, ಪಂದ್ಯಗಳಲ್ಲಿ ಕಣಕ್ಕಿಳಿಯಲಿರುವ ಸಂಭಾವ್ಯ ಆಟಗಾರರ ಪಟ್ಟಿ ಮತ್ತು ಮುಖಾಮುಖಿ ಹಣಾಹಣಿಗಳಲ್ಲಿ ಯಾವ ತಂಡ ಹೆಚ್ಚು ಪಂದ್ಯಗಳನ್ನು ಗೆದ್ದಿದೆ ಎಂಬುದರ ಮಾಹಿತಿ ಮುಂದೆ ಇದೆ ಓದಿ..
ಪಂದ್ಯ 1: ಗುಜರಾತ್ ಜಿಯಂಟ್ಸ್ vs ಜೈಪುರ ಪಿಂಕ್ ಪ್ಯಾಂಥರ್ಸ್
ಪ್ರೋ ಕಬಡ್ಡಿ ಲೀಗ್ ಎಂಟನೇ ಆವೃತ್ತಿಯ ದ್ವಿತೀಯ ದಿನದಂದು ಚೊಚ್ಚಲ ಪಂದ್ಯ ಗುಜರಾತ್ ಜಯಂಟ್ಸ್ ಮತ್ತು ಜೈಪುರ ಪಿಂಕ್ ಪ್ಯಾಂಥರ್ಸ್ ತಂಡಗಳ ನಡುವೆ ನಡೆಯಲಿದೆ. ಇದು ಟೂರ್ನಿಯ 4ನೇ ಪಂದ್ಯವಾಗಿದ್ದು ಸಂಜೆ 7.30ಕ್ಕೆ ಆರಂಭಗೊಳ್ಳಲಿದೆ. ಇನ್ನು ಇತ್ತಂಡಗಳ ನಡುವಿನ ಮುಖಾಮುಖಿಯ ಫಲಿತಾಂಶಗಳನ್ನು ಗಮನಿಸುವುದಾದರೆ ಗುಜರಾತ್ ತಂಡ ಪ್ರೊ ಕಬಡ್ಡಿ ಲೀಗ್‌ನ್ನು ತಡವಾಗಿ ಪ್ರವೇಶಿಸಿದ ಕಾರಣ ಇತ್ತಂಡಗಳ ನಡುವೆ ಕೇವಲ 6 ಈ ಪಂದ್ಯಗಳು ಮಾತ್ರ ಇದುವರೆಗೂ ನಡೆದಿವೆ. ಈ 6 ಪಂದ್ಯಗಳ ಪೈಕಿ ಗುಜರಾತ್ ಜಿಯಂಟ್ಸ್ 3 ಪಂದ್ಯಗಳಲ್ಲಿ ಗೆದ್ದು ಬೀಗಿದ್ದರೆ, ಜೈಪುರ ಪಿಂಕ್ ಪ್ಯಾಂಥರ್ಸ್ 2 ಪಂದ್ಯಗಳಲ್ಲಿ ಜಯ ಗಳಿಸಿದೆ ಮತ್ತು ಇತ್ತಂಡಗಳ ನಡುವಿನ ಮತ್ತೊಂದು ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದೆ.
