ಪ್ರೊ ಕಬಡ್ಡಿ 2019: ತಲೈವಾಸ್ ಎದುರು ಪಿಂಕ್ ಪ್ಯಾಂಥರ್ಸ್‌ಗೆ ರೋಚಕ ಜಯ

ಚೆನ್ನೈ, ಆಗಸ್ಟ್ 19: ಸಮಬಲದ ಹೋರಾಟದಿಂದ ಕೂಡಿದ್ದ ಪಂದ್ಯದಲ್ಲಿ ಒತ್ತಡ ನಿಭಾಯಿಸಿದ ಚೊಚ್ಚಲ ಆವೃತ್ತಿಯ ಚಾಂಪಿಯನ್ಸ್ ಜೈಪುರ್ ಪಿಂಕ್ ಪ್ಯಾಂಥರ್ಸ್ ತಂಡ, ಪ್ರಸಕ್ತ ಸಾಲಿನ ಪ್ರೊ ಕಬಡ್ಡಿ ಲೀಗ್‌ನಲ್ಲಿ ಆಡಿದ ತನ್ನ 9ನೇ ಲೀಗ್ ಪಂದ್ಯದಲ್ಲಿ ಆತಿಥೇಯ ತಮಿಳ್ ತಲೈವಾಸ್ ಎದುರು ಮೇಲುಗೈ ಸಾಧಿಸಿತು.
ಇಲ್ಲಿನ ಜವಾಹರಲಾಲ್ ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಎರಡನೇ ಪಂದ್ಯದಲ್ಲಿ ಅನುಭವ ಮೆರೆದ ಮಾಜಿ ಚಾಂಪಿಯನ್ಸ್ ಪಿಂಕ್ ಪ್ಯಾಂಥರ್ಸ್, 28-26 ಅಂಕಗಳಿಂದ ಸ್ಟಾರ್ ಆಟಗಾರರ ದಂಡನ್ನೇ ಹೊಂದಿರುವ ತಮಿಲ್ ತಲೈವಾಸ್‌ಗೆ ಸೋಲುಣಿಸಿ ಅಂಕಪಟ್ಟಿಯಲ್ಲಿನ ಅಗ್ರಸ್ಥಾನವನ್ನು ಕಾಯ್ದುಕೊಂಡಿತು.
ಪ್ಯಾಂಥರ್ಸ್ ಪರ ಗಮನ ಸೆಳೆದ ರೇಡರ್ ನೀಲೇಶ್ ಸಾಲುಂಕೆ ಬೋನಸ್‌ಗಳಲ್ಲಿಯೇ 6 ಅಂಕಗಳನ್ನು ಸಂಪಾದಿಸಿ ಒಟ್ಟು 7 ಅಂಕಗಳ ಕೊಡುಗೆ ನೀಡಿದರು. ಅವರಿಗೆ ನಾಯಕ ದೀಪಕ್ ನಿವಾಸ್ ಹೂಡ (2) ಮತ್ತು ದೀಪಕ್ ನರ್ವಾಲ್ (2) ಅವರಿಂದ ಉತ್ತಮ ಸಾಥ್ ಲಭ್ಯವಾಯಿತು. ಜೊತೆಗೆ ಡಿಫೆಂಡರ್‌ಗಳಾದ ಸಂದೀಪ್ ಧುಲ್ (2) ಮತ್ತು ವಿಶಾಲ್ (3) ಉತ್ತಮ ಕೊಡುಗೆ ಸಲ್ಲಿಸಿದರು.
ಮತ್ತೊಂದೆಡೆ ತವರು ನೆಲದಲ್ಲಿ ಗೆಲುವಿನ ಬರ ಎದುರಿಸುತ್ತಿರುವ ತಮಿಳ್ ತಲೈವಾಸ್ ಪರ, ಸ್ಟಾರ್ ರೇಡರ್ ರಾಹುಲ್ ಚೌಧರಿ ಮತ್ತು ನಾಯಕ ಅಜಯ್ ಠಾಕೂರ್ ತಲಾ 6 ಅಂಕಗಳೊಂದಿಗೆ ಇನ್ನಿಲ್ಲದ ಪ್ರಯತ್ನ ನಡೆಸಿದರೂ ಸೋಲು ತಪ್ಪಿಸಲು ಸಾಧ್ಯವಾಗಲಿಲ್ಲ. ಡಿಫೆನ್ಸ್‌ನಲ್ಲಿ ವಿನೀತ್ ಶರ್ಮಾ (5) ಮತ್ತು ಮೋಹಿತ್ ಚಿಲ್ಲರ್ (3) ಅವರ ಹೋರಾಟ ಕೂಡ ವ್ಯರ್ಥವಾಯಿತು.
ಪ್ಯಾಂಥರ್ಸ್ ಪಡೆ ಆಡಿದ 9 ಪಂದ್ಯಗಳಿಂದ ಒಟ್ಟು 36 ಅಂಕಗಳನ್ನು ಗಳಿಸಿದ್ದು, ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲೇ ಮುಂದುವರಿದಿದೆ. ತಲೈವಾಸ್ ತಂಡ ಅಷ್ಟೇ ಪಂದ್ಯಗಳಿಂದ 24 ಅಂಕಗಳನ್ನು ಗಳಿಸಿ 7ನೇ ಸ್ಥಾನದಲ್ಲಿ ಉಳಿದಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications