
ಪಂಚಕುಲ, ಡಿಸೆಂಬರ್ 16: ಹರ್ಯಾಣದ ಪಂಚಕುಲದಲ್ಲಿರುವ ತೌ ದೇವಿಲಾಲ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ಶನಿವಾರ (ಡಿಸೆಂಬರ್ 15) ನಡೆದ ಪ್ರೊ ಕಬಡ್ಡಿ ಲೀಗ್ ಪಂದ್ಯ ಅಪರೂಪದ ಫಲಿತಾಂಶಕ್ಕಾಗಿ ಗಮನ ಸೆಳೆಯಿತು. ಯಾಕೆಂದರೆ ಈ ದಿನ ನಡೆದ ಎರಡೂ ಪಂದ್ಯಗಳ ಫಲಿತಾಂಶ ಸಮಬಲ ಎನಿಸಿದವು.
ಮೊದಲ ಪಂದ್ಯದಲ್ಲಿ ಯುಪಿ ಯೋಧಾ ಮತ್ತು ತಮಿಳ್ ತಲೈವಾಸ್ ಮುಖಾಮುಖಿಯಾಗಿತ್ತು. ಆದರೆ ಎರಡೂ ತಂಡಗಳಿಂದಲೂ ಫಲಿತಾಂಶವನ್ನು ತಮ್ಮೆಡೆಗೆ ತಿರುಗಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಫಲಿತಾಂಶ ಕೊನೆಗೆ 25-25ರಿಂದ ಸಮಬಲ ಅನ್ನಿಸಿಕೊಂಡಿತು.
ಅನಂತರ ಜೈಪುರ್ ಪಿಂಕ್ ಪ್ಯಾಂಥರ್ಸ್ ಮತ್ತು ಯು ಮುಂಬಾ ನಡುವಿನ ಕಾದಾಟದ ಕತೆಯೂ ಇದೆ. ಯು ಮುಂಬಾ ಪರ ಸಿದ್ಧಾರ್ಥ್ ದೇಸಾಯ್ ಭರ್ಜರಿ 14 ಅಂಕ, ಜೈಪರ್ ಪರ ದೀಪಕ್ ನಿವಾಸ್ ಹೂಡಾ 13 ಅಂಕ ಸೇರಿಸಿ ಪಂದ್ಯ ಜಿದ್ದಾ ಜಿದ್ದಿಗೆ ತಿರುಗಲು ಕಾರಣವಾದರು. ಆದರೂ ಪಂದ್ಯ 35-35ರ ಸಮಬಲದೊಂದಿಗೆ ಸಮಾಪ್ತಿಯಾತ್ತು.
ಅಂತೂ ಎರಡೂ ಪಂದ್ಯಗಳನ್ನು ನೋಡುತ್ತಾ ಕೂತವರು ಕೊನೆಯವರೆಗೂ ಬಾಯಗಲಿಸಿ ಕೂತಿದ್ದೇ ಬಂತು. ಫಲಿತಾಂಶ ಆಚೂ ಅಲ್ಲ-ಈಚೂ ಇಲ್ಲ ಅನ್ನಿಸಿತು. ಆದರೆ ಎರಡೂ ಪಂದ್ಯಗಳೂ ಕ್ರೀಡಾಭಿಮಾನಿಗಳನ್ನು ಮನಪೂರ್ತಿ ರಂಜಿಸಿದ್ದು ಸುಳ್ಳಲ್ಲ.