ಗುಜರಾತ್ ಜಿಯಂಟ್ಸ್ ಸಂಭಾವ್ಯ ತಂಡ: ಮಹೇಂದ್ರ ಗಣೇಶ್ ರಜಪೂತ್ (ರೈಡರ್) ಅಜಯ್ ಕುಮಾರ್ (ರೈಡರ್) ಕೆ ರಥನ್ (ರೈಡರ್) ಪರ್ವೇಶ್ ಭೈನ್‌ವಾಲ್ (ಎಡ ಕವರ್) ಸುನೀಲ್ ಕುಮಾರ್ (ಬಲ ಕವರ್) ಗಿರೀಶ್ ಮಾರುತಿ ಎರ್ನಾಕ್ (ಎಡ ಮೂಲೆ) ರವೀಂದರ್ ಪಹಲ್ (ಬಲ ಮೂಲೆ)
ಜೈಪುರ ಪಿಂಕ್ ಪ್ಯಾಂಥರ್ಸ್ ಸಂಭಾವ್ಯ ತಂಡ: ಅರ್ಜುನ್ ದೇಶ್ವಾಲ್ (ರೈಡರ್) ನವೀನ್ ಬಜಾದ್ (ರೈಡರ್) ದೀಪಕ್ ಹೂಡಾ (ಆಲ್ ರೌಂಡರ್) ನಿತಿನ್ ರಾವಲ್ (ಆಲ್ ರೌಂಡರ್) ಧರ್ಮರಾಜ್ ಚೇರಲಾತನ್ (ಎಡ ಕವರ್) ಸಂದೀಪ್ ಧುಲ್ (ಎಡ ಮೂಲೆ) ಅಮಿತ್ ಹೂಡಾ (ಬಲ ಮೂಲೆ)
ಪಂದ್ಯ 2: ದಬಾಂಗ್ ಡೆಲ್ಲಿ vs ಪುಣೇರಿ ಪಲ್ಟಾನ್
ಪ್ರೋ ಕಬಡ್ಡಿ ಲೀಗ್ ಎಂಟನೇ ಆವೃತ್ತಿಯ ದ್ವಿತೀಯ ದಿನದ ಎರಡನೇ ಪಂದ್ಯ ದಬಾಂಗ್ ಡೆಲ್ಲಿ vs ಪುಣೇರಿ ಪಲ್ಟಾನ್ ತಂಡಗಳ ನಡುವೆ ನಡೆಯಲಿದೆ. ಇದು ಟೂರ್ನಿಯ 5ನೇ ಪಂದ್ಯವಾಗಿದ್ದು ಸಂಜೆ 8.30ಕ್ಕೆ ಆರಂಭಗೊಳ್ಳಲಿದೆ. ಇನ್ನು ದಬಾಂಗ್ ಡೆಲ್ಲಿ ಮತ್ತು ಪುಣೇರಿ ಪಲ್ಟಾನ್ ತಂಡಗಳು ಅತ್ಯುತ್ತಮ ಆಟಗಾರರನ್ನು ಹೊಂದಿವೆ. ಹೀಗೆ ಬಲಿಷ್ಠ ಆಟಗಾರರ ತಂಡಗಳನ್ನು ಹೊಂದಿದ್ದರೂ ಸಹ ಈ ಎರಡೂ ತಂಡಗಳು ಟ್ರೋಫಿ ಎತ್ತಿಹಿಡಿಯುವಲ್ಲಿ ವಿಫಲವಾಗಿವೆ. ಇತ್ತಂಡಗಳು ಇದುವರೆಗೂ ಒಟ್ಟು 14 ಬಾರಿ ಮುಖಾಮುಖಿಯಾಗಿದ್ದು ಪುಣೇರಿ ಪಲ್ಟಾನ್ 7 ಪಂದ್ಯಗಳಲ್ಲಿ ಜಯ ಸಾಧಿಸಿದ್ದರೆ, ದಬಾಂಗ್ ಡೆಲ್ಲಿ 6 ಪಂದ್ಯಗಳಲ್ಲಿ ಗೆದ್ದಿದೆ ಮತ್ತು ಇನ್ನೊಂದು ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದೆ.
ದಬಾಂಗ್ ಡೆಲ್ಲಿ ಸಂಭಾವ್ಯ ತಂಡ: ನವೀನ್ ಕುಮಾರ್ ಗೋಯತ್ (ರೈಡರ್) ಅಜಯ್ ಠಾಕೂರ್ (ರೈಡರ್) ವಿಜಯ್ ಮಲಿಕ್ (ರೈಡರ್) ಮಂಜೀತ್ ಚಿಲ್ಲರ್ (ಎಡ ಕವರ್) ಜೀವ ಕುಮಾರ್ (ಬಲ ಕವರ್) ಜೋಗಿಂದರ್ ನರ್ವಾಲ್ (ಎಡ ಮೂಲೆ) ಸಂದೀಪ್ ನರ್ವಾಲ್ (ಬಲ ಮೂಲೆ)
