PKL 2022: ಯು ಮುಂಬಾ ವಿರುದ್ಧ ಸೋತ ಗೂಳಿಗಳಿಗೆ ಪ್ಲೇ ಆಫ್‌ನಲ್ಲಿ ದಬಾಂಗ್ ಡೆಲ್ಲಿ ಸವಾಲು

ಪ್ರೊ ಕಬಡ್ಡಿ ಲೀಗ್ 2022ರ ಲೀಗ್ ಹಂತದ ಪಂದ್ಯಗಳು ಮುಕ್ತಾಯವಾಗಿದೆ. ಭಾನುವಾರ ನಡೆದ ಲೀಗ್ ಪಂದ್ಯಗಳಲ್ಲಿ ಬೆಂಗಳೂರು ಬುಲ್ಸ್ ಯು ಮುಂಬಾ ವಿರುದ್ಧ ಸೋಲನುಭವಿಸಿತು. ತಮಿಳ್ ತಲೈವಾಸ್ ಹರಿಯಾಣ ಸ್ಟೀಲರ್ಸ್ ವಿರುದ್ಧ ಹೀನಾಯವಾಗಿ ಸೋಲೊಪ್ಪಿಕೊಂಡರೆ, ಪಟ್ನಾ ಪೈರೇಟ್ಸ್ ಬೆಂಗಾಲ್ ವಾರಿಯರ್ಸ್ ವಿರುದ್ಧ ಜಯ ಸಾಧಿಸಿತು.
ಪಾಯಿಂಟ್ ಪಟ್ಟಿಯ ಅಗ್ರ 6 ತಂಡಗಳು ಮುಂದಿನ ಸುತ್ತಿಗೆ ಪ್ರವೇಶ ಪಡೆದಿದ್ದು, ಉಳಿದ ಆರು ತಂಡಗಳು ಟೂರ್ನಿಯಿಂದ ಹೊರಬಿದ್ದಿವೆ. ಪುಣೇರಿ ಪಲ್ಟನ್ ಮತ್ತು ಜೈಪುರ ಪಿಂಕ್ ಪ್ಯಾಂಥರ್ಸ್ ಕ್ರಮವಾಗಿ 82 ಮತ್ತು 80 ಅಂಕಗಳೊಂದಿಗೆ ಮೊದಲ ಎರಡು ಸ್ಥಾನಗಳನ್ನು ಪಡೆದುಕೊಂಡಿವೆ. ಅದರೊಂದಿಗೆ ನೇರವಾಗಿ ಸೆಮಿಫೈನಲ್‌ನಲ್ಲಿ ಸ್ಥಾನ ಪಡೆದಿದ್ದು, ಎಲಿಮಿನೇಟರ್ ಪಂದ್ಯಗಳಲ್ಲಿ ಗೆಲ್ಲುವ ತಂಡದ ವಿರುದ್ಧ ಸ್ಪರ್ಧಿಸಲಿವೆ.
ಮೂರನೇ ಸ್ಥಾನ ಪಡೆದಿರುವ ಬೆಂಗಳೂರು ಬುಲ್ಸ್ 6ನೇ ಸ್ಥಾನ ಪಡೆದಿರುವ ದಬಾಂಗ್ ಡೆಲ್ಲಿ ವಿರುದ್ಧ ಮೊದಲನೇ ಎಲಿಮಿನೇಟರ್ ಪಂದ್ಯದಲ್ಲಿ ಸ್ಪರ್ಧಿಸಲಿದೆ. ಎರಡನೇ ಎಲಿಮಿನೇಟರ್ ಪಂದ್ಯದಲ್ಲಿ ತಮಿಳ್ ತಲೈವಾಸ್ ಮತ್ತು ಯುಪಿ ಯೋಧಾಸ್ ಮುಖಾಮುಖಿಯಾಗಲಿವೆ.
ಡಿಸೆಂಬರ್ 13 ರಂದು ಮುಂಬೈನಲ್ಲಿ ಎಲಿಮಿನೇಟರ್ 1 ಮತ್ತು 2 ನೇ ಪಂದ್ಯಗಳು ನಡೆಯಲಿವೆ. ಡಿಸೆಂಬರ್ 15 ರಂದು ಸೆಮಿಫೈನಲ್ ಪಂದ್ಯಗಳು ನಡೆಯಲಿದ್ದು, ಡಿಸೆಂಬರ್ 17 ರಂದು ಫೈನಲ್ ಪಂದ್ಯ ನಡೆಯಲಿದೆ.

ಯು ಮುಂಬಾ ವಿರುದ್ಧ ಸೋತ ಬೆಂಗಳೂರು ಬುಲ್ಸ್
ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಯು ಮುಂಬಾ ವಿರುದ್ಧ 30-36 ಪಾಯಿಂಟ್‌ಗಳಿಂದ ಸೋಲನುಭವಿಸಿತು. ಈಗಾಗಲೇ ತನ್ನ ಪ್ಲೇಆಫ್ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದ ಬೆಂಗಳೂರು ಬುಲ್ಸ್ ತನ್ನ ಪ್ರಮುಖ ಆಟಗಾರರಿಗೆ ಈ ಪಂದ್ಯದಲ್ಲಿ ವಿಶ್ರಾಂತಿ ನೀಡಿತ್ತು.
ಭರತ್ ಮತ್ತು ಮಹೇಂದರ್ ಸಿಂಗ್ ಅನುಪಸ್ಥಿತಿಯಲ್ಲಿ ಕಣಕ್ಕಿಳಿದ ಬೆಂಗಳೂರು ಬುಲ್ಸ್ ಯು ಮುಂಬಾ ವಿರುದ್ಧ ಉತ್ತಮ ಆಟ ಪ್ರದರ್ಶಿಸಿತು. ಮೊದಲಾರ್ಧದಲ್ಲಿ ಎರಡೂ ತಂಡಗಳು ಸಮಬಲದ ಹೋರಾಟ ನಡೆಸಿದವು. ಮೊದಲಾರ್ಧದ ಅಂತ್ಯಕ್ಕೆ 12-12 ಅಂಕಗಳಲ್ಲಿ ಸಮಬಲ ಸಾಧಿಸಿದ್ದವು.
ಆದರೆ, ದ್ವಿತೀಯಾರ್ಧದಲ್ಲಿ ಯು ಮುಂಬಾ ಬೆಂಗಳೂರು ಬುಲ್ಸ್ ತಂಡವನ್ನು ಆಲೌಟ್ ಮಾಡುವ ಮೂಲಕ ಮುನ್ನಡೆ ಸಾಧಿಸಿತು. ಮುನ್ನಡೆಯನ್ನು ಕೊನೆಯವರೆಗೂ ಕಾಯ್ದುಕೊಂಡ ಯು ಮುಂಬಾ ಅಂತಿಮವಾಗಿ 36-30 ಅಂಕಗಳೊಂದಿಗೆ ಜಯ ಸಾಧಿಸುವ ಮೂಲಕ, ಪ್ರೊ ಕಬಡ್ಡಿ ಲೀಗ್ 9ನೇ ಸೀಸನ್ ಅಭಿಯಾನವನ್ನು ಮುಗಿಸಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications