
ಅಕ್ಟೋಬರ್ 19ರಂದು ಪ್ರೊ ಕಬಡ್ಡಿ ಲೀಗ್ ಸೀಸನ್ 9 (ಪಿಕೆಎಲ್ 9) ರಲ್ಲಿ ತಮಿಳ್ ತಲೈವಾಸ್ ಬೆಂಗಳೂರು ಬುಲ್ಸ್ ಜೊತೆ ಸೆಣಸಲಿದೆ. ಈ ಪ್ರತಿಷ್ಠಿತ ಪಂದ್ಯವನ್ನು ಗೆಲ್ಲಲು ಉಭಯ ತಂಡಗಳು ರೋಚಕ ಕಾದಾಟ ನಡೆಸಲಿವೆ. ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದೆ.
ಬೆಂಗಳೂರು ಬುಲ್ಸ್ ತನ್ನ ಹಿಂದಿನ ಪಂದ್ಯದಲ್ಲಿ ಯುಪಿ ಯೋಧಾಸ್ ವಿರುದ್ಧ 44-37 ಪಾಯಿಂಟ್‌ಗಳಿಂದ ಸೋಲನ್ನಪ್ಪಿತ್ತು. ಕಳೆದ ಪಂದ್ಯದಲ್ಲಿ ಸೋತಿರುವ ಬೆಂಗಳೂರು ಮತ್ತೆ ಗೆಲುವಿನ ಹಳಿಗೆ ಮರಳಲು ಯೋಜಿಸುತ್ತಿದೆ.
ಅಕ್ಟೋಬರ್ 17 ರಂದು ಪಟ್ನಾ ಪೈರೇಟ್ಸ್ ವಿರುದ್ಧ 33-32 ಪಾಯಿಂಟ್‌ಗಳಲ್ಲಿ ರೋಚಕವಾಗಿ ಜಯ ಸಾಧಿಸಿರುವ ತಮಿಳ್ ತಲೈವಾಸ್ ತಂಡ ಗೆಲುವಿನ ಅಭಿಯಾನವನ್ನು ಮುಂದುವರೆಸುವ ಉತ್ಸಾಹದಲ್ಲಿದೆ.
ಪಾಯಿಂಟ್ ಪಟ್ಟಿಯಲ್ಲಿ 4 ಪಂದ್ಯಗಳಲ್ಲಿ 2 ಪಂದ್ಯಗಳಲ್ಲಿ ಗೆದ್ದು 2 ಪಂದ್ಯಗಳಲ್ಲಿ ಸೋಲನ್ನಪ್ಪಿರುವ ಬೆಂಗಳೂರು ಬುಲ್ಸ್ 11 ಅಂಕಗಳೊಂದಿಗೆ 7ನೇ ಸ್ಥಾನದಲ್ಲಿದೆ. ಇನ್ನು 4 ಪಂದ್ಯಗಳಲ್ಲಿ 2 ಪಂದ್ಯ ಸೋತು, ಒಂದರಲ್ಲಿ ಗೆದ್ದು, ಒಂದು ಪಂದ್ಯವನ್ನು ಡ್ರಾ ಮಾಡಿಕೊಂಡಿರುವ ತಮಿಳ್ ತಲೈವಾಸ್ 10 ಅಂಕಗಳೊಂದಿಗೆ 8ನೇ ಸ್ಥಾನದಲ್ಲಿದೆ.

ಪ್ರೊ ಕಬಡ್ಡಿ ಲೀಗ್‌ನಲ್ಲಿ ಅಂಕ ಹಂಚಿಕೆ ವಿಧಾನ
ಪ್ರೊ ಕಬಡ್ಡಿ ಲೀಗ್ (PKL) ಅಂಕಗಳನ್ನು ಸರಳ ಸ್ವರೂಪದಲ್ಲಿ ಹಂಚಿಕೆ ಮಾಡಲಾಗುತ್ತದೆ. ಪ್ರತಿ ಗೆಲುವಿಗೆ ತಂಡಕ್ಕೆ 5 ಅಂಕಗಳು ಸಿಗುತ್ತವೆ. ಟೈ ಮಾಡಿಕೊಂಡರೆ ಎರಡೂ ತಂಡಗಳಿಗೆ ತಲಾ 3 ಅಂಕಗಳನ್ನು ಹಂಚಲಾಗುತ್ತದೆ. 7 ಅಥವಾ ಅದಕ್ಕಿಂತ ಕಡಿಮೆ ಪಾಯಿಂಟ್‌ಗಳ ಅಂತರದಲ್ಲಿ ಸೋತರೆ ಆ ತಂಡಕ್ಕೆ 1 ಅಂಕ ನೀಡಲಾಗುತ್ತದೆ. 7 ಕ್ಕಿಂತ ಹೆಚ್ಚಿನ ಪಾಯಿಂಟ್ ಅಂತರದಲ್ಲಿ ಸೋತರೆ ತಂಡಕ್ಕೆ ಯಾವುದೇ ಅಂಕ ಸಿಗುವುದಿಲ್ಲ.
ಲೀಗ್ ಕೊನೆಯ ಹಂತದಲ್ಲಿ ಅಂಕ ಪಟ್ಟಿಯಲ್ಲಿ ಅಗ್ರ 6 ತಂಡಗಳು ಪ್ಲೇ ಆಫ್ ಹಂತಕ್ಕೆ ಪ್ರವೇಶ ಪಡೆಯುತ್ತವೆ. ಪ್ರೋ ಕಬಡ್ಡಿ ಲೀಗ್ 9ನೇ ಸೀಸನ್‌ನಲ್ಲಿ ಒಟ್ಟು 12 ತಂಡಗಳು ಸ್ಪರ್ಧಿಸುತ್ತಿವೆ. ದಬಾಂಗ್ ಡೆಲ್ಲಿ ಕಳೆದ ಬಾರಿ ಪ್ರೊ ಕಬಡ್ಡಿ ಲೀಗ್‌ನ ಚಾಂಪಿಯನ್ ಆಗಿತ್ತು.

ಅಗ್ರಸ್ಥಾನದಲ್ಲಿರುವ ದಬಾಂಗ್ ಡೆಲ್ಲಿ
ಕಳೆದ ಬಾರಿ ಚಾಂಪಿಯನ್ ಆಗಿದ್ದ ದಬಾಂಗ್ ಡೆಲ್ಲಿ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಇದುವರೆಗೂ ಐದು ಪಂದ್ಯಗಳನ್ನಾಡಿರುವ ಡೆಲ್ಲಿ, ಎಲ್ಲಾ ಪಂದ್ಯಗಳಲ್ಲಿಯೂ ಗೆಲುವು ಸಾಧಿಸಿದೆ. ಹರ್ಯಾಣ ಸ್ಟೀಲರ್ಸ್ ವಿರುದ್ಧದ 5ನೇ ಪಂದ್ಯದಲ್ಲಿ 38-36 ಅಂಕಗಳಿಂದ ಗೆಲುವು ಸಾಧಿಸಿದೆ.
ಇದುವರೆಗೂ ಆಡಿರುವ ಐದು ಪಂದ್ಯಗಳಲ್ಲಿ ನಾಲ್ಕು ಜಯ ಮತ್ತು ಒಂದು ಸೋಲಿನ ಮೂಲಕ ಜೈಪುರ ಪಿಂಕ್ ಪ್ಯಾಂಥರ್ಸ್ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.
ಐದು ಪಂದ್ಯಗಳಲ್ಲಿ ಮೂರು ಜಯ ಕಂಡಿರುವ ಬೆಂಗಾಲ್ ವಾರಿಯರ್ಸ್ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಆಡಿರುವ 4 ಪಂದ್ಯಗಳಲ್ಲಿ 2 ಜಯ ಸಾಧಿಸಿರುವ ಯುಪಿ ಯೋಧಾಸ್ ನಾಲ್ಕನೇ ಸ್ಥಾನದಲ್ಲಿದೆ. 4 ಪಂದ್ಯಗಳಲ್ಲಿ 2 ಪಂದ್ಯಗಳನ್ನು ಹರ್ಯಾಣ ಸ್ಟೀಲರ್ಸ್ ಮತ್ತು ಯು ಮುಂಬಾ 44 ಮತ್ತು 5ನೇ ಸ್ಥಾನದಲ್ಲಿದೆ.