ಪುಣೇರಿ ಪಲ್ಟಾನ್ ಸಂಭಾವ್ಯ ತಂಡ: ನಿತಿನ್ ತೋಮರ್ (ರೈಡರ್) ರಾಹುಲ್ ಚೌಧರಿ (ರೈಡರ್) ಪಂಕಜ್ ಮೋಹಿತೆ (ರೈಡರ್) ಸಂಕೇತ್ ಸಾವಂತ್ (ಎಡ ಮುಖಪುಟ) ಬಾಳಾಸಾಹೇಬ್ ಜಾಧವ್ (ಬಲ ಮುಖಪುಟ) ವಿಶಾಲ್ ಭಾರದ್ವಾಜ್ (ಎಡ ಮೂಲೆ) ಬಲದೇವ್ ಸಿಂಗ್ (ಬಲ ಮೂಲೆ)
ಪಂದ್ಯ 3: ಹರಿಯಾಣ ಸ್ಟೀಲರ್ಸ್ vs ಪಾಟ್ನಾ ಪೈರೇಟ್ಸ್
ಪ್ರೋ ಕಬಡ್ಡಿ ಲೀಗ್ ಎಂಟನೇ ಆವೃತ್ತಿಯ ದ್ವಿತೀಯ ದಿನದ ಮೂರನೇ ಪಂದ್ಯ ಹರಿಯಾಣ ಸ್ಟೀಲರ್ಸ್ vs ಪಾಟ್ನಾ ಪೈರೇಟ್ಸ್ ತಂಡಗಳ ನಡುವೆ ನಡೆಯಲಿದ್ದು ಈ ಪಂದ್ಯ ರಾತ್ರಿ 9.30ಕ್ಕೆ ಆರಂಭಗೊಳ್ಳಲಿದೆ. ಹರಿಯಾಣ ಸ್ಟೀಲರ್ಸ್ ಮತ್ತು ಪಾಟ್ನಾ ಪೈರೇಟ್ಸ್ ಪ್ರೋ ಕಬಡ್ಡಿ ಲೀಗ್ ಇತಿಹಾಸದಲ್ಲಿ ಇದುವರೆಗೂ ಒಟ್ಟು 5 ಬಾರಿ ಮುಖಾಮುಖಿಯಾಗಿದ್ದು, ಈ 5 ಪಂದ್ಯಗಳ ಪೈಕಿ ಹರಿಯಾಣ ಸ್ಟೀಲರ್ಸ್ 3 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೆ, ಪಾಟ್ನಾ ಪೈರೇಟ್ಸ್ ಕೇವಲ 1 ಪಂದ್ಯದಲ್ಲಿ ಮಾತ್ರ ಗೆದ್ದಿದೆ ಮತ್ತು ಉಳಿದೊಂದು ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದೆ.
ಹರಿಯಾಣ ಸ್ಟೀಲರ್ಸ್ ಸಂಭಾವ್ಯ ತಂಡ: ವಿಕಾಸ್ ಕಂಡೋಲಾ (ನಾಯಕ, ರೈಡರ್) ರೋಹಿತ್ ಗುಲಿಯಾ (ರೈಡರ್) ಮೀಟು ಶರ್ಮಾ (ರೈಡರ್) ರಾಜೇಶ್ ನರ್ವಾಲ್ (ಎಡ ಕವರ್) ರವಿಕುಮಾರ್ (ರೈಟ್ ಕವರ್) ಸುರೇಂದರ್ ನಾಡಾ (ಎಡ ಮೂಲೆ) ಶ್ರೀಕಾಂತ್ ತೆವ್ಥಿಯಾ (ಬಲ ಮೂಲೆ)
ಪಾಟ್ನಾ ಪೈರೇಟ್ಸ್ ಸಂಭಾವ್ಯ ತಂಡ: ಪ್ರಶಾಂತ್ ಕುಮಾರ್ ರೈ (ನಾಯಕ) (ರೈಡರ್) ಸಚಿನ್ ತನ್ವರ್ (ರೈಡರ್) ಮೋನು ಗೋಯತ್ (ರೈಡರ್) ಸಂದೀಪ್ (ಎಡ ಕವರ್) ನೀರಜ್ (ಬಲ ಮುಖಪುಟ) ಮೊಹಮ್ಮದ್ರೇಜಾ ಶಾದ್ಲೂಯಿ (ಎಡ ಮೂಲೆ) ಶುಭಂ ಶಿಂಧೆ (ಬಲ ಮೂಲೆ)
ಎಲ್ಲಾ ಪಂದ್ಯಗಳ ನೇರಪ್ರಸಾರದ ಮಾಹಿತಿ: ಈ ಬಾರಿಯ ವಿವೋ ಪ್ರೊ ಕಬಡ್ಡಿ ಲೀಗ್‌ನ ಎಲ್ಲ ಪಂದ್ಯಗಳು ಸಹ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಚಾನೆಲ್‌ಗಳಲ್ಲಿ ಪ್ರಸಾರವಾಗಲಿದ್ದು, ಡಿಸ್ನೆ + ಹಾಟ್‌ಸ್ಟಾರ್ ಅಪ್ಲಿಕೇಶನ್‌ನಲ್ಲಿಯೂ ಕೂಡ ಪಂದ್ಯಗಳನ್ನು ವೀಕ್ಷಿಸಬಹುದಾಗಿದೆ.