
ಪಾಟ್ನಾ, ಆಗಸ್ಟ್ 3: ಬಿಹಾರದ ಪಾಟ್ನಾದಲ್ಲಿರುವ ಪಾಟಲೀಪುತ್ರ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ಶನಿವಾರ (ಆಗಸ್ಟ್ 3) ನಡೆದ ಪ್ರೊ ಕಬಡ್ಡಿ ಲೀಗ್ 24ನೇ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ ವಿರುದ್ಧ ಬೆಂಗಳೂರು ಬುಲ್ಸ್ 43-42ರ ರೋಚಕ ಗೆಲುವನ್ನಾಚರಿಸಿದೆ. ಪವನ್ ಕುಮಾರ್ ಶೆಹ್ರಾವತ್ ವಿರೋಚಿತ ಆಟದ ನೆರವಿನಿಂದ ಬೆಂಗಳೂರು ಸೋಲುವ ಪಂದ್ಯವನ್ನು ಗೆದ್ದುಕೊಂಡಿತು.
ಪಂದ್ಯಾರಂಭದಲ್ಲಿ ಬೆಂಗಾಲ್ ವಾರಿಯರ್ಸ್ ಭಾರೀ ಮುನ್ನಡೆಯಲ್ಲಿತ್ತು. ಕೆ ಪ್ರಪಂಜನ್ 12 (8 ರೇಡ್, 4 ಬೋನಸ್), ಮಣೀಂದರ್ ಸಿಂಗ್ (10 ರೇಡ್, 1 ಬೋಸನ್), ಇಸ್ಮಾಯಿಲ್ ನಬಿಬಖ್ಷ್ 8, ವೀರಜ್ ವಿಷ್ಣು 2 ಪಾಯಿಂಟ್ ಸೇರಿಸಿ ಹಾಲಿ ಚಾಂಪಿಯನ್ ಬೆಂಗಳೂರು ಬುಲ್ಸ್‌ಗೆ ಸೋಲಿನ ಭೀತಿಯೊಡ್ಡಿದ್ದರು.
ಪಂದ್ಯದ ದ್ವಿತೀಯಾರ್ಧದ ಕೊನೇ ಕ್ಷಣದಲ್ಲಿ ಬೆಂಗಳೂರು ಅಂಕಗಳನ್ನು ಕದಿಯುತ್ತ ಎದುರಾಳಿಯನ್ನು ಕುಗ್ಗಿಸುತ್ತಾ ಬಂತು. ಬುಲ್ಸ್ ಗೆಲುವಿನ ಹೊರೆ ಹೊತ್ತ ಪವನ್ 26 ರೇಡಿಂಗ್, 3 ಬೋನಸ್ ಸೇರಿ ಬರೋಬ್ಬರಿ 29 ಅಂಕಗಳನ್ನು ಸೇರಿಸಿ ತಂಡದ ಗೆಲುವನ್ನು ಬರೆದರು.
ಪವನ್ ಜೊತೆಗೆ ಸೌರಭ್ ನಂದಲ್ 6 ಟ್ಯಾಕ್ಲ್, ಅಮಿತ್ ಶಿಯೋರಾನ್ 2 ಟ್ಯಾಕ್ಲ್, ರೋಹಿತ್ ಕುಮಾರ್ 1 ಬೋಸನ್, ಮೋಹಿತ್ ಶೆಹ್ರಾವತ್ 1 ರೇಡ್ ಪಾಯಿಂಟ್ ಸೇರಿಸಿ ತಂಡವನ್ನು ಬೆಂಬಲಿಸಿದರು. ಬೆಂಗಳೂರು ಬುಲ್ಸ್ ಈಗ 4ರಲ್ಲಿ 3 ಗೆಲುವುಗಳೊಂದಿಗೆ 15 ಅಂಕ ಗಳಿಸಿ, ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ.