ಪ್ರೊ ಕಬಡ್ಡಿ 2019: ಯುಪಿ ಯೋಧರೆದು ಮುಗ್ಗರಿಸಿದ ಬೆಂಗಳೂರು ಬುಲ್ಸ್

ಅಹಮದಾಬಾದ್, ಆಗಸ್ಟ್ 11: ಗೆಲುವಿಗಾಗಿ ಸ್ಟಾರ್ ರೇಡರ್ ಪವನ್ ಕುಮಾರ್ ಸೆಹ್ರಾವತ್ ಅವರನ್ನೇ ನೆಚ್ಚಿಕೊಂಡಿರುವುದಕ್ಕೆ ಭಾರಿ ಬೆಲೆ ತೆತ್ತ ಹಾಲಿ ಚಾಂಪಿಯನ್ಸ್ ಬೆಂಗಳೂರು ಬುಲ್ಸ್ ತಂಡ ಯುಪಿ ಯೋಧಾ ವಿರುದ್ಧದ ಪ್ರೊಕಬಡ್ಡಿ ಲೀಗ್ 2019ರ ಟೂರ್ನಿಯ ಲೀಗ್ ಪಂದ್ಯದಲ್ಲಿ ಮುಗ್ಗರಿಸಿ ಸತತ 2ನೇ ಸೋಲಿನ ಆಘಾತಕ್ಕೊಳಗಾಗಿದೆ.
ಇಲ್ಲಿನ ಅರೆನಾ ಬೈ ಟ್ರಾನ್ಸ್‌ಸ್ಟೇಡಿಯಾ ಒಳಾಂಗಣ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತಂಡ 33-35 ಅಂಕಗಳಿಂದ ಯುಪಿ ಯೋಧಾ ತಂಡದೆದುರು ಸೋಲೊಪ್ಪಿಕೊಂಡಿತು. ಇದು ಪ್ರಸಕ್ತ ಲೀಗ್‌ನಲ್ಲಿ ಬುಲ್ಸ್ ಪಡೆ ಅನುಭವಿಸಿದ ಸತತ ಎರಡನೇ ಹಾಗೂ 7ಒಟ್ಟಾರೆ 3ನೇ ಸೋಲಾಗಿದೆ.
ಕಡಿಮೆ ಅಂತರದಲ್ಲಿ ಸೋತು ಒಂದಂಕ ಪಡೆಯುವಲ್ಲಿ ಯಶಸ್ವಿಯಾದ ಬೆಂಗಳೂರು ಬುಲ್ಸ್ , ಒಟ್ಟಾರೆ 7 ಪಂದ್ಯಗಳಿಂದ 22 ಅಂಕಗಳನ್ನು ಗಳಿಸಿ ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನ ಕಾಯ್ದುಕೊಂಡಿದೆ. 6 ಪಂದ್ಯಗಳನ್ನಾಡಿ 26 ಅಂಕಗಳನ್ನು ಗಳಿಸಿರುವ ದಬಾಂಗ್ ಡೆಲ್ಲಿ ತಂಡ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.
ಪಂದ್ಯದಲ್ಲಿ ಬೆಂಗಳೂರು ತಂಡದ ಪರ ನಾಯಕ ರೋಹಿತ್ ಕುಮಾರ್ ವೈಫಲ್ಯವೇ ಸೋಲಿಗೆ ಪ್ರಮುಖ ಕಾರಣವಾಯಿತು. ಲೀಗ್‌ನ ಅತ್ಯುತ್ತಮ ರೇಡರ್‌ಗಳಲ್ಲಿ ಒಬ್ಬರಾದ ರೋಹಿತ್ ಸ್ಥಿರ ಪ್ರದರ್ಶನ ಕಾಯ್ದುಕೊಳ್ಳುವಲ್ಲಿ ವಿಫಲರಾಗುತ್ತಿದ್ದು, ಯೋಧಾ ವಿರುದ್ಧ ಕೇವಲ 2 ಅಂಕಗಳನ್ನು ಮಾತ್ರವೇ ಗಳಿಸಿದರು. ಆದರೆ, ಯುವ ರೇಡರ್ ಪವನ್ ಕುಮಾರ್ ಸೆಹ್ರಾವತ್ ತಮ್ಮ ಭರ್ಜರಿ ಪ್ರದರ್ಶನ ಮುಂದುವರಿಸಿ 6 ರೇಡ್, 6 ಬೋನಸ್ ಹಾಗೂ ಮತ್ತೆರಡು ಟ್ಯಾಕಲ್ ಅಂಕಗಳೊಂದಿಗೆ ಒಟ್ಟಾರೆ 14 ಅಂಕಗಳ ಕಾಣಿಕೆ ನೀಡಿ ತಂಡವನ್ನು ಜಯದ ದಡ ಮುಟ್ಟಿಸುವ ಪ್ರಯತ್ನ ಮಾಡಿದರು.
ಮತ್ತೊಂದೆಡೆ ಸಂಘಟಿತ ಹೋರಾಟ ನಡೆಸಿದ ಯುಪಿ ಯೋಧಾ ಪರ ರೇಡರ್‌ಗಳಾದ ಶ್ರೀಕಾಂತ್ ಜಾಧವ್ ಮತ್ತು ಮೋನು ಗೋಯತ್ ತಲಾ 7 ಮತ್ತು 6 ಅಂಕಗಳ ಕಾಣಿಕೆ ನೀಡಿದರೆ, ಡಿಫೆನ್ಸ್‌ನಲ್ಲಿ ಸುಮಿತ್ (5), ಅಮಿತ್ (3), ಆಶು ಸಿಂಗ್ (2) ಮತ್ತು ನಿತೀಶ್ ಕುಮಾರ್ (2) ಅವರ ರಕ್ಷಣೆಯಿಂದ ಬುಲ್ಸ್ ರೇಡರ್ಗಳನ್ನು ಬಂಧಿಸುವಲ್ಲಿ ಯೋಧಾ ಪಡೆ ಯಶಸ್ವಿಯಾಯಿತು.
ಬೆಂಗಳೂರು ಬುಲ್ಸ್ ಶನಿವಾರ ನಡೆಯಲಿರುವ ಮೊದಲ ಪಂದ್ಯದಲ್ಲಿ ತಮಿಳ್ ತಲೈವಾಸ್ ವಿರುದ್ಧ ಪೈಪೋಟಿ ನಡೆಸಲಿದೆ. ತಮಿಳ್ ತಲೈವಾಸ್ ತಂಡ ಆಡಿದ 6 ಪಂದ್ಯಗಳಲ್ಲಿ 3 ಜಯ, 2 ಸೋಲು ಮತ್ತು 1 ಡ್ರಾ ಫಲಿತಾಂಶದೊಂದಿಗೆ 20 ಅಂಕಗಳನ್ನು ಗಳಿಸಿ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications