ಬುಧವಾರ, ಫೆಬ್ರವರಿ 28ರಂದು ಹೈದರಾಬಾದ್‌ನ ಜಿಎಂಸಿ ಬಾಲಯೋಗಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ನಡೆದ 2024ರ ಪ್ರೊ ಕಬಡ್ಡಿ ಲೀಗ್ (ಪಿಕೆಎಲ್)ನ 10ನೇ ಆವೃತ್ತಿಯ 2ನೇ ಸೆಮಿಫೈನಲ್ ಪಂದ್ಯದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ ವಿರುದ್ಧ 31-27 ಅಂಕಗಳ ಅಂತರದಿಂದ ಗೆದ್ದು ಬೀಗಿದ ಹರಿಯಾಣ ಸ್ಟೀಲರ್ಸ್ ಎರಡನೇ ಫೈನಲಿಸ್ಟ್ ಆದರು.
ಈ ಮೂಲಕ ಮೊದಲ ಸೆಮಿಫೈನಲ್ ವಿಜೇತ ಪುಣೇರಿ ಪಲ್ಟಾನ್ ತಂಡದ ವಿರುದ್ಧ ಶುಕ್ರವಾರ, ಮಾರ್ಚ್ 1ರಂದು ಹರಿಯಾಣ ಸ್ಟೀಲರ್ಸ್ ತಂಡವು ಫೈನಲ್‌ನಲ್ಲಿ ಪ್ರಶಸ್ತಿಗಾಗಿ ಹಣಾಹಣಿ ನಡೆಸಲಿದೆ. ಪ್ರೊ ಕಬಡ್ಡಿ ಲೀಗ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಫೈನಲ್‌ಗೆ ಪ್ರವೇಶಿಸಿದೆ.

ಇದೇ ವೇಳೆ ಟ್ಯಾಕಲ್‌ನಲ್ಲಿ 4 ಅಂಕಗಳ ಕಾಣಿಕೆ ನೀಡಿದ ಆಶೀಶ್, ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಆರಂಭದಿಂದಲೂ ಮುನ್ನಡೆ ಕಾಯ್ದುಕೊಂಡಿದ್ದ ಹರಿಯಾಣ ಸ್ಟೀಲರ್ಸ್, ಕೊನೆಯವರೆಗೂ ಆಟದ ಮೇಲೆ ಬಿಗಿ ಹಿಡಿತ ಸಾಧಿಸಿತು. ಹರಿಯಾಣ ಸ್ಟೀಲರ್ಸ್ ತಂಡದ ಅದ್ಭುತ ಆಟದ ಎದುರು ಸೋತ, ಜೈಪುರ ಪಿಂಕ್ ಪ್ಯಾಂಥರ್ಸ್ ತಮ್ಮ ಸತತ 2ನೇ ಬಾರಿಗೆ ಫೈನಲ್ ಪ್ರವೇಶಿಸಲು ವಿಫಲವಾಯಿತು.
ಅರ್ಜುನ್ ದೇಶವಾಲ್ 14 ಅಂಕ, ರೆಜಾ ಮಿರಬಗೇರಿ 4, ಭವಾನಿ 3 ಅಂಕ ಪಡೆದಿದರು. ಆದರೆ ಉಳಿದ ಆಟಗಾರರು ನಿರೀಕ್ಷಿತ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ.
ಆರಂಭದಿಂದಲೇ ಹರಿಯಾಣ ಸ್ಟೀಲರ್ಸ್ ಆಕ್ರಮಣಕಾರಿ ಆಟಕ್ಕೆ ಇಳಿದಿತ್ತು, ಹೀಗಾಗಿ 13-7 ಅಂಕಗಳಿಂದ ಮುನ್ನಡೆಯಲ್ಲಿತ್ತು. ಈ ವೇಳೆ ಜೈಪುರ ಪಿಂಕ್ ಪ್ಯಾಂಥರ್ಸ್ ಆಲೌಟ್ ಆಯಿತು. ಎದುರಾಳಿ ತಂಡಕ್ಕೆ ಪೈಪೋಟಿ ನೀಡಿದರೂ, ಆ ಬಳಿಕ ಮುನ್ನಡೆ ಕಾಯ್ದುಕೊಳ್ಳಲು ಸಾಧ್ಯವಾಗಲೇ ಇಲ್ಲ. ಟೂರ್ನಿಯುದ್ದಕ್ಕೂ ಉತ್ತಮ ಪ್ರದರ್ಶನ ನೀಡಿದ ಜೈಪುರ ಪಿಂಕ್ ಪ್ಯಾಂಥರ್ಸ್ ನಿರ್ಣಾಯಕ ಸೆಮಿಫೈನಲ್ನಲ್ಲಿ ಎಡವಿತು.
ಫೈನಲ್ ಪ್ರವೇಶಿಸಲು ಹರಿಯಾಣ ಸ್ಟೀಲರ್ಸ್ ತಂಡವು ಲೀಗ್ ಹಂತದಲ್ಲಿ ಆಡಿದ 22 ಪಂದ್ಯಗಳಿಂದ 70 ಅಂಕ ಗಳಿಸಿತು. ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದ ಹರಿಯಾಣ, 2ನೇ ಎಲಿಮಿನೇಟರ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡದ ವಿರುದ್ಧ 25-42 ಅಂಕಗಳಿಂದ ಗೆದ್ದು ಸೆಮಿಫೈನಲ್ ಪ್ರವೇಶಿಸಿತ್ತು.
ಇದೀಗ ಹರಿಯಾಣ ಸ್ಟೀಲರ್ಸ್ ತಂಡವು ಫೈನಲ್‌ನಲ್ಲಿ ಪುಣೇರಿ ಪಲ್ಟಾನ್ ತಂಡವನ್ನು ಎದುರಿಸಲಿದೆ. ಫೈನಲ್ ಪಂದ್ಯವು ಮಾರ್ಚ್ 1ರಂದು ಹೈದರಾಬಾದ್‌ನ ಹೈದರಾಬಾದ್‌ನ ಗಚ್ಚಿಬೋಲಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ನಡೆಯಲಿದೆ.